ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ ಕಾರ್ಯಕ್ಕೆ ದಿನಗಣನೆ: ಯಾರಿಗೆ ಒಲಿಯುತ್ತೆ ವಿಜಯದ ಮಾಲೆ?

ಬೆಂಗಳೂರು ಗ್ರಾಮಾಂತರ ಕ್ಷೇತ್ರ
Last Updated 20 ಮೇ 2019, 19:38 IST
ಅಕ್ಷರ ಗಾತ್ರ

ಅಂಕಿ–ಅಂಶ
24,97,141 ಕ್ಷೇತ್ರದಲ್ಲಿನ ಒಟ್ಟು ಮತದಾರರು

16,20,440ಮತ ಚಲಾಯಿಸಿದವರು

64.89ಶೇಕಡವಾರು ಮತದಾನ ಪ್ರಮಾಣ

ರಾಮನಗರ: ಒಂದು ತಿಂಗಳ ಕಾಲದ ಕುತೂಹಲಕ್ಕೆ ತೆರೆ ಬೀಳುವ ದಿನ ಹತ್ತಿರವಾಗಿದ್ದು, ಇದೇ 23ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ನಡೆಯಲಿದೆ. ಇದರೊಟ್ಟಿಗೆ ಸೋಲು–ಗೆಲುವಿನ ಲೆಕ್ಕಾಚಾರವೂ ಗರಿಗೆದರಿದೆ.

ಕಾಂಗ್ರೆಸ್‌ನಿಂದ ಮೂರನೇ ಬಾರಿ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌, ಬಿಜೆಪಿಯಿಂದ ಪಕ್ಷದ ವಕ್ತಾರ ಅಶ್ವಥ್‌ ನಾರಾಯಣ ಗೌಡ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿ ಇದ್ದಾರೆ. ಏಪ್ರಿಲ್‌ 18ರಂದು ಕ್ಷೇತ್ರದಾದ್ಯಂತ ನಡೆದ ಮತದಾನದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ 16.20 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದರು.

ಏನೆನ್ನುತ್ತವೆ ಸಮೀಕ್ಷೆಗಳು: ಮಾಧ್ಯಮ ಸಂಸ್ಥೆಗಳು ಹಾಗೂ ಖಾಸಗಿ ಏಜೆನ್ಸಿಗಳು ನಡೆಸಿದ ಸಮೀಕ್ಷೆಯು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಮುನ್ಸೂಚನೆಯನ್ನು ನೀಡಿವೆ.

ಕ್ಷೇತ್ರದಲ್ಲಿ ಬದ್ಧ ರಾಜಕೀಯ ಎದುರಾಳಿಗಳಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದವು. ಹೀಗಾಗಿ ಎರಡೂ ಪಕ್ಷಗಳ ಮತಗಳು ಒಗ್ಗೂಡಿದರೆ ಗೆಲುವು ಕಷ್ಟವೇನಲ್ಲ ಎನ್ನುವುದು ಮೈತ್ರಿ ಪಾಳಯದ ಲೆಕ್ಕಾಚಾರವಾಗಿದೆ. ಇಡೀ ಕ್ಷೇತ್ರದಲ್ಲಿ ಮೈತ್ರಿ ಪ್ರಚಾರ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು, ಮತದಾರರು ಕೈ ಹಿಡಿಯಲಿದ್ದಾರೆ ಎನ್ನುವ ವಿಶ್ವಾಸ ಕಾಂಗ್ರೆಸ್‌ನದ್ದಾಗಿದೆ.

ಸತತ ಮೂರನೇ ಬಾರಿಗೆ ಸಂಸದರಾಗುವ ಕನಸು ಹೊತ್ತಿರುವ ಡಿ.ಕೆ. ಸುರೇಶ್ ಚುನಾವಣೆಗೆ ವರ್ಷಕ್ಕೂ ಮುಂಚೆಯೇ ಸಿದ್ಧತೆ ಮಾಡಿಕೊಂಡಿದ್ದರು. ಕ್ಷೇತ್ರದ ಅಷ್ಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿದ್ದರು. ಬಿರುಸಿನ ಪ್ರಚಾರವೂ ನಡೆದಿತ್ತು. ಈ ಎಲ್ಲ ಅಂಶಗಳು ಮತದಾರರ ಮೇಲೆ ಪರಿಣಾಮ ಬೀರಿದ್ದು, ಕ್ಷೇತ್ರದಲ್ಲಿ ಖಂಡಿತ ಸುರೇಶ್ ಗೆಲ್ಲುತ್ತಾರೆ ಎನ್ನುವುದು ಕಾಂಗ್ರೆಸ್‌ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಬಿಜೆಪಿ ಕೂಡ ಗೆಲುವಿನ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದೆ. ದೇಶದಾದ್ಯಂತ ಈ ಬಾರಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುವುದಾಗಿ ಸಮೀಕ್ಷೆಗಳು ಹೇಳಿದ್ದು, ಕ್ಷೇತ್ರದಲ್ಲಿಯೂ ಅದೇ ಜಾದು ನಡೆದಿರಬಹುದು ಎನ್ನುವ ಲೆಕ್ಕಾಚಾರ ಪಕ್ಷದ ಕಾರ್ಯಕರ್ತರದ್ದು. ಕ್ಷೇತ್ರದಲ್ಲಿ ನಗರ ಮತದಾರರು ಹೆಚ್ಚಿದ್ದು, ಅಲ್ಲಿ ಮೋದಿ ಅಲೆ ಕೆಲಸ ಮಾಡಿದೆ. ಯುವಜನರು ಬಿಜೆಪಿ ಪರವಾಗಿಯೇ ಮತ ಹಾಕಿದ್ದಾರೆ ಎನ್ನುವ ವಿಶ್ವಾಸ ಮಾತುಗಳು ಅವರದ್ದು.

ಕಡೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು ಬಿಜೆಪಿಗೆ ಹಿನ್ನಡೆ ಆಗಿರುವ ಸಾಧ್ಯತೆಯೂ ಇದೆ. ಇದರಿಂದಾಗಿ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು ಅವರಿಂದ ಸಾಧ್ಯವಾಗಿಲ್ಲ. ಕಮಲ ಪಾಳಯವು ನಗರ ಮತದಾರರನ್ನು ಬಹುವಾಗಿ ನೆಚ್ಚಿಗೊಂಡಿತ್ತು. ಆದರೆ ಬೆಂಗಳೂರು ನಗರ ವ್ಯಾಪ್ತಿಯ ಮೂರು ಕ್ಷೇತ್ರಗಳಾದ ರಾಜರಾಜೇಶ್ವರಿ ನಗರ, ಆನೇಕಲ್‌ ಹಾಗೂ ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಮತದಾನವಾಗಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಎಣಿಕೆ ಕಾರ್ಯಕ್ಕೆ ಸಿದ್ಧತೆ

ರಾಮನಗರದ ಅರ್ಚಕರಹಳ್ಳಿ ಬಳಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದೆ.

ಕಳೆದ ಒಂದು ತಿಂಗಳಿನಿಂದ ಇಲ್ಲಿನ ಸ್ಟ್ರಾಂಗ್‌ ರೂಮುಗಳಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು, ಮಿಲಿಟರಿ ಪಡೆ ಹಾಗೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಜಿಲ್ಲಾಡಳಿತವು ಮತ ಎಣಿಕೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಎಣಿಕೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಸೋಮವಾರ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಮುನ್ನಡೆ, ಗೆಲುವಿನ ಬೆಟ್ಟಿಂಗ್‌

ಎಣಿಕೆ ದಿನ ಸಮೀಪಿಸುತ್ತಿದ್ದಂತೆ ಬೆಟ್ಟಿಂಗ್‌ ಕಾರ್ಯವೂ ಜೋರಾಗಿ ನಡೆದಿದೆ. ಆದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕಿಂತ ಮಂಡ್ಯ ಕ್ಷೇತ್ರದ ಮೇಲೆಯೇ ಇಲ್ಲಿನ ಜನರು ಪಣ ಹೂಡತೊಡಗಿದ್ದಾರೆ.

ರಾಮನಗರ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರು ನಿಖಿಲ್‌ ಪರವಾಗಿ ಹೆಚ್ಚು ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡರೆ, ಇತರರು ಸುಮಲತಾ ಪರವಾಗಿ ಹಣ ಹೂಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವಿಗಿಂತ ಗೆದ್ದ ಅಭ್ಯರ್ಥಿ ಎಷ್ಟು ಮುನ್ನಡೆ ಪಡೆಯಬಹುದು ಎನ್ನುವ ಬಗ್ಗೆಯೇ ಹೆಚ್ಚು ಆಸಕ್ತಿ ಇದೆ. ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಎಷ್ಟು ಮುನ್ನಡೆ ಪಡೆಬಹುದು ಎನ್ನುವ ಲೆಕ್ಕಾಚಾರವು ಸದ್ಯ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT