ಗುರುವಾರ , ಸೆಪ್ಟೆಂಬರ್ 19, 2019
22 °C
ಈರುಳ್ಳಿ, ಬೀನ್ಸ್, ಕ್ಯಾರೆಟ್‌ ತುಟ್ಟಿ: ಅವರೆ, ಟೊಮ್ಯಾಟೊ ಅಗ್ಗ

ಹಬ್ಬ ಕಳೆದರೂ ತರಕಾರಿ ದುಬಾರಿ

Published:
Updated:
Prajavani

ರಾಮನಗರ: ಗೌರಿ ಗಣೇಶ ಹಬ್ಬದ ಬಳಿಕವೂ ತರಕಾರಿ ಬೆಲೆ ಏರುಮುಖವಾಗಿಯೇ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಈರುಳ್ಳಿ ಧಾರಣೆಯು ದಿನದಿಂದ ದಿನಕ್ಕೆ ಏರುತ್ತಿದ್ದು, ಗ್ರಾಹಕರಲ್ಲಿ ಕಣ್ಣೀರು ಹಾಕಿಸುತ್ತಿದೆ. ಕಳೆದೊಂದು ತಿಂಗಳಿನಿಂದಲೂ ಇದರ ಬೆಲೆ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಬೆಳೆಗೆ ಭಾರಿ ಹಾನಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಬಹುದು ಎಂದು ವರ್ತಕರು ಹೇಳುತ್ತಾರೆ. ಬೆಳ್ಳುಳ್ಳಿಯ ಬೆಲೆಯೂ ಗಗಗಮುಖಿಯಾಗುತ್ತಿದೆ.

ನಿತ್ಯ ಬಳಕೆಯ ತರಕಾರಿಗಳಾದ ಬೀನ್ಸ್, ನುಗ್ಗೆ ಹಾಗೂ ಕ್ಯಾರೆಟ್‌ನ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಮೂರು ₨50ರ ಗಡಿ ದಾಟಿ ಹೋಗಿವೆ. ಹಾಗಲಕಾಯಿ ಬೆಲೆಯೂ ಗ್ರಾಹಕರಿಗೆ ಕಹಿಯಾಗಿಯೇ ಇದೆ. ಈರೇಕಾಯಿ, ಬದನೆ, ಬೆಂಡೆಕಾಯಿ, ಮೂಲಂಗಿ ಮೊದಲಾದ ತರಕಾರಿಗಳು ಸ್ಥಳೀಯವಾಗಿ ಪೂರೈಕೆ ಆಗುತ್ತಿವೆ. ಆದರೆ ಇವುಗಳ ಬೆಲೆಯೂ ಚಿಲ್ಲರೆ ಮಾರುಕಟ್ಟೆಯಲ್ಲಿ ಕೊಂಚ ದುಬಾರಿಯಾಗಿಯೇ ಇದೆ.

ಯಾವುದು ಕಡಿಮೆ: ಸದ್ಯಕ್ಕೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕಡಿಮೆಯಾಗಿದೆ. ಮೂರ್ನಾಲ್ಕು ತಿಂಗಳ ಕಾಲ ಏರುಗತಿಯಲ್ಲಿದ್ದ ಈ ಹಣ್ಣಿನ ಧಾರಣೆ ಕುಸಿದು ಕ್ರಮೇಣ ಚೇತರಿಕೆ ಕಾಣುತ್ತಿದೆ. ಸ್ಥಳೀಯ ಉತ್ಪನ್ನದ ಜೊತೆಗೆ ಹೊರ ಜಿಲ್ಲೆಗಳಿಂದಲೂ ಟೊಮ್ಯಾಟೊ ಇಲ್ಲಿನ ಮಾರುಕಟ್ಟೆಗೆ ಬರುತ್ತಿದೆ.

ಚಳಿಗಾಲದಲ್ಲಿ ಬಹುಜನರ ನೆಚ್ಚಿನ ತರಕಾರಿಯಾದ ಅವರೆಕಾಯಿ ಬೆಲೆ ತಗ್ಗಿದೆ. ಹಬ್ಬದ ಹಿನ್ನೆಲೆಯಲ್ಲಿ ₨60ರವರೆಗೂ ಮಾರಾಟ ಕಂಡಿದ್ದ ಕಾಯಿ ಈಗ ಅರ್ಧದಷ್ಟು ಬೆಲೆ ಇಳಿಸಿಕೊಂಡಿದೆ. ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾದ ಮಾಗಡಿ ಸೊನೆ ಆವರೆ ಇನ್ನಷ್ಟೇ ಮಾರುಕಟ್ಟೆಗೆ ಕಾಲಿಡಬೇಕಿದೆ. ಸದ್ಯ ಮೈಸೂರು ಭಾಗದಿಂದ ತರಕಾರಿ ಆಮದಾಗುತ್ತಿದೆ.

ಮಳೆಗಾಲದಲ್ಲೂ ಇಳಿಯದ ನಿಂಬೆ: ಬೇಸಿಗೆ ಕಳೆದು ಮಳೆಗಾಲದ ಅವಧಿ ಮುಗಿಯುತ್ತಾ ಬಂದರೂ ನಿಂಬೆ ಬೆಲೆ ಮಾತ್ರ ತಗ್ಗಿಲ್ಲ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿರವುದು ಇದಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಸದ್ಯ ಮಧ್ಯಮ ಗಾತ್ರದ ನಿಂಬೆ ಒಂದಕ್ಕೆ ₨4–5ರಂತೆ ಮಾರಾಟ ಆಗುತ್ತಿದೆ.

ಸೊಪ್ಪಿನ ದರ ಎಷ್ಟು?
ಕೊತ್ತಂಬರಿ ಸೊಪ್ಪಿನ ದರವು ಹಾವು–ಏಣಿ ಆಟದಂತೆ ಏರಿ ಇಳಿಯುತ್ತಲೇ ಇದೆ. ತಿಂಗಳ ಹಿಂದೆ ಒಂದು ಕಟ್ಟಿಗೆ ₨50 ಇದ್ದದ್ದು, ದಿಢೀರ್ ಎಂದು ₨5ಕ್ಕೆ ಕುಸಿದು ಬೆಳೆಗಾರರಲ್ಲಿ ಕಣ್ಣೀರು ಹಾಕಿಸಿತ್ತು. ಈಗ ಇದರ ಧಾರಣೆಯಲ್ಲಿ ಸುಧಾರಣೆ ಕಾಣುತ್ತಿದೆ. ₨15–20ಕ್ಕೆ ಒಂದು ದೊಡ್ಡ ಕಟ್ಟು ಸಿಗುತ್ತಿದೆ. ಪುದೀನ, ಮೆಂತ್ಯ, ಸಬ್ಬಸಿಗೆ ₨10–15 ಹಾಗೂ ಪಾಲಕ್‌, ದಂಟು, ಕೀರೆ ಮೊದಲಾದ ಸೊಪ್ಪುಗಳು ₨10ರ ದರದಲ್ಲಿ ಮಾರಾಟ ಆಗುತ್ತಿವೆ.

Post Comments (+)