ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಅಂಗೈನಲ್ಲೇ ಕೃಷಿ ಮಾಹಿತಿ! ಕೃಷಿ ಇಲಾಖೆಯಿಂದ ‘ಕೃಷಿ ಚೇತನ’ ವಾಟ್ಸಪ್‌ ಗುಂಪು

Last Updated 29 ಮೇ 2019, 19:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ರೈತರು ಸದ್ಯ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಅಲೆಯಬೇಕಿಲ್ಲ. ಅಗತ್ಯ ಮಾಹಿತಿಗಳು ನೇರ ಅವರ ಮೊಬೈಲ್‌ ಸೇರುತ್ತಿದೆ.

ಕೃಷಿ ಇಲಾಖೆಯ ಜಿಲ್ಲೆಯ ಅಧಿಕಾರಿಗಳು ವಾಟ್ಸಪ್‌ ಗ್ರೂಪ್‌ಗಳನ್ನು ರಚಿಸಿದ್ದು, ಅವುಗಳ ಮೂಲಕವೇ ರೈತರಿಗೆ ಬೇಕಾದ ಮಾಹಿತಿ ಎಲ್ಲವೂ ರವಾನೆ ಆಗುತ್ತಿದೆ. ಸದ್ಯ ಜಿಲ್ಲೆಯ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆ ಸಂದರ್ಭ ಅನುಸರಿಸಬೇಕಾದ ಕ್ರಮಗಳು, ಮಳೆಯ ಕೊರತೆಯಾದಲ್ಲಿ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಬಗ್ಗೆ ಕನ್ನಡದಲ್ಲಿ ಬರಹಗಳ ಸಂದೇಶವನ್ನು ಈ ಗುಂಪುಗಳಿಗೆ ಕಳುಹಿಸಲಾಗುತ್ತಿದೆ.

ಕೃಷಿ ಇಲಾಖೆಯು ಈ ಬಾರಿಯ ಬೆಳೆ ವಿಮೆಗೆ ರೈತರಿಂದ ಅರ್ಜಿ ಆಹ್ವಾನಿಸಿದೆ. ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಬೆಳೆಗೆ ವಿಮೆ ಸೌಲಭ್ಯವಿದೆ. ರೈತರು ಕಟ್ಟಬೇಕಾದ ಕಂತಿನ ಮೊತ್ತವೆಷ್ಟು? ಎಂಬೆಲ್ಲ ಮಾಹಿತಿಯನ್ನೂ ಈ ಗ್ರೂಪ್‌ಗಳ ಮೂಲಕವೇ ರವಾನಿಸಲಾಗುತ್ತಿದೆ. ಇದಲ್ಲದೆ ಬೆಳೆ ರಕ್ಷಣೆ, ಕೀಟಬಾಧೆಗೆ ಕೈಗೊಳ್ಳಬೇಕಾದ ಕ್ರಮಗಳು, ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ಮಾಹಿತಿಯೂ ಈ ಗುಂಪುಗಳಲ್ಲಿ ಹರಿದಾಡುತ್ತಿದೆ.

ಸಿಬ್ಬಂದಿ ಕೊರತೆ

ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿ ಪ್ರತಿ ರೈತನನ್ನೂ ತಲುಪುವುದು ಕಷ್ಟ. ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಅನುಸರಿಸಲಾಗುತ್ತಿದೆ. ಇದರ ಒಂದು ಭಾಗವಾಗಿ ಅಂತರ್ಜಾಲ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಇಲಾಖೆಯ ಜಂಟಿ ನಿರ್ದೇಶಕ ಜಿ.ಎಚ್‌. ಯೋಗೇಶ್‌.

‘ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಒಟ್ಟು 127 ಗ್ರೂಪ್‌ಗಳನ್ನು ರಚಿಸಲಾಗುವುದು. ಪ್ರತಿ ಗುಂಪಿಗೆ 250 ರೈತ ಸದಸ್ಯರ ಗುರಿ ಹೊಂದಲಾಗಿದೆ. ಒಟ್ಟಾರೆ 32 ಸಾವಿರ ರೈತರನ್ನು ಈ ಮೂಲಕ ನಾವು ತಲುಪಬಹುದಾಗಿದೆ. ಗ್ರಾಮ ಮಟ್ಟದ ಪ್ರತಿ ಗುಂಪಿಗೂ ಸಂಬಂಧಿಸಿದ ಸಿಬ್ಬಂದಿ ಇಲ್ಲವೇ ಅಧಿಕಾರಿಯನ್ನು ಸಹ ಸದಸ್ಯರನ್ನಾಗಿ ಮಾಡಲಾಗಿದೆ. ಇದರಿಂದ ರೈತರು ಹಾಗೂ ಅಧಿಕಾರಿಗಳ ನಡುವೆ ನೇರ ಸಂವಹನ ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

‘ಜಿಲ್ಲೆಯಲ್ಲಿ 2017ರಲ್ಲಿಯೇ ಈ ಕಾರ್ಯ ಆರಂಭವಾಗಿತ್ತು. ವಿಧಾನಸಭೆ, ಲೋಕಸಭೆ ಚುನಾವಣೆಗಳು ಮೊದಲಾದ ಕಾರಣಕ್ಕೆ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲವಾಗಿರಲು ಸಾಧ್ಯವಾಗಿರಲಿಲ್ಲ. ಈಗ ಇದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ’ ಎಂದು ಯೋಗೇಶ್‌ ಹೇಳುತ್ತಾರೆ.

ಎಲ್ಲಿ ಎಷ್ಟೆಷ್ಟು

ರಾಮನಗರ ತಾಲ್ಲೂಕು: ಇಲ್ಲಿನ ಕಸಬಾ ಹೋಬಳಿಯಲ್ಲಿ 4 ವಾಟ್ಸಪ್‌ ಗುಂಪುಗಳು ರಚನೆಯಾಗಿದ್ದು, 373 ರೈತರು ಇದರ ಸದಸ್ಯರಾಗಿದ್ದಾರೆ. ಕೈಲಾಂಚ ಹೋಬಳಿಯಲ್ಲಿ 5 ಗುಂಪುಗಳಿದ್ದು 166 ರೈತರು, ಕೂಟಗಲ್‌ ಹೋಬಳಿಯಲ್ಲಿ ಗುಂಪುಗಳಿಂದ 130 ರೈತರು ಹಾಗೂ ಬಿಡದಿಯಲ್ಲಿ 3 ಗುಂಪುಗಳಿಂದ 60 ರೈತರು ಇದರ ಸದಸ್ಯರಾಗಿದ್ದಾರೆ.

ಚನ್ನಪಟ್ಟಣ ತಾಲ್ಲೂಕು: ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಆರು ಗುಂಪುಗಳಿದ್ದು 220 ಸದಸ್ಯರಾಗಿದ್ದಾರೆ. ಅಂತೆಯೇ ಮಳೂರು ಹೋಬಳಿಯಲ್ಲಿ 9 ಗುಂಪುಗಳಿಂದ 197 ಸದಸ್ಯರು, ವಿರೂಪಾಕ್ಷಿಪುರ ಹೋಬಳಿಯಲ್ಲಿ 7 ಗುಂಪುಗಳಿಂದ 174 ಸದಸ್ಯರನ್ನು ಹೊಂದಲಾಗಿದೆ.

ಮಾಗಡಿ ತಾಲ್ಲೂಕು: ಕಸಬಾ ಹೋಬಳಿಯಲ್ಲಿ 7 ಗುಂಪುಗಳಿಂದ 134 ಸದಸ್ಯರು, ತಿಪ್ಪಸಂದ್ರದಲ್ಲಿ 6 ಗುಂಪುಗಳಿಂದ 231, ಮಾಡಬಾಳ್‌ 6 ಗುಂಪಿನಿಂದ 150, ಕುದೂರು 8 ಗುಂಪಿನಿಂದ 212 ಹಾಗೂ ಸೋಲೂರು ಹೋಬಳಿಯಲ್ಲಿ 6 ಗುಂಪಿನಿಂದ 220 ರೈತರು ವಾಟ್ಸಪ್‌ ಗುಂಪುಗಳ ಸದಸ್ಯತ್ವ ಪಡೆದಿದ್ದಾರೆ.

ಕನಕಪುರ ತಾಲ್ಲೂಕು: ಕಸಬಾ ಹೋಬಳಿಯಲ್ಲಿ 10 ಗುಂಪಿನಲ್ಲಿ 410, ಹಾರೋಹಳ್ಳಿ 6 ಗುಂಪಿನಲ್ಲಿ 275, ಕೋಡಿಹಳ್ಳಿ 7 ಗುಂಪಿನಲ್ಲಿ 230, ಸಾತನೂರು 7 ಗುಂಪಿನಲ್ಲಿ 300, ಉಯ್ಯಂಬಳ್ಳಿ 7 ಗುಂಪಿನಲ್ಲಿ 375 ಹಾಗೂ ದೊಡ್ಡಮರಳವಾಡಿ 6 ಗುಂಪಿನಲ್ಲಿ 280 ರೈತರು ಇದರ ಸದಸ್ಯತ್ವ ಪಡೆದಿದ್ದಾರೆ. ಗುಂಪು ಸೇರಬಯಸುವ ರೈತರು ಹತ್ತಿರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ತಾಲ್ಲೂಕುವಾರು ಕೃಷಿ ಚೇತನ ಗುಂಪುಗಳ ಸಂಖ್ಯೆ

ತಾಲ್ಲೂಕು ಗುಂಪುಗಳು ರೈತ ಸದಸ್ಯರು ಅಧಿಕಾರಿಗಳು ಒಟ್ಟು
ರಾಮನಗರ 17 729 90 819
ಚನ್ನಪಟ್ಟಣ 22 591 28 619
ಮಾಗಡಿ 33 947 24 971
ಕನಕಪುರ 43 1870 21 1891
ಒಟ್ಟು 115 4137 163 2409

* ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ವಾಟ್ಸಪ್‌ ಗುಂಪುಗಳ ಮೂಲಕ ಅದನ್ನು ನೀಗಿಸುವ ಪ್ರಯತ್ನ ನಡೆದಿದೆ. ಇದರಿಂದ ರೈತರ ಜೊತೆ ನೇರ ಸಂವಹನ ಸಾಧ್ಯವಾಗಿದೆ
–ಜಿ.ಎಚ್‌. ಯೋಗೇಶ್
ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT