ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಘಟಕ ಬಂದ್‌: ಜನರ ಪರದಾಟ

ತಾಂತ್ರಿಕ ಸಮಸ್ಯೆ ಬಗೆಹರಿಸಲು ಮುಂದಾಗದ ಏಜೆನ್ಸಿಗಳು
Last Updated 23 ಆಗಸ್ಟ್ 2019, 12:21 IST
ಅಕ್ಷರ ಗಾತ್ರ

ರಾಮನಗರ: ಜನರಿಗೆ ಪರಿಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಗ್ರಾಮೀಣ ಭಾಗಗಳಲ್ಲಿ ನಿರ್ಮಿಸಿರುವ ಶುದ್ಧ ನೀರು ಘಟಕಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಶುದ್ಧ ನೀರು ದೊರೆಯದಾಗಿದೆ.

ಸರ್ಕಾರವು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಮೂಲಕ ಸಂಸದರ ಅನುದಾನ ಮತ್ತು ಜಿಲ್ಲಾ ಪಂಚಾಯಿತಿ ಅನುದಾನ ಬಳಕೆ ಮಾಡಿಕೊಂಡು ಕೆಲವು ಏಜಿನ್ಸಿಗಳಿಗೆ ಘಟಕಗಳ ನಿರ್ಮಾಣ ಮತ್ತು ಎರಡು ವರ್ಷಗಳ ನಿರ್ವಹಣೆ ಮಾಡಲು ಷರತ್ತು ಮಾಡಿಕೊಂಡಿದೆ.
ಆದರೆ ನಿರ್ಮಾಣ ಮಾಡಿದ ಕೆಲವೇ ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ. ಅದನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ಹೊತ್ತಿರುವ ಏಜೆನ್ಸಿಗಳು ಇತ್ತ ತಲೆ ಹಾಕದೆ ಕೈಚೆಲ್ಲಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಮೆಳೆಹಳ್ಳಿ ಗ್ರಾಮದಲ್ಲಿ ಕಳೆದ ಐದು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಪೆಕ್ಸ್ ಏಜೆನ್ಸಿ ನಿರ್ವಹಣೆ ಮಾಡುತ್ತಿದೆ. ಪ್ರತಿನಿತ್ಯದ ಬಳಕೆಗೆ ಶುದ್ಧ ಕುಡಿಯುವ ನೀರಿನ್ನೇ ಜನತೆ ಆಶ್ರಯಿಸಿದ್ದು, ಕೊಳವೆಬಾವಿ ನೀರನ್ನು ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಕೂಡಲೇ ಸಮಸ್ಯೆ ಬಗೆಹರಿಸಲು ಚುನಾಯಿತ ಪ್ರತಿನಿಧಿಗಳು, ಸಂಬಂಧಿಸಿದ ನಿರ್ವಹಣೆ ಹೊಣೆ ಹೊತ್ತಿರುವ ಏಜೆನ್ಸಿಗಳು ಇತ್ತ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತುಂಬೇನಹಳ್ಳಿಯಲ್ಲೂ ಸಮಸ್ಯೆ: ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬೆಂಗಳೂರಿನ ಇಇಇ ಇಂಡಿಯಾ ಪ್ರೈ ಲಿಮಿಟೆಡ್ ಎಂಬ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣವಾಗಿದೆ. ಆದರೆ ಕೆಲವು ದಿನಗಳಿಂದ ಕೊಳವೆ ಬಾವಿಯಿಂದ ಮಣ್ಣು ಮಿಶ್ರಿತ ನೀರು ಘಟಕಕ್ಕೆ ಸರಬರಾಜಾಗುತ್ತಿರುವುದರಿಂದ ಘಟಕದ ಫಿಲ್ಟರ್‌ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದರಿಂದ ನೀರು ಶುದ್ಧೀಕರಣಗೊಳ್ಳುತ್ತಿಲ್ಲ. ಹೀಗಾಗಿ ಶುದ್ಧ ನೀರು ಸಿಗದೆ ಈ ಭಾಗದ ಜನರು ಸಹ ತೊಂದರೆ ಅನುಭವಿಸುತ್ತಿದ್ದಾರೆ.

‘ಮೆಳೇಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕ ಕೆಟ್ಟು ಹಲವು ತಿಂಗಳಾಗಿವೆ. ಆದರೆ ಇದನ್ನು ನಿರ್ವಹಣೆ ಮಾಡುವವರಿಗೆ ಎಷ್ಟೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಸುತ್ತಮುತ್ತಲ ಹಲವು ಗ್ರಾಮಗಳಿಗೆ ಬಹಳ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ರಮೇಶ್ ತಿಳಿಸಿದರು.

‘ತುಂಬೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಕೊಳವೆ ಬಾಯಿಯಿಂದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೂರೈಕೆಯಾಗುತ್ತಿರುವ ಮಣ್ಣು ಮಿಶ್ರಿತ ನೀರಿನ ಪರಿಣಾಮ ಫಿಲ್ಟರ್ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಶುದ್ಧ ನೀರು ಪೂರೈಕೆಯಾದೆ ಜನರಿಗೆ ತೊಂದರೆಯಾಗಿದ್ದು, ಇದರ ಬಗ್ಗೆ ನಿರ್ವಹಣೆ ಮಾಡುವ ಏಜೆನ್ಸಿ ಕೂಡಲೇ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ’ ಎಂದು ತುಂಬೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ. ಯಕ್ಷರಾಜು ತಿಳಿಸಿದರು.

ತ್ವರಿತ ಕ್ರಮದ ಭರವಸೆ
‘ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಮೆಳೇಹಳ್ಳಿಯಲ್ಲಿ ಪಂಪು ದುರಸ್ತಿಯ ಬಗ್ಗೆ ಏಜೆನ್ಸಿಯವರು ಕಾರಣ ನೀಡಿದ್ದಾರೆ. ತುಂಬೇನಹಳ್ಳಿಯ ಘಟಕದಲ್ಲಿ ಕಚ್ಛಾ ನೀರು ಪೂರೈಕೆ ಬಂದ್‌ ಆದ ಕಾರಣ ಸಮಸ್ಯೆಯಾಗಿದೆ. ತ್ವರಿತವಾಗಿ ಎರಡು ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಿ ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ವಹಿಸಲಾಗುವುದು’ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ ಛತ್ರಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT