ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಕ್ರೀಡಾಂಗಣವಾಗಿ ಅಭಿವೃದ್ಧಿ: ಹುಸೇನ್

ಜಿಲ್ಲಾ ಕ್ರೀಡಾಂಗಣಕ್ಕೆ ಶಾಸಕ ಭೇಟಿ: ವಾಯುವಿಹಾರಿಗಳು, ಕ್ರೀಡಾಪಟುಗಳೊಂದಿಗೆ ಮಾತು
Published 9 ಆಗಸ್ಟ್ 2023, 9:08 IST
Last Updated 9 ಆಗಸ್ಟ್ 2023, 9:08 IST
ಅಕ್ಷರ ಗಾತ್ರ

ರಾಮನಗರ: ‘ನಗರದ ಜಿಲ್ಲಾ ಕ್ರೀಡಾಂಗಣವನ್ನು ರಾಜ್ಯದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿರುವಂತೆ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ಕ್ರೀಡಾಂಗಣಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಕೀಡಾಪಟುಗಳು, ವಾಯುವಿಹಾರಿಗಳು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ರಾಜಧಾನಿ ಬೆಂಗಳೂರಿಲ್ಲಿರುವ ಅತ್ಯುತ್ತಮ ಕ್ರೀಡಾಂಗಣಗಳನ್ನು ಗಮನಿಸಿರುವ ನನಗೆ, ರಾಮನಗರದಲ್ಲಿಯೂ ಅಂತಹ ಕ್ರೀಡಾಂಗಣ ಇರಬೇಕು ಎಂದು ಯಾವಾಗಲೂ ಅನ್ನಿಸುತ್ತಿತ್ತು. ಇದೀಗ ಕಾಲ ಕೂಡಿ ಬಂದಿದೆ. ಅಭಿವೃದ್ಧಿ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರ ಗಮನಕ್ಕೆ ಸಹ ತಂದಿರುವೆ. ಅವರನ್ನು ಸಹ ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುವೆ’ ಎಂದರು.

‘ಕ್ರೀಡಾಂಗಣಕ್ಕೆ ಬರುವವರಿಗೆ ವ್ಯಾಯಾಮ ಮಾಡಲು ತೆರೆದ ಜಿಮ್ ಸಲಕರಣೆಗಳನ್ನು ಅಳವಡಿಸಲಾಗುವುದು. ವಾಯುವಿಹಾರಕ್ಕೆ ಬರುವ ಹಿರಿಯರು ಹಾಗೂ ಕಿರಿಯರು ಸಹ ಅಲ್ಲಿ ವ್ಯಾಯಾಮ ಮಾಡಬಹುದು. ಪ್ರತ್ಯೇಕ ನಡಿಗೆ ಪಥ, ಕ್ರೀಡಾಪಟುಗಳಿಗೆ ನಿತ್ಯ ಅಭ್ಯಾಸ ಮಾಡುವುದಕ್ಕಾಗಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ, ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುವುದು. ಎಲ್ಲೆಂದರಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡದೆ, ಒಂದೆರಡು ಕಡೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. ಈಗಾಗಲೇ, ಕೆಲವರು ತಂತಿ ಬೇಲಿ ಮುರಿದು ದಾರಿ ಮಾಡಿದ್ದಾರೆ. ಅದನ್ನು ಮುಚ್ಚಲು ಸೂಚಿಸಿದ್ದೇನೆ’ ಎಂದರು.

ತಜ್ಞರ ಜೊತೆ ಚರ್ಚೆ: ‘ನಗರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಲಾಮಂದಿರ ಇಲ್ಲದಿರುವುದು ಗೊತ್ತಿದೆ. ಈ ಬಗ್ಗೆ ಜಿ‌ಲ್ಲೆಯ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರ ಜೊತೆ ಸಭೆ ನಡೆಸುವೆ. ಅವರ ಸಲಹೆ ಮೇರೆಗೆ, ನಗರದಲ್ಲಿ ಒಂದು ಜಾಗ ಹುಡುಕಿ ಕಾಲಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಶಾಸಕ ಕೆ. ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್‌ಕುಮಾರ್, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.

ಮೂಲಸೌಕರ್ಯ ಕಲ್ಪಿಸಲು ಒತ್ತಾಯ

‘ಕ್ರೀಡಾಂಗಣದಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ಇದರಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗುತ್ತಿಲ್ಲ. ಕ್ರೀಡಾಪಟುಗಳಿಗೆ ನಿತ್ಯ ಅಭ್ಯಾಸ ಮಾಡಲು ಕಷ್ಟವಾಗುತ್ತಿದೆ. ಹಾಗಾಗಿ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಶಾಸಕರ ಎದುರು ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳು ಸಮಸ್ಯೆಗಳನ್ನು ಬಿಚ್ಚಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ‘ಕ್ರೀಡಾಂಗಣ ಅಭಿವೃದ್ಧಿಗೆ ನಾನು ಬದ್ಧವಾಗಿದ್ದೇನೆ. ಅದಕ್ಕಾಗಿಯೇ ಇಲ್ಲಿಗೆ ಬಂದು ನಿಮ್ಮನ್ನು ಭೇಟಿ ಮಾಡಿ ಸಮಸ್ಯೆಗಳು ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT