ಶನಿವಾರ, ಡಿಸೆಂಬರ್ 7, 2019
22 °C
ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ, ಲೇಖಕ ಪಾಣ್ಯಂ ನಟರಾಜು ಬದುಕು ಬರಹ ಕುರಿತ ಸಮಾರಂಭ

‘ಯುವಜನರು ಸಾಹಿತ್ಯಾಸಕ್ತಿ ಹೊಂದಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಸಾಹಿತ್ಯ, ಕಲೆ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿರುವ ಹಿರಿಯ ಲೇಖಕ ಪಾಣ್ಯಂ ನಟರಾಜ್ ಅವರ ಬದುಕು ಇತರರಿಗೆ ಮಾದರಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ನಂಜಯ್ಯ ಹೇಳಿದರು.

ಇಲ್ಲಿನ ನಟರಾಜ ಬಡಾವಣೆಯಲ್ಲಿ ಕರ್ನಾಟಕ ಪ್ರತಿಭಾ ಕೇಂದ್ರದ ವತಿಯಿಂದ ಬುಧವಾರ ನಡೆದ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ಮತ್ತು ಲೇಖಕ ಪಾಣ್ಯಂ ನಟರಾಜು ಅವರ ಬದುಕು ಬರಹ ಕುರಿತ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿಶ್ವಕಂಡ ಅಪ್ರತಿಮ ಬುದ್ಧಿಮತ್ತೆಯ ಸರ್.ಎಂ.ವಿಶ್ವೇಶ್ವರಯ್ಯ ಬಡತನದಲ್ಲಿ ಜನಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಮಾರ್ಗದರ್ಶನದಲ್ಲಿ ಕೃಷ್ಣರಾಜಸಾಗರ ಕಟ್ಟಿಸಿದರು. ಮಾದರಿ ಮೈಸೂರು ರಾಜ್ಯ ನಿರ್ಮಿಸುವಲ್ಲಿ ದುಡಿದರು. ಸಾಧಕರ ಜೀವನ ಚರಿತ್ರೆ ಯುವಜನತೆ ಓದಬೇಕು. ಕರ್ನಾಟಕ ಪ್ರತಿಭಾ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ, ತಾಲ್ಲೂಕಿನ ಯುವಜನರಲ್ಲಿ ಸಾಂಸ್ಕೃತಿಕ ಮೌಲ್ಯ ಬಿತ್ತುವ, ಧಾರ್ಮಿಕ ಶಿಬಿರಗಳನ್ನು ಏರ್ಪಡಿಸುವ ಪಾಣ್ಯಂ ನಟರಾಜ್ 72 ವಸಂತಗಳಿಗೆ ಕಾಲಿಟ್ಟಿದ್ದರೂ, ನಿರಂತರವಾಗಿ ಸಾಂಸ್ಕೃತಿಕ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪಿ.ವಿ.ಸೀತಾರಾಮು ಮಾತನಾಡಿ, ‘ಸತತ ಅಭ್ಯಾಸವೇ ಸಾಧನೆಯ ಗುಟ್ಟು ಎಂಬುದನ್ನು ನಟರಾಜ್ ಆಗಾಗ್ಗೆ ತಿಳಿಸುತ್ತಾ ಬಂದಿದ್ದಾರೆ. ಅವರ ಪೂರ್ವಿಕರು ಮುಮ್ಮಡಿ ಕೆಂಪೇಗೌಡರ ಆಸ್ಥಾನ ಪಂಡಿತರಾಗಿದ್ದರು. ಕೆಂಪಸಾಗರದಲ್ಲಿ ಅವರ ವಂಶಜರ ಶಿಲಾಶಾಸನವಿದೆ. ಶಾಲಾಕಾಲೇಜುಗಳಲ್ಲಿ ಸಾಹಿತ್ಯಾತ್ಮಕ ಚಟುವಟಿಕೆ ನಡೆಸುವುದರ ಮೂಲಕ ಸಾಹಿತ್ಯ ಪರಿಚಾರಕರಾಗಿದ್ದಾರೆ. ತಾಲ್ಲೂಕು ಮಟ್ಟದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಮಗೆ ಮಾರ್ಗದರ್ಶನ ನೀಡಿದ್ದರು’ ಎಂದು ನೆನಪು ಹಂಚಿಕೊಂಡರು.

ಸಂಸ್ಕೃತಿ ಪರಿಚಾರಕ ಎಸ್.ಸುನಿಲ್ ಮಾತನಾಡಿ, ‘ಸರ್.ಎಂ ವಿಶ್ವೇಶ್ವರಯ್ಯ ಕೂಟ್ಲು ಬಳಿ ಅರ್ಕಾವತಿ, ಕುಮುದ್ವತಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿ, ಚಾಮರಾಜಸಾಗರ ಎಂದು ಹೆಸರಿಟ್ಟರು. ಇಂದು ಅದನ್ನು ತಿಪ್ಪಗೊಂಡನಹಳ್ಳಿ ಜಲಾಶಯ ಎನ್ನಲಾಗುತ್ತದೆ’ ಎಂದರು.

ಪಾಣ್ಯಂ ನಟರಾಜು ಮಾತನಾಡಿ, ‘ಮಾಗಡಿ ಸಂಸ್ಕೃತ ಪಂಡಿತರ ಕರ್ಮ ಭೂಮಿಯಾಗಿತ್ತು. ಇಲ್ಲಿನ ನೆಲ, ಜಲ, ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲು ಶ್ರಮಿಸಬೇಕು. ಯುವಜನತೆ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕಲೆಯ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.

ಹುಲಿಕಟ್ಟೆ ಎಚ್.ಜಿ.ಚನ್ನಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಗೋವಿಂದರಾಜು, ಶಿಕ್ಷಕ ರಾಜಣ್ಣ, ಸಿಆರ್‌ಪಿ ಮುನಿಯಪ್ಪ, ಪತಿಗೌಡ, ಪತ್ರಕರ್ತ ಸುದೀಂಧ್ರರಾವ್‌, ಡಾ.ಪವಿತ್ರ ಪವನ್, ಜಗದೀಶ್, ಧನಂಜಯ ಕುಮಾರ್, ಮೋಹನ್, ಎಂ.ಎಸ್.ಬಸವರಾಜು, ಶಿವರಾಜು, ರಾಮು, ರಘು, ಶಿಕ್ಷಕಿ ಶೋಭಾ ಕೃಷ್ಣಮೂರ್ತಿ, ಮಂಗಳ ಗೋವಿಂದರಾಜು, ಸ್ಮಿತಾ ಸುನಿಲ್, ಹಿರಿಯರಾದ ಚಿಕ್ಕಣ್ಣ ಮಾತನಾಡಿದರು. ಬಡಾವಣೆಯ ನಿವಾಸಿಗಳು, ಪ್ರತಿಭಾಕೇಂದ್ರದ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)