ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ನಿರ್ಮಾಣಕ್ಕೆ ಸಿಗುತ್ತ ಜಾಗ?

ಈಗಲ್‌ಟನ್‌ ಒತ್ತುವರಿ ಮಾಡಿದ್ದ ಗೋಮಾಳ ಬಿಟ್ಟುಕೊಡಲು ಕ್ರೀಡಾ ಇಲಾಖೆ ಮನವಿ
Last Updated 19 ಸೆಪ್ಟೆಂಬರ್ 2021, 5:12 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಈಗಲ್‌ಟನ್‌ ರೆಸಾರ್ಟ್‌ ವಶದಲ್ಲಿದ್ದ ಜಾಗ ಇದೀಗ ಜಿಲ್ಲಾಡಳಿತದ ಕೈಗೆ ಬಂದಿದ್ದು, ಇಲ್ಲೊಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರೀಡಾ ಇಲಾಖೆ ಉತ್ಸಾಹ ತೋರಿದೆ.

ಈ ಸಂಬಂಧ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಪತ್ರ ಬರೆದಿದ್ದು, ಜಿಲ್ಲಾಡಳಿತವು ವಶಕ್ಕೆ ಪಡೆದಿರುವ 77 ಎಕರೆ 18 ಗುಂಟೆ ಜಮೀನನ್ನು ಕ್ರೀಡಾ ಇಲಾಖೆಗೆ ನೀಡುವಂತೆ ಕೋರಿದ್ದಾರೆ. ಹಾಗೊಂದು ವೇಳೆ ಜಾಗ ನೀಡಿದಲ್ಲಿ ಅಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ಆಗುವಂತೆ ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡುವುದಾಗಿಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಜಿಲ್ಲಾಡಳಿತ ವಶಪಡಿಸಿಕೊಂಡಿರುವ ಜಾಗವು ಹಸಿರು ಹುಲ್ಲುಹಾಸಿನಿಂದ ಆವೃತವಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಉತ್ತಮವಾಗಿದೆ. ಈ ಜಾಗ ಬೆಂಗಳೂರಿಗೆ ಸಮೀಪದಲ್ಲಿಯೂ ಇದೆ. ಮತ್ತೊಂದೆಡೆ ಕ್ರೀಡಾ ಇಲಾಖೆಯು ಯುವ ಪ‍್ರತಿಭೆಗಳಿಗೆ ಕ್ರೀಡಾ ತರಬೇತಿ ನೀಡಲು ಬೆಂಗಳೂರು ಹೊರವಲಯದಲ್ಲಿ ಉತ್ತಮ ದರ್ಜೆಯ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗದ ಹುಡುಕಾಟದಲ್ಲಿದೆ. ಹೀಗಾಗಿ ಸದ್ಯ ಗಾಲ್ಫ್‌ ಅಂಗಳವಾಗಿ ಬದಲಾಗಿರುವ ಸರ್ಕಾರಿ ಗೋಮಾಳವನ್ನೇ ನೀಡುವಂತೆ ಕೋರಿ ಪ್ರಸ್ತಾವ ಸಲ್ಲಿಸಿದೆ.

ಹೋರಾಟದ ಫಲ: ಬಿಡದಿ ಹೋಬಳಿಯ ಬಿಲ್ಲಕೆಂಪನಹಳ್ಳಿ ಸಮೀಪ ಚಾಮುಂಡೇಶ್ವರಿ ಬಿಲ್ಡ್‌ಟೆಕ್‌ ಪ್ರೈ.ಲಿ. ಕಂಪನಿಯು ಈಗಲ್‌ಟನ್ ರೆಸಾರ್ಟ್‌ಗೆ ಹೊಂದಿಕೊಂಡಂತೆ 132 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಲೇಔಟ್‌ ಹಾಗೂ ನಂತರದಲ್ಲಿ ಗಾಲ್ಫ್ ಕೋರ್ಟ್ ರಚಿಸಿತ್ತು.

1997ರಲ್ಲಿ ಈ ಒತ್ತುವರಿಯನ್ನು ಪತ್ತೆ ಮಾಡಿದ್ದ ಅಂದಿನ ರಾಮನಗರ ತಹಶೀಲ್ದಾರ್ ಸಂಬಂಧಿಸಿದ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ನಂತರದಲ್ಲಿ ಈ ಪ್ರಕರಣ ವಿವಿಧ ನ್ಯಾಯಾಲಯಗಳ
ಮೆಟ್ಟಿಲೇರಿತ್ತು.

2014ರಲ್ಲಿ ಸುಪ್ರೀಂ ಕೋರ್ಟ್‌ ಅಧೀನ ನ್ಯಾಯಾಲಯಗಳ ಆದೇಶ ಎತ್ತಿ ಹಿಡಿದಿದ್ದು, 77 ಎಕರೆ 18 ಗುಂಟೆಗೆ ಇಂದಿನ ಮಾರುಕಟ್ಟೆ ದರದಲ್ಲಿ ಹಣ ವಸೂಲಿ ಮಾಡುವಂತೆ ತಿಳಿಸಿತ್ತು. ಅದರಂತೆ ಸರ್ಕಾರ ಜಿಲ್ಲಾಡಳಿತದ ವರದಿ ಆಧರಿಸಿ ಪ್ರತಿ ಚದರ ಅಡಿಗೆ ₹ 2,904ರಂತೆ ಬರೋಬ್ಬರಿ ₹ 980 ಕೋಟಿ ದರ ನಿಗದಿ ಮಾಡಿತ್ತು. ಆದರೆ, ಇದಕ್ಕೆ ಒಪ್ಪದ ಒತ್ತುವರಿದಾರರು ತಾವು ₹ 12.35 ಕೋಟಿ ಮಾತ್ರ ಪಾವತಿಸಲು ಸಿದ್ಧವಿರುವುದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಚೆಗೆ ಈ ಅರ್ಜಿಯನ್ನು ವಜಾ ಮಾಡಿದ್ದ ಹೈಕೋರ್ಟ್‌, ನಿಗದಿತ ಪ್ರಮಾಣದ ದಂಡ ಪಾವತಿಸುವಂತೆ ಸೂಚಿಸಿತ್ತು.

‘ಸುಪ್ರೀಂ ಕೋರ್ಟ್ ಆದೇಶದಂತೆ ದಂಡ ವಸೂಲಿ ಮಾಡಬೇಕು. ಇಲ್ಲವೇ ಗೋಮಾಳವನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹೋರಾಟ ಮಾಡುತ್ತಲೇ ಬಂದಿದ್ದೆವು. ಇಂದು ಅದಕ್ಕೆ ಜಯ ದೊರೆತಿದೆ. ಸರ್ಕಾರ ಒತ್ತುವರಿ ತೆರವುಗೊಳಿಸಿದವರ ಜೊತೆಗೆ ಅದಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬೇಕು. ಜಿಲ್ಲೆಯ ವಿವಿಧೆಡೆ ಆಗಿರುವ ಇಂತಹ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು’ ಎನ್ನುತ್ತಾರೆ ರೈತ ಮುಖಂಡ ಸಿ.
ಪುಟ್ಟಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT