ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಬಿತ್ತಿ’

Last Updated 13 ಜುಲೈ 2019, 13:35 IST
ಅಕ್ಷರ ಗಾತ್ರ

ಮಾಗಡಿ: ಶಾಲೆಗಳು ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಬಿತ್ತಿ ಬೆಳೆಸುವ ಕೇಂದ್ರಗಳಾಬೇಕು ಎಂದು ಲೇಖಕ ಗಂ.ದಯಾನಂದ ಅಭಿಪ್ರಾಯಪಟ್ಟರು.

ಪಟ್ಟಣದ ಮಾರುತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಪಠ್ಯಪುಸ್ತಕದ ಜತೆಗೆ ದಿನಪತ್ರಿಕೆಗಳನ್ನು ನಿತ್ಯ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನಸಂಪನ್ನರಾಗಬೇಕು. ಶಿಕ್ಷಕ ವೃತ್ತಿ ಪರಮ ಪವಿತ್ರವಾದುದು. ಮಕ್ಕಳಿಗೆ ದ್ರೋಹ ಮಾಡದಂತೆ ಪಾಠ ಬೋಧಿಸಬೇಕು. ನಿಜವಾದ ಶಿಕ್ಷಕರು ಪ್ರತಿ ತಿಂಗಳ ಸಂಬಳದಲ್ಲಿ ಶೇ10ರಷ್ಟನ್ನು ಮಕ್ಕಳ ಶ್ರೇಯೋಭಿವೃದ್ಧಿಗೆ ಬಳಸುತ್ತಾರೆ. ಇತರರಿಗೂ ಇದು ಅನುಕರಣೀಯ ಎಂದರು.

ಮಾರುತಿ ವಿದ್ಯಾಸಂಸ್ಥೆ ಸಂಸ್ಥಾಪಕ ಎಚ್‌.ಎಚ್‌.ಗಂಗರಾಜು ಮಾತನಾಡಿ, ಜೀವನ ರೂಪಿಸಿಕೊಳ್ಳಲು ಹಲವು ದಾರಿಗಳಿವೆ. ಶಿಸ್ತು, ಶ್ರದ್ಧೆ, ಸತತ ಅಧ್ಯಯನ, ಸಮಯ ಪಾಲನೆ ಬೆಳೆಸಿಕೊಳ್ಳಬೇಕು. ಸಾಧಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ತಿಳಿಸಿದರು.

ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ ವರಲಕ್ಷ್ಮಿ ಮಾತನಾಡಿ, ಅಧ್ಯಯನದಿಂದ ಬಹುದೊಡ್ಡ ಸಾಧಕರಾಗಬಹುದು. ಸತತ ಅಭ್ಯಾಸವೇ ಸಾಧನೆ ಗುಟ್ಟು ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಕನ್ನಡ ಉಪನ್ಯಾಸಕ ಮಂಜುನಾಥ ಎಲ್ಲಾ ವಿದ್ಯಾರ್ಥಿಗಳಿಗೂ ಸ್ವಂತ ಖರ್ಚಿನಿಂದ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಮಠದಿಂದ ಹೊರತಂದಿರುವ ಪುಸ್ತಕಗಳನ್ನು ವಿತರಿಸಿದರು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳಾದ ತೇಜಸ್ವಿನಿ, ನವೀನ್‌ ಅನಿಸಿಕೆ ಹಂಚಿಕೊಂಡರು. ಲೇಖಕ ಗಂ.ದಯಾನಂದ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮೇಲ್ವಿಚಾರಕ ನರಸಿಂಹಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT