‘ಸ್ವಯಂಪ್ರೇರಿತರಾಗಿ ಪರಿಸರ ಕಾಳಜಿ ವಹಿಸಿ’

ಭಾನುವಾರ, ಜೂನ್ 16, 2019
32 °C
ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಾಲುಮರದ ತಿಮ್ಮಕ್ಕ

‘ಸ್ವಯಂಪ್ರೇರಿತರಾಗಿ ಪರಿಸರ ಕಾಳಜಿ ವಹಿಸಿ’

Published:
Updated:
Prajavani

ರಾಮನಗರ: ಎಲ್ಲರೂ ಸ್ವಯಂಪ್ರೇರಿತರಾಗಿ ಪರಿಸರದ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಹೇಳಿದರು. 

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ಚೀಲಗಳನ್ನು ಈಚೆಗೆ ಹೆಚ್ಚಾಗಿ ಬಳಸುತ್ತಿರುವುದರಿಂದ, ಅವುಗಳು ಎಲ್ಲೆಂದರಲ್ಲಿ ಕಸವಾಗಿ ಬಿದ್ದಿರುವುದನ್ನು ನೋಡುತ್ತಿದ್ದೇವೆ. ಹಸುಗಳು ಗೊತ್ತಿಲ್ಲದೆ ನುಂಗಿದ ಪ್ಲಾಸ್ಟಿಕ್ ಅವುಗಳ ಪ್ರಾಣಕ್ಕೆ ಅಪಾಯವನ್ನು ತರುತ್ತಿದೆ. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ಕಸವು ನದಿ, ಸಾಗರಗಳನ್ನು ಸೇರಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ’ ಎಂದು ತಿಳಿಸಿದರು.

ಕುಡಿಯುವ ನೀರಿನ ಖಾಲಿ ಬಾಟಲಿಗಳು ಜಾಸ್ತಿ ಪ್ರಮಾಣದಲ್ಲಿ ಕಸವಾಗುತ್ತಿವೆ. ಸಮಾರಂಭಗಳಲ್ಲಿ ಅನುಕೂಲತೆ ಮತ್ತು ಆಡಂಬರದ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಪ್ಲಾಸ್ಟಿಕ್ ಲೋಟ, ಚಮಚ ಹಾಗೂ ನೀರಿನ ಬಾಟಲಿಗಳನ್ನು ಒದಗಿಸಲಾಗುತ್ತಿದೆ. ಈ ರೀತಿಯ ಪ್ಲಾಸ್ಟಿಕ್ ಸೊಬಗಿನ ಆಡಂಬರಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.

‘ಪ್ರತಿಯೊಬ್ಬರೂ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ನಮ್ಮ ಬಾಳು ಚೆಂದವಾಗಿ ಇರಲು ಸಾಧ್ಯವಾಗುತ್ತದೆ. ಮಾನವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಬೆಳೆದಿದ್ದರೂ ಪ್ರಕೃತಿ ವಿಕೋಪದ ರುದ್ರ ನರ್ತನದ ಮುಂದೆ ಅಸಹಾಯಕವಾಗಿ ಬಿಡುತ್ತಾನೆ. ಹಾಗಾಗಿ ಪರಿಸರಕ್ಕೆ ವಿರುದ್ಧವಾದ ಕೆಲಸಗಳಿಂದ ಹಿಂದೆ ಸರಿಯುವುದೇ ಉತ್ತಮ ಮಾರ್ಗ’ ಎಂದು ತಿಳಿಸಿದರು.

ನೃತ್ಯ ಸ್ಪರ್ಧೆಯನ್ನು ಉದ್ಘಾಟಿಸಿದ ಮೈಸೂರಿನ ಮ್ಯಾಜಿಕ್ ಸ್ಟೆಪ್ಸ್ ಡ್ಯಾನ್ಸ್ ಅಕಾಡೆಮಿಯ ಮಂಜುಳ ಹರೀಶ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ. ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಮುಖಂಡ ಎಸ್.ಟಿ. ಕಾಂತರಾಜ್ ಪಟೇಲ್ ಮಾತನಾಡಿ, ‘ಪರಿಸರ ಹಾಗೂ ಜೀವ ಸಂಕುಲದ ಬಗ್ಗೆ ನಾವು ಸೂಕ್ಷ್ಮ ಪ್ರವೃತ್ತಿ ಕಳೆದುಕೊಂಡಿದ್ದೇವೆ. ಮನುಷ್ಯ ನಿರ್ಮಾಣ ಮಾಡಿದ್ದನ್ನು ಪರಿಸರ ಕೆಡವಿದರೆ ಅದನ್ನು ವಿಧ್ವಂಸಕ ಎನ್ನುತ್ತೇವೆ, ಅದೇ ಮನುಷ್ಯ ಪ್ರಕೃತಿಯನ್ನು ನಾಶ ಮಾಡಿದರೆ ಅಭಿವೃದ್ಧಿ ಎಂಬ ಹೆಸರು ಕೊಡುತ್ತೇವೆ. ಪರಿಸರಕ್ಕೆ ಹಾನಿಯಾಗದಂತಹ ಸುಸ್ಥಿರ ಪ್ರಗತಿಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕು’ ಎಂದು ತಿಳಿಸಿದರು.

ಎಲ್ಲರೂ ಪರಿಸರದ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಬೇಕು. ಮಕ್ಕಳು ಸಹಜವಾಗಿಯೇ ಪರಿಸರದ ಬಗ್ಗೆ ಪ್ರೀತಿ ಹೊಂದಿರುತ್ತಾರೆ. ಆದರೆ ಅವರನ್ನು ಪರಿಸರದಿಂದ ಬೇರೆ ಮಾಡಲಾಗುತ್ತಿದೆ. ಶಿಕ್ಷಣ ಪಡೆದ ಹಾಗೆ ಅವರು ನಿಸರ್ಗದಿಂದ ದೂರ ಆಗುತ್ತಿದ್ದಾರೆ. ಪರಿಸ್ಥಿತಿ ಬದಲಾವಣೆ ಆಗಬೇಕು, ಅದು ಮನೆಯಿಂದಲೇ ಆರಂಭವಾಗಬೇಕು ತಿಳಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಮುಖಂಡರಾದ ಎಂ.ಜಿ.ಆರ್. ಮಣಿ, ಲಕ್ಷ್ಮಣ್, ಎನ್. ರಾಜು, ಎಂ.ವಿ. ನಾಗರಾಜ್, ಎಂ.ವಿ. ಪುಟ್ಟಸ್ವಾಮಿ, ದೇವರಾಜ್, ಕಲಾವಿದರಾದ ಮಂಜುನಾಥ್, ರಘುನಂದನ್, ಜಗದೀಶ್, ನಾಗೇಶ್, ಎಬಿಸಿಡಿ ಡ್ಯಾನ್ಸ್ ಅಕಾಡೆಮಿಯ ಎಸ್. ರೇಣುಕಾಪ್ರಸಾದ್, ಪರಮೇಶ್, ಸೋಮಪ್ರಭಸಿದ್ದೇಶ್, ಪ್ರಕಾಶ್, ಶಶಿಕಲಾರೇಣುಕಾಪ್ರಸಾದ್, ಲೀಡರ್ಸ್ ಅಕಾಡೆಮಿಯ ಸಿಂಧು ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !