ಕನಕಪುರ: ‘ಶಿವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ–209ರಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಅಲ್ಲಿ ನಡೆದ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಅಪಘಾತಕ್ಕೂ ನಮಗೂ ಸಂಬಂಧ ಇಲ್ಲ’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಸ್ಪಷ್ಟನೆ ನೀಡಿದೆ.
ಪತ್ರಿಕೆಯಲ್ಲಿ ಫೆ.12ರಂದು ಪ್ರಕಟವಾಗಿದ್ದ ‘ಪೈಪ್‌ಲೈನ್ ಕಾಮಗಾರಿಗಾಗಿ ಬಿಡಬ್ಲ್ಯೂಎಸ್ಎಸ್‌ಬಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಬೈಕ್ ಸವಾರ ಸಾವಿಗೀಡಾಗಿದ್ದಾರೆ’ ಎಂದು ಪೊಲೀಸರ ಮಾಹಿತಿಯನ್ನು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ (ಕಾವೇರಿ–2) ತಳ್ಳಿ ಹಾಕಿದ್ದಾರೆ.
‘ಈ ಸ್ಥಳದಲ್ಲಿ ನಡೆದ ಅಪಘಾತಕ್ಕೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೂ ಯಾವುದೇ ಸಂಬಂಧ ಇಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
‘ಘಟನೆ ನಡೆದ ಸ್ಥಳದಲ್ಲಿ ಆರ್‌ಸಿಸಿ ವೆಂಟ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರಾದ ಮೆ. ಗವಾರ್ ಬೆಂಗಳೂರು ಹೈವೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಸ್ತೆ ಅಗೆದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.