ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: 9ರಿಂದ ಜಲಧಿ ಮಹೋತ್ಸವ ಆರಂಭ

Last Updated 7 ಏಪ್ರಿಲ್ 2022, 4:32 IST
ಅಕ್ಷರ ಗಾತ್ರ

ಮಾಗಡಿ: ‘ಯರಗುಂಟೆ ಚಿತ್ರಲಿಂಗೇಶ್ವರಸ್ವಾಮಿ, ಕದರಿ ಲಕ್ಷ್ಮಿನರಸಿಂಹಸ್ವಾಮಿಯ ಶಿವಗಂಗಾ ಯಾತ್ರಾ ಜಲಧಿ ಮಹೋತ್ಸವ ಏಪ್ರಿಲ್ 9ರಂದು ಆರಂಭವಾಗಲಿದೆ. ಅಂದು ಸಂಜೆ 6ಗಂಟೆಗೆ ಮಾಡಬಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇನಹಳ್ಳಿ ಕಾಡುಗೊಲ್ಲರಹಟ್ಟಿಯ ಬಾಲಿ ಚಿಕ್ಕಣ್ಣ ಅವರ ಮಾವಿನ ತೋಟದಲ್ಲಿ ಹಾಕಿರುವ ಗುಡಾರದಲ್ಲಿ ದೇವರ ಮೂರ್ತಿಗಳು ತಂಗಲಿವೆ.

‘ತಾಲ್ಲೂಕಿನ ಎಲ್ಲಾ ಕಾಡುಗೊಲ್ಲರಹಟ್ಟಿಗಳ ಗೌಡ, ಪೂಜಾರಿ, ದಾಸಪ್ಪ, ದಳವಾಯಿ, ನೆಂಟರು, ಹಾಗೂ ಗ್ರಾಮಸ್ಥರು ಶಿವಗಂಗಾ ಯಾತ್ರಾ ಜಲಧಿ ಮಹೋತ್ಸವ ನೆರವೇರಿಸಲಿದ್ದಾರೆ’ ಎಂದು ಬಸವೇನಹಳ್ಳಿಯ ಮುಖಂಡ ಜಯರಾಮಯ್ಯಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅರುವನಹಳ್ಳಿ ಮೂಲ ನೆಲೆಯಿಂದ ಏಪ್ರಿಲ್ 9ರಂದು ಮುಂಜಾನೆ 4 ಗಂಟೆಗೆ ಶಿವಗಂಗಾ ಯಾತ್ರೆ ಆರಂಭವಾಗಲಿದೆ. ಯರಗುಂಟೆ ಚಿತ್ರಲಿಂಗೇಶ್ವರಸ್ವಾಮಿ, ಕದರಿ ಲಕ್ಷ್ಮಿನರಸಿಂಹಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತ ಪೂಜಾರಿಗಳು ಕಾಲ್ನಡಿಗೆ ಮೂಲಕ ಅಜ್ಜನಹಳ್ಳಿ ಕಾಡುಗೊಲ್ಲರ ಹಟ್ಟಿ ತರಲಿದ್ದಾರೆ ಎಂದರು.

ಪೂಜೆ ಸ್ವೀಕರಿಸಿದ ನಂತರ ಯಾತ್ರೆ ಮುಂದುವರಿಯಲಿದೆ. ಬಸವೇನಹಳ್ಳಿ ಕಾಡುಗೊಲ್ಲರ ಹಟ್ಟಿಯಲ್ಲಿ ವಾಸ್ತವ್ಯ ಹೂಡಲಾಗುತ್ತದೆ. ಅಲ್ಲಿ ರಾತ್ರಿ ಪೂಜೆ, ಸಾಮೂಹಿಕ ಅನ್ನದಾನದ ಬಳಿಕ ಇಡೀ ರಾತ್ರಿ ಗಣೆಪದ, ಕೋಲಾಟ, ದೇವರ ಕುಣಿತ ನಡೆಯಲಿದೆ. ಹಲಗುಗಳ ಮೆರವಣಿಗೆ ನಡೆಯಲಿದೆ ಎಂದರು.

ಏಪ್ರಿಲ್ 10ರಂದು ಮುಂಜಾನೆ 4 ಗಂಟೆಗೆ ಬಸವೇನಹಳ್ಳಿಯಿಂದ ಹೊರಟು ಶಿವಗಂಗಾ ಕ್ಷೇತ್ರ ತಲುಪಲಿದೆ.ಏಪ್ರಿಲ್‌ 11ರಂದು ಬೆಳಿಗ್ಗೆ 10 ಗಂಟೆಗೆ ಶಿವಗಂಗಾ ಕ್ಷೇತ್ರದ ದೇವರ ದೊಡ್ಡಕೆರೆಯಲ್ಲಿ ಗಂಗಾಪೂಜೆ, ಜಲಧಿ ಮಹೋತ್ಸವವು ಕಾಡುಗೊಲ್ಲರ ಜನಪದ ಸಂಪ್ರದಾಯದಂತೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಹೋಮ ಮತ್ತು ಮಹಾಭಿಷೇಕ ನಡೆಯಲಿದೆ. ಸಂಜೆ 5 ಗಂಟೆಗೆ ಕೆರೆ ಅಂಗಳದಲ್ಲಿ ಪಟ್ಟಕ್ಕೆ ಕೂರಿಸಲಾಗುವುದು. ರಾತ್ರಿ ಕೋಲಾಟ, ಗಣೆಪದ, ದೇವರ ಕುಣಿತ, ಜನಪದ ಕಥನ ಕಾವ್ಯದ ಹಾಡುಗಾರಿಕೆ ನಡೆಯಲಿದೆ. ಸಾವರಿ ಒಕ್ಕಲುಗಳಿಂದ ಅನ್ನ ಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.

ಮಂಡ್ಯ, ರಾಮನಗರ, ತುಮ ಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲೆಸಿರುವ ಕಾಡುಗೊಲ್ಲರ ಗೌಡ, ಪೂಜಾರಿ, ದಳವಾಯಿ, ದಾಸಯ್ಯರು ಭಾಗವಹಿಸಲಿದ್ದಾರೆ. 50 ವರ್ಷಗಳ ನಂತರ ನಡೆಯುತ್ತಿರುವ ಜಲಧಿ ಮಹೋತ್ಸವದಲ್ಲಿ ಜನಪದ ಸಂಭ್ರಮ ನಡೆಯಲಿದೆ ಎಂದರು.

ಮುಖಂಡರಾದ ಬಸವೇನಹಳ್ಳಿ ಕರಿಯಪ್ಪ, ಗಿರಿಸ್ವಾಮಿ, ಚಿಕ್ಕಣ್ಣ, ಮಾರಣ್ಣ, ಸುರೇಶ್, ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT