ಬುಧವಾರ, ಸೆಪ್ಟೆಂಬರ್ 18, 2019
25 °C
ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮುಂದುವರಿದ ಪ್ರತಿಭಟನೆ

ಕನಕ‍‍ಪುರದಲ್ಲಿ ಸ್ವಯಂಪ್ರೇರಿತ ಬಂದ್‌

Published:
Updated:
Prajavani

ಕನಕಪುರ: ಶಾಸಕ ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಪ್ರತಿಭಟನೆ ಮುಂದುವರಿದಿದೆ. ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಜನರು ಸ್ವಯಂಪ್ರೇರಿತರಾಗಿ ಕರೆ ನೀಡಿದ್ದ 'ಕನಕಪುರ ಬಂದ್‌' ಗುರುವಾರ ಸಂಪೂರ್ಣವಾಗಿ ಯಶಸ್ವಿಯಾಯಿತು.

ಕರ್ನಾಟಕ ರಕ್ಷಣಾ ವೇದಿಕೆ, ಸಂಘ –ಸಂಸ್ಥೆಗಳು, ವ್ಯಾಪಾರಿಗಳು, ಮುಸ್ಲಿ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾಕಾರರು ಬೆಳಿಗ್ಗೆ 10ಕ್ಕೆ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಮುಂಭಾಗ ಸೇರಿ 11ರವರೆಗೂ ಪ್ರತಿಭಟನಾ ಧರಣಿ ನಡೆಸಿದರು. ‌

ಸಕ್ರಮವಾಗಿ ಹಣ ಸಂಪಾದನೆ: ಡಿ.ಕೆ.ಶಿವಕುಮಾರ್‌ ಅವರು ಅಪಾರ ಸಂಪತ್ತು ಗಳಿಸಿದ್ದಾರೆ ಎಂಬುದು ನಿಜ.ಆದರೆ, ಯಾರಿಗೂ ಮೋಸ, ವಂಚನೆ ಮಾಡಿ ಸಂಪಾದಿಸಿಲ್ಲ. ಅವರು ಕಷ್ಟಪಟ್ಟು ವ್ಯವಹಾರಿಕವಾಗಿ ಸಂಪಾದಿಸಿದ್ದಾರೆ. ಸರ್ಕಾರಕ್ಕೆ ತೆರಿಗೆ ಕಟ್ಟಿ ಆಸ್ತಿ, ಸಂಪತ್ತು ಘೋಷಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಶಿವಕುಮಾರ್‌ ಮಾಡಿರುವ ಸಂಪತ್ತಿಗೆ ನೂರು ಪಟ್ಟು ಈ ದೇಶದಲ್ಲಿ ಇತರ ವ್ಯಕ್ತಿಗಳು, ಬಿಜೆಪಿ ನಾಯಕರು ಮಾಡಿದ್ದಾರೆ. ಅವರ‍್ಯಾರಿಗೂ ಇಡಿ ಮತ್ತು ಐಟಿ ಅಧಿಕಾರಿಗಳು ಕೇಸು ದಾಖಲಿಸಿಲ್ಲ. ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ್ವೇಷದ ರಾಜಕಾರಣ: ಕಾಂಗ್ರೆಸ್‌ ಪಕ್ಷದಲ್ಲಿ ಪ್ರಭಾವಿ ರಾಷ್ಟ್ರ ನಾಯಕರಾಗಿ ಶಿವಕುಮಾರ್‌ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷದಲ್ಲಿ ದೊಡ್ಡ ಹುದ್ದೆ, ರಾಜಕೀಯ ಸ್ಥಾನಮಾನ ಸಿಗಲಿದೆ. ಹೇಗಾದರೂ ಮಾಡಿ ಬಿಜೆಪಿಗೆ  ಕರೆ ತರಬೇಕೆಂದು ಪ್ರಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಅವರ ಪ್ರಯತ್ನಕ್ಕೆ ಸೊಪ್ಪು ಹಾಕದ ಶಿವಕುಮಾರ್‌ ವಿರುದ್ಧ ದ್ವೇಷದ ರಾಜಕಾರಣ ನಡೆದಿದೆ ಎಂದರು.

ತಾಲ್ಲೂಕಿನ ಶಕ್ತಿ ದೇವತೆಗಳಾದ ಕಬ್ಬಾಳಮ್ಮ, ಕೆಂಕೇರಮ್ಮ, ಬಾಣಂತಮಾರಮ್ಮ, ಬಾಣಗಾಳಮ್ಮ ದೇವರ ಆಶೀರ್ವಾದ ಇದೆ. ಎಲ್ಲ ಸಂಕಷ್ಟ ನಿವಾರಿಸಿಕೊಂಡು ಶಿವಕುಮಾರ್‌ ಹೊರಕ್ಕೆ ಬರಲಿದ್ದಾರೆ. ಜನರ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಕಿಡಿಕಾರಿದರು.

ಹೋರಾಟಕ್ಕೆ ಸಿದ್ಧ: ಕಸ್ಟಡಿಯಲ್ಲಿರುವ 10 ದಿನಗಳ ಕಾಲವೂ ಪ್ರತಿಭಟನೆ ಮುಂದುವರಿಯಲಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ನಗರಸಭೆ ಮುಂಭಾಗ ಪ್ರತಿಭಟನಾ ಧರಣೆ ನಡೆಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ತಿಥಿಕಾರ್ಯ: ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಗೆ ತಿಥಿ ಕಾರ್ಯ ಮಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಯುವಕ ಮೆಳೆಕೋಟೆ ರಿಜ್ವಾನ್‌ ಕೇಶಮುಂಡನ ಮಾಡಿಸಿಕೊಂಡರು.

ಬಂಧಗೆ ಸಹಕಾರ: ಬಂದ್‌ ಹಿನ್ನೆಲೆಯಲ್ಲಿ ನಗರದ ಯಾವುದೇ ಅಂಗಡಿ ಮುಂಗಟ್ಟು ತೆರೆಯಲಿಲ್ಲ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಕಚೇರಿ ಮತ್ತು ಕಂಪನಿಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸಾರಿಗೆ ಮತ್ತು ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಆಟೊ ಟ್ಯಾಕ್ಸಿ, ಗೂಡ್ಸ್‌ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದವು. ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು. ಕೋಡಿಹಳ್ಳಿ, ಉಯ್ಯಂಬಳ್ಳಿ, ಸಾತನೂರು ಹೋಬಳಿ ಜನರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಿಗಿ ಬಂದೋಬಸ್ತ್‌: ಪ್ರತಿಭಟನೆ ಹಿನ್ನೆಲೆಯುಲ್ಲಿ ಒಬ್ಬ ಐಜಿಪಿ, ಮೂವರು ಎಸ್‌.ಪಿ, ಮೂವರು ಡಿವೈಎಸ್‌ಪಿ, 10ಸಿಪಿಐ, 30 ಎಸ್‌.ಐ, 6 ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ 300 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಐಜಿಪಿ ಕೆ.ವಿ.ಶರತ್‌ಚಂದ್ರ, ರಾಮನಗರ ಎಸ್‌.ಪಿ ಅನೂಪ್‌ ಎ.ಶೆಟ್ಟಿ, ಹೆಚ್ಚುವರಿ ಎಸ್‌.ಪಿ.ಅನುಪಮ್‌ ಅಗರ್‌ವಾಲ್‌, ಎಎಸ್‌ಪಿ ಸುಜೀತ್‌ ಬಂದೋಬಸ್ತ್‌ ನೇತೃತ್ವ ವಹಿಸಿದ್ದರು.

Post Comments (+)