ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಜಾರಿಗೆ ಬದ್ಧ: ಅಶ್ವತ್ಥ ನಾರಾಯಣ

ಏಳು ಬಾರಿ ಶಾಸಕರಾದ ಡಿಕೆಶಿ ಜಿಲ್ಲೆಗೆ ನೀಡಿದ ಕೊಡುಗೆ ಏನು: ಅಶ್ವತ್ಥನಾರಾಯಣ ಪ್ರಶ್ನೆ
Last Updated 12 ಜನವರಿ 2022, 5:25 IST
ಅಕ್ಷರ ಗಾತ್ರ

ರಾಮನಗರ: `ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ತಾಕತ್ತು ಇರುವುದು ಬಿಜೆಪಿಗೆ ಮಾತ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಅವರಿಗೆ ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಡಿ.ಕೆ.ಶಿವಕುಮಾರ್ ಜಿಲ್ಲೆಯಿಂದ ಏಳು ಬಾರಿ ಶಾಸಕರಾಗಿ, ಹಲವು ಬಾರಿ ಮಂತ್ರಿಯಾಗಿದ್ದಾರೆ. ಇವರ ಸಹೋದರ ಎರಡು ಬಾರಿ ಸಂಸದರಾಗಿದ್ದಾರೆ. ಆದರೆ ಇಷ್ಟು ವರ್ಷಗಳಲ್ಲಿ ಜಿಲ್ಲೆಗೆ ಇವರ ಕೊಡುಗೆ ಏನು? ಜಿಲ್ಲೆಯಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ, ಸಂಪನ್ಮೂಲವನ್ನು ಲೂಟಿ ಹೊಡೆದಿರುವುದನ್ನು ಬಿಟ್ಟರೆ ಇವರೇನು ಕಡಿದು ಕಟ್ಟೆ ಹಾಕಿದ್ದಾರೆ?’ ಎಂದು ಕಿಡಿಕಾರಿದರು.

ಜನಪ್ರತಿನಿಧಿಗಳಾದವರಿಗೆ ಜನರ ಕೆಲಸ ಮಾಡಲು ಸಮಯ ಸಾಕಾಗುವುದಿಲ್ಲ. ಆದರೆ ಏಳು ಬಾರಿ ಶಾಸಕರಾಗಿ ಗೆದ್ದು ಬಂದ ಡಿ.ಕೆ.ಶಿವಕುಮಾರ್ ಜಿಲ್ಲೆಯ ಅಭಿವೃದ್ಧಿ ಮಾಡುವುದನ್ನು ಬಿಟ್ಟು ತಾವೇ ವ್ಯಾಪಾರ-ವಹಿವಾಟು ನಡೆಸಿಕೊಂಡು ಕೂತಿದ್ದರು. ಒಬ್ಬ ಶಾಸಕನಿಗೆ ಬಿಜಿನೆಸ್ ಮಾಡಲು ಸಮಯ ಎಲ್ಲಿರುತ್ತದೆ ಹೇಳಿ? ಜನರ ನಂಬಿಕೆ ಕಳೆದುಕೊಂಡಿರುವ ಕಾಂಗ್ರೆಸ್ ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ದಾರಿದ್ರ್ಯದಲ್ಲಿದೆ ಎಂದು ಅಶ್ವತ್ಥನಾರಾಯಣ ಹರಿಹಾಯ್ದರು.

`ರಾಜ್ಯದಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ಸೇ ಅಧಿಕಾರದಲ್ಲಿತ್ತು. ಅವರ ಯೋಗ್ಯತೆಗೆ ಮೇಕೆದಾಟು ಯೋಜನೆ ಸಂಬಂಧ ಒಂದು ಕಾರ್ಯಸಾಧ್ಯತಾ ವರದಿಯನ್ನಾಗಲಿ, ಡಿಪಿಆರ್ ವರದಿಯನ್ನೇ ಆಗಲಿ ಸಿದ್ಧಪಡಿಸಲು ಆಗಲಿಲ್ಲ. ಯಃಕಶ್ಚಿತ್ ಒಂದು 4ಜಿ ವಿನಾಯಿತಿ ಕೊಡಲು ಸಿದ್ದರಾಮಯ್ಯ ಮೂರು ವರ್ಷ ತೆಗೆದುಕೊಂಡರು. ಆ ಅವಧಿಯಲ್ಲಿ ರಾಜ್ಯಕ್ಕೆ ಯಾವ ಅಡೆತಡೆಗಳೂ ಇರಲಿಲ್ಲ. ಇದಕ್ಕೂ ಮೊದಲು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಕಾವೇರಿ ವಿವಾದದ ಅಂತಿಮ ತೀರ್ಪನ್ನು 6 ವರ್ಷಗಳಾದರೂ ಗೆಜೆಟ್ಟಿನಲ್ಲೇಕೆ ಪ್ರಕಟಿಸಲಿಲ್ಲ? ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಸನ್ನು ನಾವು ರಾಜಕೀಯವಾಗಿ ಬೆತ್ತಲು ಮಾಡಲಿದ್ದೇವೆ’ ಎಂದು ಸಚಿವರು ಹೇಳಿದರು.

ಮೇಕೆದಾಟು ಯೋಜನೆ ಜಾರಿಗೆ ಬಿಜೆಪಿ ಬದ್ಧವಾಗಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುವ ಮೂಲಕ ಇಡೀ ವಿಚಾರಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿದೆ ಎಂದು ಆರೋಪಿಸಿದರು.

ಪರ್ಯಾಯ ಭೂಮಿ: ನಮ್ಮ ಸರ್ಕಾರ ಬಂದಮೇಲೆ ಎನ್.ಜಿ.ಟಿ. ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಜತೆಗೆ ಮುಳುಗಡೆಯಾಗಲಿರುವ 5 ಸಾವಿರ ಎಕರೆ ಅರಣ್ಯ ಭೂಮಿಗೆ ಪರ್ಯಾಯವಾಗಿ ನೀಡಲು ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈಗಾಗಲೇ 7,500 ಎಕರೆಯನ್ನು ಗುರುತಿಸಲಾಗಿದೆ. ಇದನ್ನೆಲ್ಲ ಕಾಂಗ್ರೆಸ್ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

`ಬಿಜೆಪಿ ಸರ್ಕಾರ ಬಂದಮೇಲೆ ರಾಮನಗರ ಜಿಲ್ಲೆಯಲ್ಲಿ 7 ಏತ ನೀರಾವರಿ ಯೋಜನೆಗಳನ್ನು ಆರಂಭಿಸಲಾಗಿದೆ. ಇಗ್ಗಲೂರು ಏತ ನೀರಾವರಿ ಯೋಜನೆಯನ್ನಂತೂ 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮುಗಿಸಲಾಗಿದೆ. ಹಾಗೆಯೇ, ಜಿಲ್ಲೆಯ ಮನೆಮನೆಗೂ ನದೀಮೂಲದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಹಿಂದೆ 2008-13ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಕಾವೇರಿ ಕಣಿವೆಯ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಮೊತ್ತದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿತು. 60 ವರ್ಷ ರಾಜ್ಯವನ್ನು ಆಳಿರುವ ಕಾಂಗ್ರೆಸ್ ಮಾಡಿರುವುದೇನು?’ ಎಂದು ಅವರು ಪ್ರತಿಪಾದಿಸಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಸಿದ್ಧರಾಜು, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ಮುಖಂಡ ಕೇಶವಪ್ರಸಾದ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT