ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಎರಡನೇ ಡೋಸ್‌ಗೂ ಲಸಿಕೆ ಅಭಾವ

ಜಿಲ್ಲೆಯಲ್ಲಿ ಸಿಗುತ್ತಿಲ್ಲ ಕೋವ್ಯಾಕ್ಸಿನ್‌: ಗುಟ್ಟು ಬಿಟ್ಟುಕೊಡದ ಅಧಿಕಾರಿಗಳು
Last Updated 15 ಮೇ 2021, 3:54 IST
ಅಕ್ಷರ ಗಾತ್ರ

ರಾಮನಗರ: ಲಸಿಕೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ 18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಅರ್ಧಕ್ಕೆ ನಿಂತಿದೆ. ಈ ನಡುವೆ 45 ವರ್ಷ ಮೇಲ್ಪಟ್ಟವರಿಗೂ ಡೋಸ್‌ ಕೊರತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ ಲಭ್ಯ ಇರುವ ಲಸಿಕೆ ದಾಸ್ತಾನಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಸರ್ಕಾರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದೆ ಎನ್ನಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ಇದೆ ಮತ್ತು ನಿತ್ಯ ಎಷ್ಟು ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಗುಟ್ಟು ಬಿಟ್ಟುಕೊಡುತ್ತಿಲ್ಲ. ಸದ್ಯ 10 ಸಾವಿರದಷ್ಟು ಲಸಿಕೆ ಇರುವುದಾಗಿ ಜಿಲ್ಲಾಧಿಕಾರಿ ಹೇಳಿದ್ದು, ಇಲ್ಲಿಯೂ ಕೆಲವು ಗೊಂದಲಗಳು ಮುಂದುವರಿದಿವೆ.

ಕೋವ್ಯಾಕ್ಸಿನ್‌ ಕೊರತೆ: ಆರೋಗ್ಯ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ನೀಡಿದ ಮಾಹಿತಿಯಂತೆ ಜಿಲ್ಲೆಯಲ್ಲಿ ಕೇವಲ 10 ಕೋವ್ಯಾಕ್ಸಿನ್‌ ಡೋಸ್‌ಗಳು ಮಾತ್ರ ಉಳಿದಿದ್ದವು. ಈಗ ಎಷ್ಟು ಪೂರೈಕೆ ಆಗಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಇದು ಹಲವು ಅನುಮಾನಗಳನ್ನು ಮೂಡಿಸುತ್ತಿದೆ. ‘ಜಿಲ್ಲೆಯಲ್ಲಿ ಎಷ್ಟು ಲಸಿಕೆ ಲಭ್ಯ ಇದೆ ಎಂದು ಹೇಳಿದಲ್ಲಿ ಹೊರ ಜಿಲ್ಲೆಗಳ ಜನರೂ ಇಲ್ಲಿಗೆ ಬಂದು ಲಸಿಕೆ ಪಡೆಯುತ್ತಾರೆ. ಹೀಗಾಗಿ ನಾವು ಎಲ್ಲವನ್ನೂ ಹೇಳಲಾಗದು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಮಾಹಿತಿ ಇಲ್ಲ: ಕೆಲವು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತವು ಪ್ರತ್ಯೇಕ ವೆಬ್ ಪುಟದ ಮೂಲಕ ಕೋವಿಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರ ಜೊತೆ ಹಂಚಿಕೊಳ್ಳುತ್ತಿದೆ. ಈ ಮೂಲಕ ಜನರಲ್ಲಿ ಕೋವಿಡ್ ಚಿಕಿತ್ಸೆ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ. ಜಿಲ್ಲೆಯಲ್ಲಿ ಈ ದಿನ ಎಷ್ಟು ಹಾಸಿಗೆ ಲಭ್ಯವಿದೆ. ಎಷ್ಟು ಆಮ್ಲಜನಕ ಲಭ್ಯ ಇದೆ. ಎಷ್ಟು ಹಾಸಿಗೆಗಳು ಖಾಲಿ ಇವೆ. ಯಾವ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಬಹುದು ಎಂಬೆಲ್ಲ ಮಾಹಿತಿ ಆನ್‌ಲೈನ್‌ನಲ್ಲೇ ಸಿಗುತ್ತಿದ್ದು, ಇದರಿಂದ ಸಾಕಷ್ಟು ಸೋಂಕಿತರಿಗೆ ಉಪಯೋಗ ಆಗುತ್ತಿದೆ. ಆದರೆ ರಾಮನಗರ ಜಿಲ್ಲಾಡಳಿತ ಸದ್ಯ ಅಂತಹ ಪ್ರಯತ್ನಗಳನ್ನು ಮಾಡಿಲ್ಲ.

ಎಷ್ಟು ಬೇಕು?: ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್‌ ನೀಡಲು ಜಿಲ್ಲೆಗೆ ಪ್ರತಿ ದಿನ 8500 ಸಾವಿರದಷ್ಟು ಲಸಿಕೆ ಬೇಕು. ಆದರೆ ಇಷ್ಟು ಪ್ರಮಾಣದಲ್ಲಿ ಲಸಿಕೆ ಸರಬರಾಜು ಆಗುತ್ತಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಸದ್ಯ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 1.36 ಲಕ್ಷ ಜನರು ಇನ್ನೂ ಮೊದಲ ಹಂತದ ಲಸಿಕೆಯನ್ನು ಪಡೆದಿಲ್ಲ. ಒಟ್ಟಾರೆ 3.07 ಲಕ್ಷ ಜನರ ಪೈಕಿ ಶೇ 56ರಷ್ಟು ಮಂದಿ ಮಾತ್ರವೇ ಲಸಿಕೆಗೆ ಒಳಗಾಗಿದ್ದಾರೆ. ಇನ್ನುಳಿದ 54ರಷ್ಟು ಮಂದಿಗೆ ಎರಡು ಸುತ್ತಿನ ಲಸಿಕೆ ಹಾಗೂ 1.70 ಲಕ್ಷ ಜನರಿಗೆ ಎರಡನೇ ಸುತ್ತಿನ ಲಸಿಕೆ ಸೇರಿದಂತೆ ಇನ್ನೂ 4.5 ಲಕ್ಷ ಡೋಸ್‌ನಷ್ಟು ಲಸಿಕೆ ಬೇಕು ಎಂದು ಅಂದಾಜಿಸಲಾಗಿದೆ.

ತಜ್ಞರ ಶಿಫಾರಸಿನಂತೆ ಸರ್ಕಾರ ಕೋವಿಶೀಲ್ಡ್‌ನ ಎರಡು ಲಸಿಕೆ ನಡುವಿನ ಅವಧಿಯನ್ನು ಏರಿಸಿದೆ. ಆದರೆ ಕೊವ್ಯಾಕ್ಸಿನ್‌ ಲಸಿಕೆ ನೀಡಿಕೆ ಅವಧಿ ಮಾತ್ರ ಹಾಗೆಯೇ ಇದೆ. ಜಿಲ್ಲೆಯಲ್ಲಿ ಒಟ್ಟು 17,802 ಮಂದಿ ಕೋವ್ಯಾಕ್ಸಿನ್‌ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 1229 ಜನರಿಗೆ ಮಾತ್ರ ಎರಡನೇ ಡೋಸ್‌ ದೊರೆತಿದೆ. ಇನ್ನೂ 16,573 ಜನರಿಗೆ ಕೋವ್ಯಾಕ್ಸಿನ್‌ ಲಸಿಕೆ ಸಿಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT