ಭಾನುವಾರ, ಜನವರಿ 19, 2020
29 °C
ದೇಗುಲಗಳ ಮುಂದೆ ಭಕ್ತರ ದಂಡು; ಉತ್ಸವ ಮೂರ್ತಿಯ ಮೆರವಣಿಗೆ

ಎಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಸೋಮವಾರ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲೆಡೆ ಗೋವಿಂದ... ಗೋವಿಂದ ಎಂಬ ಘೋಷಣೆ ಮೊಳಗಿತು.

ವೈಕುಂಠ ಏಕಾದಶಿಯ ದಿನದಂದು ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಹೀಗಾಗಿ ಬಹುತೇಕ ದೇಗುಲಗಳ ಪ್ರವೇಶ ದ್ವಾರದ ಸಮೀಪ ಸ್ವರ್ಗದ ಬಾಗಿಲಿನ ರೀತಿ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಈ ಬಾಗಿಲಿನಿಂದ ಒಳ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ನಗರದ ಕೆಂಪೇಗೌಡ ವೃತ್ತದಲ್ಲಿರುವ ಲಕ್ಷ್ಮಿ ವೆಂಕಟರಮಣಸ್ವಾಮಿ ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ನೆರೆದಿತ್ತು. ದೇವರ ಮೂರ್ತಿಯನ್ನು ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಪ್ರವೇಶ ದ್ವಾರದ ಬಳಿ ಸ್ವರ್ಗದ ಬಾಗಿಲಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಜನರು ದೇವರ ಮೂರ್ತಿಗೆ ಪೂಜೆ ಸಲ್ಲಿಸುವ ಜೊತೆಗೆ ಬಾಗಿಲ ಬಳಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಭಕ್ತರಿಂದ ಗೀತ ಗಾಯನ, ಭಜನೆ ನಡೆಯಿತು. ದೇವಸ್ಥಾನ ಹಾಗೂ ಸುತ್ತಲ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಗರದ ಶೆಟ್ಟಿ ಬಲಜಿಗರ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ, ಎಂ.ಜಿ. ರಸ್ತೆಯಲ್ಲಿನ ಬಲಮುರಿ ಗಣಪತಿ ದೇಗು.ಲ, ಕನ್ನಿಕಾ ಪರಮೇಶ್ವರಿ ದೇವಾಲಯ, ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇಗುಲ, ಚಾಮುಂಡೇಶ್ವರಿ ದೇಗುಲ, ವಿಜಯನಗರದ ಅಭಯ ಆಂಜನೇಯ, ಕಾಳಿಕಾಂಬ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಡೆಯಿತು.

ಕೂಟಗಲ್ ಬೆಟ್ಟದಲ್ಲಿ ಇರುವ ತಿಮ್ಮಪ್ಪನ ದೇಗುಲದಲ್ಲಿಯೂ ಏಕಾದಶಿ ಅಂಗವಾಗಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಜಯಪುರ ಗ್ರಾಮದ ವೆಂಕಟೇಶ್ವರ ದೇಗುಲದಲ್ಲಿ ಭಕ್ತರು ಪೂಜೆ ಸಲ್ಲಿಸಿದರು.

ಕೈಲಾಂಚ ಹೋಬಳಿಯ ಮೊಟ್ಟೆದೊಡ್ಡಿ ಗ್ರಾಮದಲ್ಲಿರುವ ಶ್ರೀನಿವಾಸ ದೇಗುಲದಲ್ಲಿ ವೈಕುಂಠ ದ್ವಾರ ನಿರ್ಮಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಬೀದಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಲಾಗಿತ್ತು. ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ಕೈಲಾಂಚ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳು ನಡೆದವು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್. ಪಾಂಡುರಂಗ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು