ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Last Updated 18 ಜುಲೈ 2019, 6:58 IST
ಅಕ್ಷರ ಗಾತ್ರ

ರಾಮನಗರ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಬುಧವಾರ ಪ್ರತಿಭಟಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುಂಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ತಡೆಯಬೇಕು. ಕಂದಾಯ ಇಲಾಖೆ ನೌಕರರ ಮೇಲೆ ಅನ್ಯ ಇಲಾಖೆಗಳ ಕೆಲಸದ ಒತ್ತಡವನ್ನು ಹೇರುತ್ತಿರುವುದನ್ನು ತಪ್ಪಿಸಬೇಕು. ಇವೇ ಮೊದಲಾದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಈಗಾಗಲೇ ಕಂದಾಯ ನೌಕರರ ಕೇಂದ್ರ ಸಂಘ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಕಂದಾಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಮೇಶ್ ಆರೋಪಿಸಿದರು.

ಈ ವಿಷಯವಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಅಧಿಕಾರಿಗಳು ಮತ್ತು ಸಂಘದ ಪಧಾದಿಕಾರಿಗಳ 2 ಸಭೆಗಳನ್ನು ನಡೆಸಿದ್ದರೂ, ಬೇಡಿಕೆಗಳು ಭರವಸೆಯಾಗಿಯೆ ಉಳಿದಿವೆ ಎಂದು ದೂರಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಆಯಾಯ ಜಿಲ್ಲೆಯ ಗ್ರಾಮ ಲೆಕ್ಕಿಗರು ಲೇಖನಿ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದೇವೆ. ಇದಕ್ಕೂ ನಮ್ಮಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಅನಿರ್ದಿಷ್ಟಾವಧಿಯ ಮುಷ್ಕರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಿ ಸರ್ಕಾರದಿಂದ ಆದೇಶ ಮಾಡಿದ್ದರೂ, ಹಲವಾರು ಜಿಲ್ಲೆಗಳಲ್ಲಿ ಇಲಾಖೆ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ. ಇದರಿಂದ ಕೌಟುಂಬಿಕ ಕಲಹಗಳು ಉಂಟಾಗುತ್ತಿದ್ದು, ಮಾನಸಿಕವಾಗಿ ಹತಾಶರಾಗುತ್ತಿದ್ದಾರೆ. ಜತೆಗೆ ಅನ್ಯ ಇಲಾಖೆಯ ಕೆಲಸದ ಒತ್ತಡ, ಮುಂಬಡ್ತಿಯಲ್ಲಿ ಆಗುತ್ತಿರುವ ನಿರಂತರ ಅನ್ಯಾಯ, ಗ್ರಾಮ ಲೆಕ್ಕಿಗರ ಜ್ಯೇಷ್ಠತೆಗಳನ್ನು ಒಟ್ಟುಗೂಡಿಸಿ ಪದ ನವೀಕರಿಸುವುದು, ಪ್ರಯಾಣ ಭತ್ಯೆ ಧರವನ್ನು ಪರಿಷ್ಕರಿಸಿ ಒಂದು ಸಾವಿರಕ್ಕೆ ಹೆಚ್ಚಿಸುವುದು, ಜಾಬ್ ಚಾರ್ಟ್ ನೀಡುವುದು ಹಾಗೂ ಗ್ರಾಮ ಸಹಾಯಕರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಪಧಾದಿಕಾರಿಗಳಾದ ಜಗದೀಶ್, ಎ. ಹರ್ಷ, ಎಂ.ಸಿ.ರಾಜಶೇಖರ್, ಎಂ.ಬಿ ಯೋಗೇಶ್, ನಾಗರಾಜು, ನಾರಾಯಣ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ತಂಗರಾಜು, ವೆಂಕಟೇಶ್, ಮೋಹನ್, ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT