ಬುಧವಾರ, ಜೂನ್ 29, 2022
26 °C

ರಾಮನಗರ: ಟೊಮೆಟೊ ಪ್ರತಿ ಕೆ.ಜಿ.ಗೆ ₹100ರಂತೆ ಮಾರಾಟ, ಸೊಪ್ಪು ಬಲು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಟೊಮೆಟೊ ಧಾರಣೆ ಶತಕದ ಗಡಿ ದಾಟಿದ್ದು, ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಗುರುವಾರ ಇಲ್ಲಿನ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ ₹100ರಂತೆ ಮಾರಾಟ ನಡೆಯಿತು. ಮಳೆಯ ಕಾರಣಕ್ಕೆ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬರುತ್ತಿಲ್ಲ. ಹೀಗಾಗಿ ದಿನೇ ದಿನೇ ಬೆಲೆ ಏರಿಕೆ ಆಗುತ್ತಲೇ ಇದೆ. ಬೆಲೆ ಕೇಳಿಯೇ ಗ್ರಾಹಕರು ಕಂಗಾಲಾಗಿದ್ದು, ಪರ್ಯಾಯ ತರಕಾರಿಗಳ ಖರೀದಿಯತ್ತ ಮುಖ ಮಾಡಿದ್ದಾರೆ.

ಟೊಮೆಟೊ ರೀತಿಯಲ್ಲಿಯೇ ಬೀನ್ಸ್ ಅರ್ಥಾತ್‌ ಹುರುಳಿಕಾಯಿ ಸಹ ಗಗನಮುಖಿ ಆಗಿದೆ. ಪ್ರತಿ ಕೆ.ಜಿ.ಗೆ ₹100–120ರ ದರದಲ್ಲಿ ಮಾರಾಟ ನಡೆದಿದೆ. ಮದುವೆ ಮೊದಲಾದ ಶುಭ ಸಮಾರಂಭಗಳ ಹೊತ್ತಿನಲ್ಲಿ ಬೀನ್ಸ್ ಈ ಪರಿ ಬೆಲೆ ಏರಿಸಿಕೊಂಡಿರುವುದು ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಅದರಲ್ಲೂ ಗುಣಮಟ್ಟದ ಬೀನ್ಸ್ ದೊರೆಯುತ್ತಿಲ್ಲ.

ಉಳಿದ ಎಲ್ಲ ತರಕಾರಿಗಳೂ ತುಟ್ಟಿ ಆಗತೊಡಗಿದೆ. ಕ್ಯಾರೆಟ್‌, ಬೆಂಡೆ, ಬದನೆ, ಮೂಲಂಗಿ, ಹಸಿ ಮೆಣಸಿನಕಾಯಿ ಆದಿಯಾಗಿ ಬಹುತೇಕ ತರಕಾರಿಗಳ ಧಾರಣೆ ಏರುಮುಖವಾಗಿದೆ. ಆದರೆ ಈರುಳ್ಳಿ ಮಾತ್ರ ಅಗ್ಗವಾಗಿದ್ದು, ಕೊಳ್ಳುವವರು ನಿಟ್ಟುಸಿರು ಬಿಡುವಂತೆ ಆಗಿದೆ.

ಸೊಪ್ಪು ಆವಕ ಇಳಿಕೆ: ನಿರಂತರ ಮಳೆಯಿಂದಾಗಿ ಸೊಪ್ಪು ಬೆಳೆ ನಾಶವಾಗಿದೆ. ಹೀಗಾಗಿ ಮಾರುಕಟ್ಟೆಗೆ ಉತ್ಪನ್ನದ ಆವಕ ಕಡಿಮೆ ಆಗಿದ್ದು, ಬೆಲೆ ದುಪ್ಪಟ್ಟಾಗಿದೆ. ನಾಟಿ ಕೊತ್ತಂಬರಿ ಪ್ರತಿ ಕಂತೆಗೆ ₹40, ಫಾರಂ ಕೊತ್ತಂಬರಿ ₹20, ಮೆಂತ್ಯ–₹40, ಸಬ್ಬಸ್ಸಿಗೆ ₹30, ಕಿಲ್‌ಕೀರೆ, ದಂಟು ₹20ರಂತೆ ಮಾರಾಟ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು