ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪಾರಂಪರಿಕ ವೈದ್ಯ ಅಭಿವೃದ್ಧಿ ಮಂಡಳಿ' ಸ್ಥಾಪಿಸಿ

13ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದ ಸಮಾರೋಪ ಸಮಾರಂಭ
Last Updated 12 ಅಕ್ಟೋಬರ್ 2019, 12:37 IST
ಅಕ್ಷರ ಗಾತ್ರ

ರಾಮನಗರ: ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸಲು 'ಪಾರಂಪರಿಕ ವೈದ್ಯ ಅಭಿವೃದ್ಧಿ ಮಂಡಳಿ' ಸ್ಥಾಪಿಸಬೇಕು ಎಂದು ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಒತ್ತಾಯಿಸಿದರು.

ಇಲ್ಲಿನ ಬಿಜಿಎಸ್ ಶಾಖಾ ಮಠದ ಆವರಣದಲ್ಲಿ ಪಾರಂಪರಿಕ ವೈದ್ಯ ಪರಿಷತ್‌, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶನಿವಾರ ನಡೆದ 13ನೇ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನ ಹಾಗೂ ಮೂಲಿಕಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಾರಂಪರಿಕ ವೈದ್ಯರ ಮಕ್ಕಳಿಗೆ ವೈಜ್ಞಾನಿಕವಾಗಿ ಪಾರಂಪರಿಕ ವೈದ್ಯಕೀಯ ಅಧ್ಯಯನ ಮಾಡಲು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಅನುದಾನಿತ ಆಯುಷ್ ಮಹಾವಿದ್ಯಾಲಯಗಳಲ್ಲಿ ಹಂಚುವ ಕೋರ್ಸ್ ಗಳಲ್ಲಿ ಶೇ 2 ರಷ್ಟು ಸೀಟುಗಳನ್ನು ಮೀಸಲಿಟ್ಟು ಸರ್ಕಾರದ ಆದೇಶಿಸಿದೆ. ಅದರಂತೆ ಶೇ 2ರಷ್ಟು ಸೀಟುಗಳನ್ನು ನೀಡಬೇಕು ಎಂದರು.

ಪಾರಂಪರಿಕ ವೈದ್ಯರು ನಿರ್ಭಯದಿಂದ ಮುಕ್ತವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಸಂಶೋಧನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಪಾರಂಪರಿಕ ವೈದ್ಯದ ಉಳಿಯುವಿಕೆಗಾಗಿ ಪ್ರತಿ ವರ್ಷ ಸರ್ಕಾರ ಬಜೆಟ್ ನಲ್ಲಿ ಕನಿಷ್ಠ ₹50 ಲಕ್ಷ ಮೀಸಲಿರಿಸಬೇಕು. 60 ವರ್ಷ ದಾಟಿದ ಪಾರಂಪರಿಕ ವೈದ್ಯರಿಗೆ ಮಾಸಾಶನ ನೀಡಬೇಕು ಎಂದು ತಿಳಿಸಿದರು.

ಪಾರಂಪರಿಕ ವೈದ್ಯ ಪರಿಷತ್ ಗೌರವ ಉಪಾಧ್ಯಕ್ಷ ಗಾ.ನಂ.ಶ್ರೀಕಂಠಯ್ಯ ಮಾತನಾಡಿ, ಪಾರಂಪರಿಕ ವೈದ್ಯರ ಜ್ಞಾನಭಂಡಾರ ನಶಿಸುತ್ತಿದೆ. ಅದನ್ನು ಉಳಿಸಿ ಬೆಳೆಸಬೇಕಾದರೆ ಗುರು ಶಿಷ್ಯರ ಪರಂಪರೆ ಹುಟ್ಟುಹಾಕಬೇಕು. ಸರ್ಕಾರದಿಂದ ನಾವು ಏನನ್ನೂ ನಿರೀಕ್ಷಿಸಲು ಆಗುವುದಿಲ್ಲ. ಹಾಗಾಗಿ ಪಾರಂಪರಿಕ ವೈದ್ಯರು ಸಂಘಟಿತರಾಗಬೇಕು ಎಂದು ತಿಳಿಸಿದರು.

ಸರ್ಕಾರ ಪಾರಂಪರಿಕ ವೈದ್ಯ ಪದ್ಧತಿಯನ್ನು ಗುರುತಿಸುವ ಕೆಲಸ ಮಾಡಬೇಕು. ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರಂತೆ ಪಾರಂಪರಿಕ ವೈದ್ಯರನ್ನು ಬಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್ .ರಾಜಲಕ್ಷ್ಮಿ ಮಾತನಾಡಿ, ‘ಈ ವೈದ್ಯ ಪದ್ಧತಿ ಅಳಿಯಲು ಅವಕಾಶ ನೀಡದೆ ಉಳಿಸಿಕೊಂಡು ಹೋಗಬೇಕಾಗಿದೆ. ಇಲಾಖೆಯಿಂದ ದೊರಕಬೇಕಾದ ಸವಲತ್ತುಗಳನ್ನು ಕಲ್ಪಿಸಿಕೊಡಲು ನಿಮ್ಮೊಂದಿಗೆ ಕೈಜೋಡಿಸಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ಇಂದು ಔಷಧ ಸಸ್ಯಗಳು ಸಹ ನಶಿಸುತ್ತಿವೆ. ಅವುಗಳನ್ನು ಬೆಳೆಸುವ ಕೆಲಸವಾಗುತ್ತಿಲ್ಲ. ಔಷಧೀಯ ಗುಣವುಳ್ಳ ಸಸ್ಯಗಳು ಸುಲಭವಾಗಿ ಸಿಗುವಂತಾಗಬೇಕು. ಇದಕ್ಕಾಗಿ ಔಷಧ ವನವೊಂದು ನಿರ್ಮಾಣ ಆಗಬೇಕು. ಜಿಲ್ಲೆಯಲ್ಲಿಯೂ ಔಷಧ ವನ ನಿರ್ಮಿಸಲು ಆಯುಷ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ಮರಳೆ ಗವಿಮಠದ ಶಿವರುದ್ರ ಸ್ವಾಮೀಜಿ, ಮಾನ್ವಿ ತಾಲ್ಲೂಕಿನ ಇರಕಲ್ ಜಗದ್ದುರು ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ, ಪಾರಂಪರಿಕ ವೈದ್ಯ ಪರಿಷತ್ ನ ಪದಾಧಿಕಾರಿಗಳಾದ ಜಿ. ಮಹಾದೇವ, ಶಾಂತವೀರಪ್ಪ, ಪ್ರಕಾಶ್, ಶಿವಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT