ಭಾನುವಾರ, ಸೆಪ್ಟೆಂಬರ್ 19, 2021
25 °C
; ಆಕ್ರೋಶಗೊಂಡ ರೈತರಿಂದ ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ

ಕಾಡಾನೆಗಳ ದಾಳಿಗೆ ಇಬ್ಬರು ಬಲಿ: ಮಾಗಡಿ, ಕನಕಪುರದಲ್ಲಿ ಪ್ರತ್ಯೇಕ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಅಗಲಕೋಟೆ ಹ್ಯಾಂಡ್‌ ಪೋಸ್ಟ್‌ ಮತ್ತು ಕೆರೆಯ ನಡುವಿನ ಹೊಲದಲ್ಲಿ ಬುಧವಾರ ಮಧ್ಯಾಹ್ನ 3.15ರ ಸಮಯದಲ್ಲಿ ಕಾಡಾನೆ ತುಳಿದು ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ದೋಣಕುಪ್ಪೆ ಗ್ರಾಮದ ಗೌರಮ್ಮ ಮಗ ಗಂಗಾಧರಯ್ಯ(46) ಮೃತರು. ‘ಕಾಡಾನೆ ಬನ್ನೇರುಘಟ್ಟದಿಂದ ತಾವರೆಕೆರೆ ಮಾರ್ಗವಾಗಿ ಸಾವನದುರ್ಗದ ಮೂಲಕ ಅಗಲಕೋಟೆಯತ್ತ ಬಂದಿದೆ. ದೋಣಕುಪ್ಪೆ ಬಳಿ ಗುಂಡುತೋಪಿನಲ್ಲಿ ಇದ್ದ ಕಾಡಾನೆಯನ್ನು ಓಡಿಸಲು

ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ತೊಡಗಿದ್ದರು. ಗಂಗಾಧರಯ್ಯ

ಆನೆಯನ್ನು ನೋಡಲು ಪದೇ ಪದೇ ಅತ್ತ ಓಡಾಡುತ್ತಿದ್ದ. ಆತನನ್ನು ಸಿಬ್ಬಂದಿ ಗದರಿಸಿ ದೂರ ಕಳುಹಿಸುತ್ತಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ಸಿಬ್ಬಂದಿಯಿಂದ ಊಟದ ಪಾಕೇಟ್ ಪಡೆದ ಗಂಗಾಧರಯ್ಯ ಸಿಬ್ಬಂದಿ ಕಣ್ಣು ತಪ್ಪಿಸಿ ಕಾಡಾನೆಯತ್ತ ತೆರಳಿದ್ದಾನೆ. ಆಗ ಕಾಡಾನೆ ತುಳಿದಿದೆ’ ಎಂದು ಪಿಎಸ್ಐ ಶ್ರೀಕಾಂತ್ ತಿಳಿಸಿದರು.

ಕಾಡಾನೆ ಬಂದಿರುವ ಸುದ್ದಿ ತಿಳಿದು ಗ್ರಾಮಸ್ಥರು ಗುಂಪುಗೂಡಿ ಕೂಗಿದ್ದರಿಂದ ಗಾಬರಿಯಾದ ಆನೆ ತೋಟದ ಬೇಲಿ ಮುರಿದು ಕೊಂಡು ಓಡಲಾರಂಭಿಸಿತು. ಆನೆಗೆ ಅನ್ನ ಕೊಡಲು ಗಂಗಾಧರಯ್ಯ ಹೋಗಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.

‘ಗಂಗಾಧರಯ್ಯ ಅವರಿಗೆ ಮಗ ಮತ್ತು ಮಗಳು ಇದ್ದಾರೆ. ತಾಯಿ ಗೌರಮ್ಮ, ಮಗ ಮತ್ತು ಮೊಮ್ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದಾರೆ. ತಾಯಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಗ್ರಾಮದ ಮುಖಂಡ ವಿನೋದ್‌, ರವಿ ಮನವಿ ಮಾಡಿದರು.

ಡಿವೈಎಸ್ಪಿ ಓಂಪ್ರಕಾಶ್, ಅರಣ್ಯ ಇಲಾಖೆಯ ಎಸಿಎಫ್ ಸುರೇಂದ್ರ, ಸರ್ಕಲ್ ಇನ್‌ಸ್ಪೆಕ್ಟರ್ ರವಿ.ಬಿ, ವಲಯ ಅರಣ್ಯ ಅಧಿಕಾರಿ ಜಗದೀಶ್, ಪಿಎಸ್ಐ ಶ್ರೀಕಾಂತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಮನವಿ: ಅಗಲಕೋಟೆ, ಮರಳದೇವನ ಪುರದ ಮೂಲಕ ಸಾವನದುರ್ಗದ ಮೂಲಕ ಬನ್ನೇರುಘಟ್ಟಕ್ಕೆ ಕಾಡಾನೆ ಓಡಿಸುವ ಕಾರ್ಯಾಚರಣೆ ನಡೆದಿದೆ. ಸುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು. ಕಾಡಾನೆ ಕಂಡುಬಂದಲ್ಲಿ ಗದ್ದಲ ಮಾಡಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೊದಲ ಬಲಿ: ಪ್ರತಿವರ್ಷವೂ ತಾಲ್ಲೂಕಿನಲ್ಲಿ ಚಿರತೆ, ಕಾಡಾನೆಗಳಿಗೆ ರೈತರು ಬಲಿಯಾಗುವುದು ನಿರಂತರವಾಗಿ ಮುಂದುವರೆದಿದೆ. ವನ್ಯಮೃಗಗಳ ದಾಳಿಯಿಂದ ಜನ ಜಾನುವಾರುಗಳು ಬಲಿಯಾಗುತ್ತಲೆ ಇವೆ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ತಿಳಿಸಿದರು.

ಕಾಡಾನೆ ದಾಳಿಯಿಂದಾಗಿ ಮೃತಪಟ್ಟಿರುವ ಕೃಷಿ ಕೂಲಿ ಕಾರ್ಮಿಕನ ಕುಟುಂಬಕ್ಕೆ ಸರ್ಕಾರ ಕೂಡಲೆ ₹6 ಲಕ್ಷ ಪರಿಹಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತುಳಿದು ಸಾವು: ಕನಕಪುರ ತಾಲ್ಲೂಕಿನ ಚಿಕ್ಕಬೆಟ್ಟಳ್ಳಿ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಕಾಡಾನೆಯು ರೈತರೊಬ್ಬರ ಮೇಲೆ ದಾಳಿ ನಡೆಸಿ, ತುಳಿದು ಸಾಯಿಸಿದೆ.

ಚಿಕ್ಕಬೆಟ್ಟಳ್ಳಿ ಗ್ರಾಮದ ರೈತ ರುದ್ರೇಗೌಡ (55) ಮೃತರು. ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬುಧವಾರ ಬೆಳಿಗ್ಗೆ 6.30ರ ಸಮಯದಲ್ಲಿ ಗ್ರಾಮದ ಪಕ್ಕದಲ್ಲಿರುವ ತಮ್ಮ ಜಮೀನಿನ ಕಡೆ ಹೋಗುತ್ತಿದ್ದಾಗ ಕಾಡಾನೆಗಳು ದಾಳಿ ನಡೆಸಿವೆ.

ದಾಳಿ ವೇಳೆ ಅವರು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಗ್ರಾಮದಿಂದ ಕೆಂಪೇಗೌಡ ಮತ್ತು ಪ್ರಕಾಶ್‌ ಎಂಬುವರು ಅವರ ಸಹಾಯಕ್ಕೆ ಹೋಗಿದ್ದಾರೆ. ಮೂರು ಆನೆಗಳು ಇದ್ದುದರಿಂದ ಎರಡು ಆನೆಗಳು ಕೆಂಪೇಗೌಡ ಮತ್ತು ಪ್ರಕಾಶ್‌ ಅವರ ಮೇಲೆ ದಾಳಿಗೆ ಮುಂದಾಗಿದ್ದು ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ರುದ್ರೇಗೌಡ ಅವರ ಮೇಲೆ ಆನೆಗಳು ದಾಳಿ ನಡೆಸಿ, ತುಳಿದು, ಸೊಂಡಲಿನಿಂದ ಬಿಸಾಡಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ಪ್ರತ್ಯಕ್ಷದರ್ಶಿಯಾದ ಪ್ರಕಾಶ್‌ ತಿಳಿಸಿದ್ದಾರೆ.

ಘಟನೆಯ ಮಾಹಿತಿಯ ಕುಟುಂಬದವರಿಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲಾ ಘಟನಾ ಸ್ಥಳಕ್ಕೆ ತೆರಳಿದರು. ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು. ‘ನಮ್ಮ ಜಮೀನಿಗೆ ನಿಮ್ಮ ಕಾಡು ಪ್ರಾಣಿಗಳು ಬರುವುದು ಬೇಡ. ನಿಮ್ಮ ಅರಣ್ಯದೊಳಗೆ ನಾವು ಬರುವುದಿಲ್ಲ. ಕಾಡಾನೆಗಳು ಜಮೀನಿಗೆ ಬರದಂತೆ ತಡೆಗಟ್ಟಬೇಕು’ ಎಂದು ಒತ್ತಾಯಿಸಿದರು.

‘ಸೋಲಾರ್‌ ತಂತಿ ಬೇಲಿ ನಿರ್ಮಿಸಿ 5 ವರ್ಷವಾಗಿದ್ದು ಎಲ್ಲಾ ಹಾಳಾಗಿವೆ. ರೈಲ್ವೆ ಕಂಬಿಯನ್ನು ಅಳವಡಿಸುವುದಾಗಿ ಅರಣ್ಯ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ವರ್ಷದಲ್ಲಿ ಒಬ್ಬಿಬ್ಬರು ಆನೆದಾಳಿಗೆ ತುತ್ತಾಗಿ ಸಾವನಪ್ಪುತ್ತಿದ್ದಾರೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಕಾಡಾನೆ ಬರದಂತೆ ತಡೆಗಟ್ಟುವ ಸುಳ್ಳು ಭರವಸೆಯನ್ನು ನೀಡುತ್ತಲೆ ಬಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಡಾನೆಗಳು ಬರದಂತೆ ತಡೆಗಟ್ಟುವ ಕ್ರಮ ಕೈಗೊಳ್ಳುವ ನಿರ್ಧಾರ ಪ್ರಕಟಿಸುವವರೆಗೂ ಶವವನ್ನು ನಾವು ಇಲ್ಲಿಂದ ಎತ್ತಲು ಬಿಡುವುದಿಲ್ಲ’ ಎಂದು ರೈತರು ಹೇಳಿದರು. ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆ‌ರ್‌.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಎಂ.ಪುರುಷೋತ್ತಮ್‌ ಉಪಸ್ಥಿತರಿದ್ದರು.

₹7.5 ಲಕ್ಷ ಪರಿಹಾರ

ಬನ್ನೇರುಘಟ್ಟ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಕುಮಾರ್‌, ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿ ಪ್ರಶಾಂತ ಮಾತನಾಡಿ, ‘ಇಂತಹ ಅವಘಡ ಸಂಭವಿಸದಂತೆ ಮುಂದೆ ಕ್ರಮ ಕೈಗೊಳ್ಳಲಾಗುವುದು. ಚಿಕ್ಕಬೆಟ್ಟಳ್ಳಿ ಗ್ರಾಮದ ರೈತ ರುದ್ರೇಗೌಡ ಅವರ ಕುಟುಂಬಕ್ಕೆ ಸರ್ಕಾರದಿಂದ ₹7.5 ಲಕ್ಷ ಪರಿಹಾರ ನೀಡಿ, 5 ವರ್ಷ ತಿಂಗಳಿಗೆ ₹2 ಸಾವಿರ ಮಾಸಾಶನವನ್ನು ಮೃತರ ಪತ್ನಿಗೆ ನೀಡಲಾಗುತ್ತದೆ’ ಎಂದು ತಿಳಿಸಿದರು.

ಮೃತದೇಹವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ನೀಡಲಾಯಿತು. ಬುಧವಾರ ಸಂಜೆ ಅಂತ್ಯ ಸಂಸ್ಕಾರವನ್ನು ಗ್ರಾಮದಲ್ಲಿ ನೆರವೇರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.