ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಸ್ವಯಂಪ್ರೇರಿತವಾಗಿ ಕೆರೆ ಸ್ವಚ್ಛತೆ

Last Updated 6 ಜೂನ್ 2019, 14:03 IST
ಅಕ್ಷರ ಗಾತ್ರ

ಕಲ್ಯ(ಮಾಗಡಿ): ‘ಕೆರೆ, ಕಟ್ಟೆ, ಕಲ್ಯಾಣಿಗಳು ಎಲ್ಲರ ಜೀವನಾಡಿಗಳಾಗಿದ್ದು, ಗಂಗಾಮಾತೆ ತಾಯಿ ಇದ್ದಂತೆ’ ಎಂದು ತಾಲ್ಲೂಕು ಮೀನುಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ.ಸಿದ್ದರಾಜು ತಿಳಿಸಿದರು.

ಕಲ್ಯದ ಕೆರೆಯಲ್ಲಿ ಬೆಳೆದಿರುವ ಕೊಳೆ ಗಿಡಗಳನ್ನು ಹೊರತೆಗೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಲ್ಲೂಕಿನ ಕೆರೆಕಟ್ಟೆಗಳ ಹೂಳೆತ್ತಿಸುವಲ್ಲಿ ನೀರಾವರಿ ಇಲಾಖೆ ವತಿಯಿಂದ ಹಣ ಖರ್ಚಾಗಿರುವುದರ ದಾಖಲೆ ಇರುವುದನ್ನು ಬಿಟ್ಟರೆ ಹೂಳು ಮಾತ್ರ ತೆಗೆಯಲೇ ಇಲ್ಲ. ಕಲ್ಯದ ಕೆರೆಯನ್ನು ಸುತ್ತಲೂ ಒತ್ತುವರಿ ಮಾಡಲಾಗಿದೆ. ಯೋಜನಾ ಪ್ರಾಧಿಕಾರದ ವತಿಯಿಂದ 2 ವರ್ಷಗಳ ಹಿಂದೆ ₹ 1 ಕೋಟಿ ದುರಸ್ತಿಗಾಗಿಖರ್ಚಾಗಿದೆ ಎನ್ನಲಾಗುತ್ತಿದೆ. ಏರಿ ಮೇಲಿನ ಮಣ್ಣನ್ನು ಸಮ ಮಾಡಿದ್ದು ಬಿಟ್ಟರೆ ಕೆರೆ ದುರಸ್ತಿಯಾಗಿಲ್ಲ. ಒತ್ತುವರಿ ತೆರವುಗೊಳಿಸಿಲ್ಲ’ ಎಂದು ಆರೋಪಿಸಿದರು.

‘ಕೆರೆಯ ಸುತ್ತಲೂ ತಂತಿಬೇಲಿ ಹಾಕಲಾಗುತ್ತಿದ್ದು, ತೀರಾ ಕಳಪೆ ಕಾಮಗಾರಿ ಮಾಡಿದ್ದಾರೆ. ಬೇಲಿ ನಿರ್ಮಿಸಿ ಒಂದು ವಾರ ಕಳೆದಿಲ್ಲ. ಆಗಲೇ ಕಂಬಗಳು ಮುರಿದು ಬಿದ್ದಿವೆ. ಗುತ್ತಿಗೆದಾರರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಬೆಸ್ತ ಸಮುದಾಯದವರ ಜೀವನೋಪಾಯಕ್ಕೆ ಕೆರೆ ಆಶ್ರಯ ನೀಡಿದೆ. ಕೆರೆ ನೀರಿನಲ್ಲಿ ಬೆಳೆದು ನಿಂತಿರುವ ಸತ್ತೆ, ಗಣೇಶನ ಕಡ್ಡಿ, ಕಸವನ್ನು ನಮ್ಮ ಸಂಘದ ಪದಾಧಿಕಾರಿಗಳು ಸರ್ಕಾರದ ಸಹಾಯವಿಲ್ಲದೆ ಸ್ವಚ್ಛತೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಗಂಗಾಮತಸ್ಥ, ಬೆಸ್ತ ಸಮುದಾಯದ ಮುಖಂಡ ಗಂಗಭೈರಯ್ಯ ಮಾತನಾಡಿ, ‘ಕೆರೆ ಮೀನುಗಾರರ ಪಾರಂಪರಿಕ ಸ್ವತ್ತು. ಮುಂದಿನ ಪೀಳಿಗೆಗೆ ಕುಲಕಸುಬಾದ ಮೀನುಗಾರಿಕೆ ಉಳಿಸುನ ನಿಟ್ಟಿನಲ್ಲಿ ಕೆರೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಕೆರೆ ಒತ್ತುವರಿ ತಡೆಯಲು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದರು.

ಸಂಘದ ಪದಾಧಿಕಾರಿಗಳಾದ ಶಾಂತರಾಜು, ಮರಿಸ್ವಾಮಯ್ಯ, ಅನ್ನದಾನಯ್ಯ, ಜಯಣ್ಣ, ಬೆಟ್ಟಯ್ಯ, ಮಂಡಿ ಸಿದ್ದರಾಜು, ಕೇಬಲ್‌ ಅನ್ನದಾನಿ, ಸಿದ್ದಯ್ಯ ಕೆರೆಯಲ್ಲಿನ ಕೊಳೆ ಹುಲ್ಲನ್ನು ತೆಪ್ಪದಲ್ಲಿ ಕೆರೆಯಿಂದ ಹೊರಗೆ ಸಾಗಿಸಿದರು. ಬೆಸ್ತ ಸಮುದಾಯದ ಮಹಿಳೆಯರು, ಯುವಕರು ಕೊಳೆ ಗಿಡಗಳನ್ನು ತೆಗೆಯಲು ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT