ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಪಂಗಡ ವ್ಯತ್ಯಾಸ ಬಿಟ್ಟು ಒಂದಾಗಿ : ನಿರ್ಮಲಾನಂದನಾಥ ಸ್ವಾಮೀಜಿ

ರಾಮನಗರ: ಒಕ್ಕಲಿಗರ ಭವನ ಉದ್ಘಾಟನೆ
Last Updated 25 ಡಿಸೆಂಬರ್ 2019, 16:21 IST
ಅಕ್ಷರ ಗಾತ್ರ

ರಾಮನಗರ: ಒಕ್ಕಲಿಗರು ತಮ್ಮೊಳಗಿನ ಉಪ ಪಂಗಡಗಳ ನಡುವಿನ ವ್ಯತ್ಯಾಸ ಮರೆತು ಸಂಘಟಿತರಾಗಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ನಗರದ ದೇವರಸೇಗೌಡನ ದೊಡ್ಡಿ ರಸ್ತೆ ಬಳಿ ನಿರ್ಮಾಣ ಆಗಿರುವ ಒಕ್ಕಲಿಗರ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು. ಕ್ರಿ.ಶ. 250ರ ಸುಮಾರಿಗೆ ಆರಂಭಗೊಂಡು ಮುಂದಿನ 850 ವರ್ಷಗಳ ಕಾಲ ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ನಡೆಸಿದ ಗಂಗರು ಮೂಲತಃ ಒಕ್ಕಲಿಗರು. ತದನಂತರದಲ್ಲಿ ಒಕ್ಕಲಿಗ ಸಮುದಾಯ ಬೇರೆ ಪ್ರದೇಶಗಳಿಗೆ ಹರಿದು ಹಂಚಿಹೋಯಿತು. ಅವರು ವಾಸಿಸುವ ಪ್ರದೇಶದ ಆಧಾರದ ಮೇಲೆ ಕುಂಚಿಟಿಗ, ಅರೆಭಾಷೆ, ದಾಸರು ಮೊದಲಾದ ಉಪ ಸಮುದಾಯಗಳು ಹುಟ್ಟಿಕೊಂಡವು. ಈ ಎಲ್ಲ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಆಗಬಾರದು’ ಎಂದು ಸಲಹೆ ನೀಡಿದರು.

‘ಈ ನೆಲದಿಂದ ಈಗಾಗಲೇ ಕೆಂಗಲ್‌ ಹನುಮಂತರಾಯರು, ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ದೇವೇಗೌಡರು ಪ್ರಧಾನ ಮಂತ್ರಿ ಆಗಿದ್ದಾರೆ. ಮುಂದೊಂದು ದಿನ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿ ಆಗುವ ಯೋಗ ಬರಲಿ’ ಎಂದು ಆಶಿಸಿದರು.

ಶಾಸಕ ಡಿ,ಕೆ. ಶಿವಕುಮಾರ್‌ ಮಾತನಾಡಿ ‘ನನ್ನ ಮತ್ತು ಕುಟುಂಬದ ಮೇಲೆ ರಾಜಕೀಯ ಷಡ್ಯಂತ್ರ ನಡೆದಿತ್ತು. ಯಾವುದೇ ಚಾರ್ಜ್‌ಶೀಟ್‌ ಇಲ್ಲದೆಯೇ ಜೈಲಿನಿಂದ ಹೊರ ಬರುವುದು ಕಷ್ಟವಿತ್ತು. ಆ ಕಾನೂನುಗಳು ಅಷ್ಟು ಕಠಿಣವಿದ್ದವು. ಆ ಸಂದರ್ಭ ರಾಜ್ಯದ ಜನ ನನ್ನ ಬೆನ್ನಿಗೆ ನಿಂತಿದ್ದನ್ನು ಮರೆಯಲಾರೆ. ಜೈಲಿಗೆ ಹೋಗುವುದು ಅವಮಾನ ಎನಿಸಿಲ್ಲ. ನಾನೇನು ತಪ್ಪು ಮಾಡಿಲ್ಲ. ರಕ್ಷಣೆ ಸಲುವಾಗಿ ಪ್ರಜ್ಞೆ ಮೀರಿ ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲಾರೆ’ ಎಂದರು.

‘ನಾವೆಲ್ಲ ಕೆಂಪೇಗೌಡರು ಕಟ್ಟಿದ ಬೆಂಗಳೂರು ಜಿಲ್ಲೆಯವರು. ಆದರೆ ಕುಮಾರಸ್ವಾಮಿ ಅವರು ಜಿಲ್ಲೆಗೆ ರಾಮನಗರ ಎಂದು ಅವಸರದಲ್ಲಿ ನಾಮಕರಣ ಮಾಡಿದರು. ವಾಸ್ತವದಲ್ಲಿ ಅದು ಬೆಂಗಳೂರು ದಕ್ಷಿಣ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟರು. ‘ದುಡ್ಡು–ಬ್ಲಡ್‌ ಒಂದು ಕಡೆ ನಿಲ್ಲಬಾರದು. ಸಮುದಾಯದ ಜನರು ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಬೇಕು’ ಎಂದು ಸಲಹೆ ನೀಡಿದರು.

ಹೋರಾಟದ ಎಚ್ಚರಿಕೆ: ಸ್ಫಟಿಕಪುರಿ ಪೀಠದ ನಂಜಾವಧೂತ ಸ್ವಾಮೀಜಿ ಮಾತನಾಡಿ ‘ಸರ್ಕಾರದಿಂದ ಒಕ್ಕಲಿಗ ಮೀಸಲಾತಿಯನ್ನು ಬದಲಿಸುವ ಪ್ರಯತ್ನ ನಡೆದಿದ್ದು, ಹಾಗೇನಾದರೂ ಆದಲ್ಲಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ನಗರ ಪ್ರದೇಶದ ಒಕ್ಕಲಿಗರಿಗೆ ಈಗಾಗಲೇ ಮೀಸಲಾತಿ ಪ್ರಮಾಣ ಕಡಿಮೆ ಆಗಿದ್ದು, ಗ್ರಾಮೀಣರಿಗೆ ಮಾತ್ರ ಸವಲತ್ತು ಸಿಗುತ್ತಿದೆ. ಹಿಂದೊಮ್ಮೆ ಈ ಮೀಸಲಾತಿ ಬದಲಿಸಲು ಹೊರಟಾಗ ಹೋರಾಟ ನಡೆದಿತ್ತು. ಈಗೇನಾದರೂ ಸರ್ಕಾರ ಮತ್ತೊಮ್ಮೆ ಅಂತಹ ಪ್ರಯತ್ನ ಮಾಡಿದಲ್ಲಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇರುವ ಒಕ್ಕಲಿಗರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘ಇವತ್ತು ಒಕ್ಕಲಿಗ ಸಮುದಾಯದ ವಿದ್ಯಾವಂತರೇ ಹೆತ್ತವರಿಗೆ ಮುಳ್ಳಾಗುತ್ತಿದ್ದಾರೆ. ಅತ್ತೆ–ಮಾವನ ಹೆಸರಿನಲ್ಲಿ ಆಸ್ತಿ ಮಾಡುತ್ತಾ ತಂದೆ–ತಾಯಿಯನ್ನು ಬೀದಿಗೆ ತಳ್ಳಿದ್ದಾರೆ. ಇಂತಹ ವಿದ್ಯಾವಂತರು ನಾಡದ್ರೋಹಿಗಳು’ ಎಂದು ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಕಿಡಿಕಾರಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರ ಸ್ವಾಮೀಜಿ, ಆನಂದ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಜಿ.ಪಂ. ಅಧ್ಯಕ್ಷ ಬಸಪ್ಪ, ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಕೆ. ರಾಜು. ಎಚ್.ಎಂ. ಕೃಷ್ಣಮೂರ್ತಿ, ಎಂ.ಸಿ. ಅಶ್ವತ್ಥ್‌, ಇ. ಕೃಷ್ಣಪ್ಪ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು ವೇದಿಕೆಯಲ್ಲಿದ್ದರು.


‘ಸಂಘಟನೆಯಲ್ಲಿ ರಾಜಕೀಯ ಬಿಡಿ’
‘ಒಕ್ಕಲಿಗ ಸಮುದಾಯವು ಇಂದು ಸಂಘಟನೆಯಲ್ಲಿ ವಿಫಲವಾಗಿದ್ದು, ನಮ್ಮೊಳಗಿನ ರಾಜಕೀಯಗಳಿಂದಾಗಿ ತಲೆ ತಗ್ಗಿಸುವಂತೆ ಆಗಿದೆ’ ಎಂದು ಸಂಸದ ಡಿ.ಕೆ. ಸುರೇಶ್ ವಿಷಾದಿಸಿದರು. ‘ರಾಮನಗರದಲ್ಲಿ ಕೇವಲ ಒಂದು ಕಟ್ಟಡ ಕಟ್ಟಲು 40–50 ವರ್ಷ ಬೇಕಾಯಿತು. ರಾಜ್ಯ ಸಂಘದಲ್ಲಿನ ರಾಜಕೀಯ ಬೇಸರ ಹುಟ್ಟಿಸಿದೆ. ನಮಗೇನು ಅಲ್ಲಿ ಅಧ್ಯಕ್ಷರಾಗಿ ಕೂರುವ ಆಸೆ ಇಲ್ಲ. ನೀವೇ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿ’ ಎಂದರು.

‘ಎಚ್‌.ಡಿ. ದೇವೇಗೌಡರನ್ನು ಸೋಲಿಸಿದ್ದರಿಂದ ಇಡೀ ರಾಜ್ಯಕ್ಕೆ ನಷ್ಟ ಆಗಿದೆ. ಅವರು, ಖರ್ಗೆಯಂತಹವರು ಸಂಸತ್ತಿನಲ್ಲಿ ಧ್ವನಿ ಎತ್ತುವ ಹಾಗಿದ್ದರೆ ಅದರ ಚಿತ್ರಣವೇ ಬೇರೆ ಇತ್ತು. ಯಾರ ಜೊತೆ ನಿಲ್ಲಬೇಕು ಎಂಬುದನ್ನು ಸಮುದಾಯದ ಜನರು ಚಿಂತಿಸಬೇಕು’ ಎಂದರು.


ಮೆರವಣಿಗೆ
ವಿವಿಧ ಮಠಾಧೀಶರನ್ನು ಬೆಂಗಳೂರು–ಮೈಸೂರು ಹೆದ್ದಾರಿಯಿಂದ ಕಾರ್ಯಕ್ರಮದ ಸ್ಥಳದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಮಹಿಳೆಯರು ಕಳಸ ಹೊತ್ತು ಹೆಜ್ಜೆ ಹಾಕಿದರು. ಅವರೊಟ್ಟಿಗೆ ವಿವಿಧ ಜಾನಪದ ಕಲಾವಿದರೂ ಪಾಲ್ಗೊಂಡು ಮೆರವಣಿಗೆಗೆ ರಂಗು ತುಂಬಿದರು.

ನಾನೆಷ್ಟೇ ಜಾತ್ಯತೀತನಾದರೂ ಒಕ್ಕಲಿಗ ಎಂಬ ಆಧಾರದ ಮೇಲೆಯೇ ಮಂತ್ರಿ, ಮತ್ತೊಂದು ಸ್ಥಾನಮಾನ ದೊರೆಯುತ್ತಿದೆ. ಈ ಸಮುದಾಯದವನಾಗಿರುವುದು ಹೆಮ್ಮೆ
ಡಿ.ಕೆ. ಶಿವಕುಮಾರ್
ಶಾಸಕ


ಒಕ್ಕಲಿಗರಿಗೆ ನೀಡಿರುವ ಮೀಸಲಾತಿ ಬದಲಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಅದು ಮುಂದುವರಿದಲ್ಲಿ ದೇಶದಾದ್ಯಂತ ಹೋರಾಟ ಸಂಘಟಿಸಲಾಗುವುದು
ನಂಜಾವಧೂತ ಸ್ವಾಮೀಜಿ
ಸ್ಫಟಿಕಪುರಿ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT