ಸೋಮವಾರ, ಮಾರ್ಚ್ 1, 2021
31 °C
ಆಷಾಡ ಮಾಸ: ಧಾರಣೆ ಇಳಿಯುವ ನಿರೀಕ್ಷೆ

ಕೈಗೆಟುಕದ ಕೊತ್ತಂಬರಿ: ತರಕಾರಿಯೂ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಆಷಾಢ ಮಾಸ ಕಾಲಿಟ್ಟಿರುವ ಕಾರಣ ಶುಭ ಸಮಾರಂಭಗಳಿಗೆ ತೆರೆ ಬಿದ್ದಿದ್ದು, ಗಗನಕ್ಕೇರಿರುವ ತರಕಾರಿ ಬೆಲೆಯು ಇನ್ನಾದರೂ ಇಳಿಯಬಹುದು ಎನ್ನುವ ನಿರೀಕ್ಷೆ ಗ್ರಾಹಕರದ್ದು.

ಕಳೆದೊಂದು ತಿಂಗಳಿನಿಂದ ನೂರರ ಗಡಿಯಲ್ಲಿ ಇದ್ದ ಬೀನ್ಸ್‌ ಅರ್ಥಾತ್‌ ಉರುಳಿಕಾಯಿಯ ಬೆಲೆ ಸದ್ಯ ಅರ್ಧಕ್ಕೆ ಇಳಿದಿದ್ದು ಕೊಳ್ಳುವವರು ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ. ಮಾರುಕಟ್ಟೆಗೆ ತಕ್ಕ ಮಟ್ಟದಲ್ಲಿ ಉತ್ಪನ್ನ ಬರುತ್ತಿರುವ ಕಾರಣ ಧಾರಣೆ ಇಳಿಯುತ್ತಿದೆ. ಆದರೆ ಕ್ಯಾರೆಟ್‌ ಬೆಲೆಯ ಜೊತೆಗೆ ಬೇಡಿಕೆಯನ್ನು ಏರಿಸಿಕೊಳ್ಳುತ್ತಿದೆ. ₨20ಕ್ಕೆ ಕುಸಿದುಹೋಗಿದ್ದ ಈ ತರಕಾರಿಯ ಬೆಲೆ ಈಗ ಎರಡು ಪಟ್ಟು ಹೆಚ್ಚಾಗಿದೆ.

ಹಸಿ ಬಟಾಣಿ ಬೆಲೆ ಕೇಳಿದರಂತೂ ಗ್ರಾಹಕರು ಹೌಹಾರುವುದು ಖಂಡಿತ. ಮಾರುಕಟ್ಟೆಯಲ್ಲಿ ಅಷ್ಟಾಗಿ ಕಾಣಸಿಗದೇ ಇರುವುದಕ್ಕೆ ಅದರ ಬೆಲೆಯೂ ಕಾರಣವಾಗಿದೆ. ನೂರರ ಗಡಿ ದಾಟಿರುವ ಬಟಾಣಿ ಇನ್ನೊಂದು ನೂರರ ಗಡಿಯ ಸನಿಹದಲ್ಲಿ ಇದೆ. ದಪ್ಪ ಮೆಣಸಿನಕಾಯಿ ಧಾರಣೆಯೂ ಏರುಗತಿಯಲ್ಲಿಯೇ ಇದೆ.ಹಸಿ ಮೆಣಸಿನಕಾಯಿ, ಬೆಂಡೆ, ಈರೇಕಾಯಿ ಸಹಿತ ದಿನ ಬಳಕೆಯ ಪ್ರಮುಖ ತರಕಾರಿಗಳ ಬೆಲೆ ಕೊಂಚ ತಗ್ಗಿದ್ದು, ಉತ್ತಮ ಮಳೆಯಾದಲ್ಲಿ ಇನ್ನಷ್ಟು ಅಗ್ಗವಾಗುವ ಸಾಧ್ಯತೆ ಇದೆ. ಟೊಮ್ಯಾಟೊ ಬೆಲೆ ಸ್ಥಿರವಾಗಿದ್ದು, ಗ್ರಾಹಕರ ಪಾಲಿಗೆ ಕೊಂಚ ದುಬಾರಿಯಾಗಿಯೇ ಉಳಿದಿದೆ.

ಈರುಳ್ಳಿ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಕಳೆದ ಆರೇಳು ತಿಂಗಳಿನಿಂದಲೂ ಒಂದೇ ದರದಲ್ಲಿ ಮಾರಾಟವಾಗುತ್ತಿದೆ. ಹಸಿ ಮೆಣಸಿನಕಾಯಿಯ ಬೆಲೆಯು ತಗ್ಗಿದೆ.

ಕೊತ್ತಂಬರಿ ದುಬಾರಿ: ಮಾರುಕಟ್ಟೆಯಲ್ಲಿ ಬಲು ದುಬಾರಿಯಾಗಿರುವ ಕೊತ್ತಂಬರಿ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಾಗಿ ಜನರು ಸಾಂಬಾರಿಗೆ ಕೊತ್ತಂಬರಿ ಹಾಕುವುದನ್ನೇ ಬಿಟ್ಟಿದ್ದಾರೆ. ಸತತ ನಾಲ್ಲೈದು ವಾರಗಳಿಂದ ಈ ಸೊಪ್ಪಿನ ಬೆಲೆ ಏರುತ್ತಲೇ ಇದೆ.

ಉಳಿದ ಸೊಪ್ಪುಗಳ ಧಾರಣೆಯೂ ಗಗನಮುಖಿಯಾಗಿಯೇ ಇದೆ. ಅದರಲ್ಲೂ ಮೆಂತ್ಯ, ಸಬ್ಬಸಿಗೆ ಹಾಗೂ ಪುದೀನ ದುಬಾರಿಯಾಗಿವೆ. ಉಳಿದ ಸೊಪ್ಪುಗಳು ಮಾತ್ರ ಕೈಗೆ ಎಟಕುವ ಹಾಗಿವೆ. ಬಿಸಿಲು ತಗ್ಗಿದ ಹಿನ್ನೆಲೆಯಲ್ಲಿ ನಿಂಬೆಗೆ ಬೇಡಿಕೆ ತಗ್ಗಿದ್ದು, ₨10ಕ್ಕೆ 4–5ರಂತೆ ಮಾರಾಟವಾಗುತ್ತಿದೆ. ಸೌತೆಕಾಯಿಯ ಬೆಲೆಯೂ ಕುಸಿದಿದ್ದು, ಸಣ್ಣ ಗಾತ್ರದ್ದು ಒಂದಕ್ಕೆ ₨5 ಹಾಗೂ ದಪ್ಪ ಗಾತ್ರದ್ದು ₨7ರಂತೆ ವ್ಯಾಪಾರವಾಗುತ್ತಿದೆ.

**
ಮಳೆ ಕೊರತೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿದೆ. ಪರಿಸ್ಥಿತಿ ಹೀಗೆಯೇ ಇದ್ದರೆ ಬೆಲೆಯೂ ಏರಬಹುದು
- ಮಂಜುನಾಥ್, ತರಕಾರಿ ವರ್ತಕ

**

ತರಕಾರಿ ದರ (ಪ್ರತಿ ಕೆ.ಜಿ.ಗೆ–₨ಗಳಲ್ಲಿ)

ಬೀನ್ಸ್‌ 40–50
ಈರೇಕಾಯಿ 25–30
ಬೆಂಡೆಕಾಯಿ 25
ಟೊಮ್ಯಾಟೊ 30
ಕ್ಯಾರೆಟ್‌ 50–60
ಹಸಿಮೆಣಸಿನಕಾಯಿ 40–45
ಗೆಡ್ಡೆಕೋಸು 20
ಹಸಿ ಬಟಾಣಿ 180
ಹೂಕೋಸು 40
ಈರುಳ್ಳಿ (ಸಣ್ಣ) 20
ಈರುಳ್ಳಿ ದಪ್ಪ 25–30
ಬೆಳ್ಳುಳ್ಳಿ 80–100
ಆಲೂಗಡ್ಡೆ–20
ಪಡುವಲಕಾಯಿ 20
ಮೂಲಂಗಿ 20
ದಪ್ಪ ಮೆಣಸಿನಕಾಯಿ 60

**
ಸೊಪ್ಪಿನ ದರ (ಪ್ರತಿ ಕಂತೆಗೆ–₨ಗಳಲ್ಲಿ)
ಕೊತ್ತಂಬರಿ 50
ಪುದೀನ 20
ಮೆಂತ್ಯ 20
ಸಬ್ಬಸಿಗೆ 20
ಪಾಲಕ್‌, ದಂಟು, ಕೀರೆ 10

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು