ಮಂಗಳವಾರ, ಅಕ್ಟೋಬರ್ 15, 2019
24 °C

ಎಚ್‌ಡಿಕೆ 2 ಬಾರಿ ಸಿಎಂ ಆದರೂ ಸಮಸ್ಯೆಗಳೇಕೆ ಬಗೆಹರಿದಿಲ್ಲ: ಸಚಿವ ಸಿ.ಟಿ. ರವಿ

Published:
Updated:

ರಾಮನಗರ: ‘1994 ರಿಂದ ಜಿಲ್ಲೆಯಲ್ಲಿ ಅವರೇ (ಕುಮಾರಸ್ವಾಮಿ) ಇದ್ದಾರೆ. ಎರಡು ಬಾರಿ ಸಿಎಂ ಆಗಿದ್ದಾರೆ. ಅವರ ತಂದೆ ಕೂಡ ಸಿಎಂ ಆಗಿದ್ದಾರೆ. ಆದರೆ, ಇಲ್ಲಿನ ಸಮಸ್ಯೆಗಳು ಇನ್ನೂ ಯಾಕೆ ಬಗೆಹರಿದಿಲ್ಲ ಅಂತ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಸಚಿವ ಸಿ.ಟಿ. ರವಿ ಹೇಳಿದರು.

ಇಲ್ಲಿನ ಯಂಗಯ್ಯನ ಕೆರೆ ಉದ್ಯಾನದಲ್ಲಿ ನಡೆಯುತ್ತಿರುವ ಆಹಾರ ಮೇಳಕ್ಕೆ ಸೋಮವಾರ ಭೇಟಿ ನೀಡಿದ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಪ್ರಾರಂಭವಾಗಿದ್ದು ಬಿಜೆಪಿ ಸರ್ಕಾರದಲ್ಲಿ. ನಾವು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ, ಜನರ ಮುಖ ನೋಡಿ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

‘ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಗೆ ಅನುದಾನವನ್ನು ಬಿಜೆಪಿ ಸರ್ಕಾರ ಕಡಿತ ಮಾಡಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಹಿನ್ನೆಲೆಯಲ್ಲಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಇಗ್ಗಲೂರು ಜಲಾಶಯದ ಬಳಿ ₹2 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ದಿ ಪಡಿಸಲು ನಾನೇ ಹಣ ಬಿಡುಗಡೆ ಮಾಡಿಸಿದ್ದೇನೆ’ ಎಂದರು.

‘ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ಅವರ ಸರ್ಕಾರದಲ್ಲಿ ಸಿದ್ಧಗಂಗಾ ಶ್ರೀಗಳು, ಆದಿಚುಂಚನಗಿರಿ ಶ್ರೀಗಳ ಗ್ರಾಮದ ಅಭಿವೃದ್ದಿಗೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಆದರೆ ಒಂದೇ ಒಂದು ರೂಪಾಯಿ ಹಣ ಬಿಡುಗಡೆಯಾಗಿಲ್ಲ, ಅವರು ಮಾಡಿಸಿಲ್ಲ’ ಎಂದು ಆರೋಪಿಸಿದರು.

‘ದೇಶದ ಇತಿಹಾಸದಲ್ಲಿ 75 ವರ್ಷ ದಾಟಿರುವವರಿಗೆ ಅಧಿಕಾರ ಕೊಟ್ಟಿರುವುದು ಯಡಿಯೂರಪ್ಪನವರಿಗೆ ಮಾತ್ರ. ಚುನಾವಣೆಯ ಪೂರ್ವದಲ್ಲಿಯೇ ಅವರೇ ನಮ್ಮ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದೆವು. ಬಿಎಸ್ ವೈ ಅವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೆ’ ಎಂದರು.

‘ಆದರೆ, ಕಾಂಗ್ರೆಸ್‌ನಲ್ಲಿ ಸರ್ವಾನುಮತವಿಲ್ಲ. ವಿರೋಧಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್ ಹೊಡೆದ ಮನೆಯಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಅವರೇ ವಿಪಕ್ಷ ನಾಯಕರಾದರೆ, ಒಂದು ಗುಂಪಿನ ನಾಯಕರಾಗುತ್ತಾರೆ’ ಎಂದು ಭವಿಷ್ಯ ನುಡಿದರು.

Post Comments (+)