ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆನೆಪದರ ಆದಾಯ ಮಿತಿ ನಿಗದಿಗೊಳಿಸಿ’

ತಳ ಮಟ್ಟದ ದಲಿತರಿಗೆ ಮೀಸಲಾತಿ ಲಾಭ ತಲುಪಲಿ: ಚಿ.ನಾ. ರಾಮು ಅಭಿಪ್ರಾಯ
Last Updated 7 ಜೂನ್ 2019, 13:23 IST
ಅಕ್ಷರ ಗಾತ್ರ

ರಾಮನಗರ: ‘ಮೀಸಲಾತಿ ಬಳಸಿಕೊಂಡು ಮೇಲೆ ಬಂದ ದಲಿತರು ತಮ್ಮದೇ ಜನಾಂಗದ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಿಲ್ಲ. ಇದಕ್ಕೆ ನ್ಯಾಯ ಒದಗಿಸಲು ಕೆನೆ ಪದರದಲ್ಲಿ ಆದಾಯ ಮಿತಿ ನಿಗದಿಗೊಳಿಸುವುದೇ ಏಕೈಕ ಮಾರ್ಗವಾಗಿದೆ’ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಿ.ನಾ. ರಾಮು ಹೇಳಿದರು.

ತಮ್ಮ ರಚನೆಯ 'ಬಲಿತ ದಲಿತರ ತುಳಿತ ನನ್ನ ಜನ ಅನಾಥ' ಕೃತಿಯ ಕುರಿತು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಕೆನೆಪದರದಲ್ಲಿ ಆದಾಯ ಮಿತಿಯನ್ನು ನಿಗದಿಗೊಳಿಸದಿದ್ದರೆ ಮೀಸಲಾತಿಯು ಮತ್ತಷ್ಟು ದುರ್ಬಳಕೆ ಮತ್ತು ದುರ್ಬಲಗೊಂಡು ಅಂಬೇಡ್ಕರ್ ಅವರು ಕಂಡ ಕನಸು ಕನಸಾಗಿಯೇ ಉಳಿಯಲಿದೆ. ಇದುವರೆಗೆ ಮೀಸಲಾತಿ ಪಡೆದು ಮೇಲೆ ಬಂದವರು ತಮ್ಮ ಕುಟುಂಬ ಪೋಷಣೆ ಮತ್ತು ಕುಟುಂಬಸ್ಥರಿಗೆ ಭದ್ರತೆ ಕಲ್ಪಿಸಲು ಮೀಸಲಾತಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು ಶೋಷಿತರಾಗಿರುವ ದಲಿತರು ಇಂದಿಗೂ ಸಹ ನೋವನ್ನು ಅನುಭವಿಸುತ್ತಿದ್ದಾರೆ’ ಎಂದರು.

‘ಮೀಸಲಾತಿಯು ಮೇಲ್ವರ್ಗದ ಜನರ ಕೈಯಲ್ಲಿ ಮಿತಿಯಾಗುತ್ತಿರುವುದರಿಂದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕುತ್ತಿಲ್ಲ. ಇದರಿಂದಾಗಿ ಸೌಲಭ್ಯಗಳು ಉಳ್ಳವರ ಪಾಪಾಗುತ್ತಿವೆ. 1850 ರಲ್ಲಿ ಸಾಹು ಮಹಾರಾಜ್ ಮತ್ತು ಬರೋಡಾ ಮಹಾರಾಜ್ ಅವರುಗಳು ಕಂಡಂತಹ ಮೀಸಲಾತಿಯ ಕನಸು ಈಡೇರಿಲ್ಲ’ ಎಂದು ತಿಳಿಸಿದರು.

‘ಮೇಲ್ವರ್ಗದ ಬಡವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ 10 ರಷ್ಟು ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಆದಾಯ ಮಿತಿಯನ್ನು ₨8 ಲಕ್ಷಕ್ಕೆ ನಿಗದಿ ಪಡಿಸಿರುವುದು ಸರಿಯಲ್ಲ. ಇದರಿಂದ ಮಾಸಿಕ ₨65 ಸಾವಿರ ವೇತನ ಪಡೆಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ವಾಸ್ತವಿಕವಾಗಿ ಆರ್ಥಿಕ ಹಿಂದುಳಿದವರು ಮತ್ತು ಬಡವರಿಗೆ ಅನ್ಯಾಯವಾಗುತ್ತಿದೆ. ಆದಾಯ ಮಿತಿಯನ್ನು ₨2 ಲಕ್ಷಕ್ಕೆ ನಿಗದಿಪಡಿಸುವಂತೆ ಪ್ರಧಾನಿಯವರಿಗೆ ಈಗಾಗಲೇ ಮನವಿ ಮಾಡಿದ್ದೇವೆ’ ಎಂದರು.

‘ಪ್ರತಿ ಹತ್ತು ವರ್ಷಕ್ಕೊಂದು ಬಾರಿ ಮೀಸಲಾತಿ ವಿಮರ್ಶೆಗೆ ಒಳಪಡಬೇಕೆಂಬ ಸಂವಿಧಾನಿಕ ನೀತಿಯನ್ವಯ ಮುಂದಿನ 2020 ರ ಜೂನ್ 20 ಕ್ಕೆ ಈಗಿರುವ ಮೀಸಲಾತಿ ನಿಯಮ ಕೊನೆಗೊಳ್ಳಲಿದೆ. ಆದ್ದರಿಂದ ಮುಂದಿನ ವರ್ಷದಿಂದ ಬರುವ ಹೊಸ ಮೀಸಲಾತಿಗೆ ಎಸ್ಸಿ, ಎಸ್ಟಿ ವರ್ಗಕ್ಕೆ ಕಡ್ಡಾಯ ಆದಾಯ ಮಿತಿಯ ನಿಯಮವನ್ನು ಮಾಡಬೇಕೆಂದು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದು ಜಾರಿಗೊಂಡಲ್ಲಿ ನಿಜವಾದ ಬಡವರು ಮತ್ತು ದಲಿತರಿಗೆ ಮೀಸಲಾತಿ ಸೌಲಭ್ಯ ದೊರಕಲಿದೆ’ ಎಂದರು.

‘ನಾನು ರಾಜಕಾರಣದಲ್ಲಿ ಮೀಸಲಾತಿ ಪಡೆದು ಅಧಿಕಾರ ಪಡೆದಲ್ಲಿ ನನ್ನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೀಸಲಾತಿಯ ಯಾವುದೆ ಸೌಲಭ್ಯಗಳನ್ನು ಪಡೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

‘ಇಂದು ಮೀಸಲಾತಿ ಪಡೆದ ದಲಿತರಿಂದಲೆ ದಲಿತರ ಮೇಲೆ ಶೋಷಣೆ ನಡೆಯುತ್ತಿದೆ. ಇದು ನಿಲ್ಲಬೇಕಾದರೆ ಒಮ್ಮೆ ಮೀಸಲಾತಿ ಪಡೆದವರು ಮತ್ತೆ ತಮ್ಮ ಕುಟುಂಬಕ್ಕೆ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬಾರದು. ಇದು ಆತ್ಮ ವಿಮರ್ಶೆಗೆ ಒಳಪಡಬೇಕು ಎಂದರು.

ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಸಿಂಗ್ರಯ್ಯ, ಉಪಾಧ್ಯಕ್ಷ ರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್, ದಲಿತ ಮುಖಂಡರಾದ ಸದಾನಂದ, ಶಿವಕುಮಾರ್ ಇದ್ದರು.

*
ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ನಾಲ್ಕು ಕೋಟಿ ಜನ ತಮ್ಮ ಗ್ಯಾಸ್‌ ಸಬ್ಸಿಡಿ ಕೈಬಿಟ್ಟಿದ್ದಾರೆ. ಅದರಂತೆ ಮೇಲ್ವರ್ಗದ ದಲಿತರು ಮೀಸಲಾತಿಯನ್ನುಬಿಟ್ಟುಕೊಡುವುದು ಒಳಿತು.
-ಚಿ.ನಾ. ರಾಮು, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT