ಬುಧವಾರ, ಸೆಪ್ಟೆಂಬರ್ 18, 2019
25 °C

ಪೈಪ್‌ಲೈನ್‌ ವಾಲ್ವ್‌ ತೆರವು; ನೀರು ಪೋಲು

Published:
Updated:
Prajavani

ಕನಕಪುರ: ರಾಂಪುರ ಏತ ನೀರಾವರಿ ಮೂಲಕ ಪಡುವಣಗೆರೆ ಕೆರೆಗೆ ಹೋಗಬೇಕಾದ ನೀರನ್ನು ಜಂಪಾಲೇಗೌಡನದೊಡ್ಡಿ ಬಳಿ ಮುಚ್ಚಳ ತೆಗೆದಿರುವುದರಿಂದ ನೀರು ಪೋಲಾಗಿ ಪಡುವಣಗೆರೆ ಕೆರೆಗೆ ನೀರು ಇಲ್ಲದಂತಾಗಿದೆ ಎಂದು ಪಡುವಣಗೆರೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ವೃಷಭಾವತಿ ನದಿಯಿಂದ ನೀರಿನ ಪೈಪನ್ನು ರಾಂಪುರದಿಂದ ತುಂಗಣಿ, ರಾಯಸಂದ್ರ ಮಾರ್ಗವಾಗಿ ಪಡುವಣಗೆರೆಗೆ ಒಯ್ಯಲಾಗಿದೆ.

ನೀರು ಹೋಗುವ ಪೈಪಿಗೆ ಆಯಾ ಗ್ರಾಮಗಳ ಸಮೀಪದಲ್ಲಿ ಮುಚ್ಚಳವನ್ನು ಅಳವಡಿಸಿದ್ದು. ರಾಯಸಂದ್ರ ಕೆರೆಗೆ ಹೋಗಲು ಚಂಪಾಲೆಗೌಡನದೊಡ್ಡಿ ಬಳಿಯಿರುವ ಮುಚ್ಚಳವನ್ನು ತೆಗೆಯುವುದರಿಂದ ನೀರು ಪಡುವಣಗೆರೆ ಕೆರೆಗೆ ಹೋಗುವುದಿಲ್ಲ.

ಪಡುವಣಗೆರೆಯು ಅತ್ಯಂತ ಎತ್ತರದಲ್ಲಿದ್ದು ಜಂಪಾಲೆಗೌಡನದೊಡ್ಡಿ ಬಳಿ ಮುಚ್ಚಳವನ್ನು ತೆಗೆದಾಗ ನೀರು ಬಲವಾಗಿ ಇಲ್ಲಿಯೇ ಹೋಗುತ್ತದೆಯೇ ಹೊರತು, ಒಂದು ತೊಟ್ಟು ನೀರು ಸಹ ಪಡುವಣಗೆರೆಗೆ ಹೋಗುವುದಿಲ್ಲ.

ಇದನ್ನು ಗಮನಿಸಿದ ಪಡುವಣಗೆರೆ ಗ್ರಾಮಸ್ಥರು ಕೆರೆಗೂ ನೀರು ಬರುವಂತೆ ಮಾಡಬೇಕೆಂದು ಸಂಸದ ಡಿ.ಕೆ.ಸುರೇಶ್‌ ಅವರಲ್ಲಿ ಮನವಿ ಮಾಡಿದಾಗ, ಅಧಿಕಾರಿಗಳಿಗೆ ತಾಕೀತು ಮಾಡಿ ಮಧ್ಯ ಎಲ್ಲಿಯೂ ಮುಚ್ಚಳ ತೆಗೆಯದೆ ಪಡುವಣಗೆರೆಗೆ ನೇರವಾಗಿ ನೀರು ಹೋಗಬೇಕೆಂದು ಸುರೇಶ್‌ ತಿಳಿಸಿದ್ದರು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಮ್ಮೆ ಮಾತ್ರ ನೀರು ತುಂಬಿಸಲಾಗಿತ್ತು.

ಅದನ್ನು ಬಿಟ್ಟರೆ ಈವರೆಗೂ ನಮ್ಮ ಕೆರೆಗೆ ನೀರೇ ಬಂದಿಲ್ಲ. ಕೆರೆಗೆ ಹೋಗಲೆಂದು ಬಿಡುವ ನೀರನ್ನು ಮಧ್ಯದಲ್ಲಿಯೇ ಮುಚ್ಚಳ ತೆಗೆದು ತುಂಗಣಿಯವರು ಇಲ್ಲವೇ ರಾಯಸಂದ್ರ ಗ್ರಾಮದವರು ಅವರ ಕೆರೆಗೆ ಬಿಟ್ಟುಕೊಳ್ಳುತ್ತಿದ್ದಾರೆ. ವರ್ಷ ಪೂರ್ತಿ ಅವರ ಕೆರೆಗಳು ತುಂಬಿರುತ್ತವೆ. ನಮಗಾಗಿ ಬಿಟ್ಟ ನೀರು ಕೆರೆಗೆ ಬರುತ್ತಿಲ್ಲವೆಂದು ಪಡುವಣಗೆರೆಯ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು ತಿಳಿಸುತ್ತಾರೆ.

ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಇತ್ತೀಚೆಗೆ  ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಅವರಿಗೆ ಇಲ್ಲಿನ ಜನತೆಯ ಸಮಸ್ಯೆ ಏನೆಂಬುದು, ಕೆರೆಗಳು ಬತ್ತಿರುವುದು ಗೊತ್ತಾಗಿದೆ. ಅವರು ಸಂಸದರೊಂದಿಗೆ ಮಾತನಾಡಿ, ಕೆರೆಗೆ ನೀರು ತುಂಬಿಸಬೇಕೆಂದು ಪಡುವಣಗೆರೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Post Comments (+)