ಮಹಿಳಾ ಸಿಬ್ಬಂದಿಗೆ ಪೊಲೀಸರಿಂದ ಸೀಮಂತ

ಕನಕಪುರ: ಒಂದೂವರೆ ವರ್ಷದ ಹಿಂದೆ ವಿವಾಹವಾಗಿ ಇದೀಗ ಎಂಟು ತಿಂಗಳ ಗರ್ಭಿಣಿಯಾಗಿರುವ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಅವಿಲಾಷ ಅವರಿಗೆ ಖಾಸಗಿ ಪಾರ್ಟಿ ಹಾಲ್ ಒಂದರಲ್ಲಿ ಸೋಮವಾರ ಸೀಮಂತ ಮಾಡಲಾಯಿತು.
ಕಳೆದ ಏಳು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿರುವ ಅವಿಲಾಷ ಅವರು, ಒಂದು ವರ್ಷದ ಹಿಂದೆ ಕನಕಪುರ ಟೌನ್‌ನ ಸಂಚಾರ ಠಾಣೆಗೆ ಒಂದು ವರ್ಷದ ಹಿಂದೆ ವರ್ಗಾವಣೆಯಾಗಿದ್ದರು. ತಮ್ಮ ಜತೆ ಕೆಲಸ ಮಾಡುವ ಹೆಣ್ಣು ಮಗಳೊಬ್ಬಳು ಗರ್ಭಿಣಿಯಾಗಿರುವುದರಿಂದ ಠಾಣೆಯ ಎಲ್ಲ ಸಹೋದ್ಯೋಗಿಗಳು ಸೇರಿ ಕುಟುಂಬ ಸದಸ್ಯರ ರೀತಿಯಲ್ಲಿ ಸೋಮವಾರ ಸಂಜೆ ಸೀಮಂತ ಕಾರ್ಯ ನೆರವೇರಿಸಿ, ಶುಭ ಕೋರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬಿಡುವಿಲ್ಲದ ಕೆಲಸದ ಒತ್ತಡದಲ್ಲಿಯೂ ಮಹಿಳಾ ಸಿಬ್ಬಂದಿಯೊಬ್ಬರ ಸೀಮಂತ ನೆರವೇರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಕೆಲಸ ಮಾಡುವುದು ಕಠಿಣ. ಮಹಿಳಾ ಸಹೋದ್ಯೋಗಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ತಾತ್ಸಾರ ಮನೋಭಾವ ಇರುತ್ತದೆ ಎಂಬ ಭಾವನೆಯಿದೆ. ಆದರೆ, ನಮ್ಮ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಗೌರವದಿಂದ ಕಾಣಲಾಗುತ್ತದೆ. ಕುಟುಂಬದ ಬಾಂಧವರಂತೆ ಸೀಮಂತ ಮಾಡಿಕೊಟ್ಟಿರುವುದು ಅತ್ಯಂತ ಖುಷಿಕೊಟ್ಟಿದೆ. ಎಲ್ಲರಿಗೂ ಈ ಭಾಗ್ಯ ಸಿಗಲ್ಲ ಎಂದು ಸಂಚಾರಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಅವಿಲಾಷ ಸಂತಸ ವ್ಯಕ್ತಪಡಿಸಿದರು.
ಟೌನ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಉಷಾ ನಂದಿನಿ, ಸಂಚಾರಿ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ಗಳಾದ ಪಾಂಡು ಮತ್ತು ಜಾನಿ ಪ್ರಕಾಶ್ ಹಾಗೂ ಎಎಸ್‌ಐಗಳು, ಹೆಡ್ ಕಾನ್‌ಸ್ಟೇಬಲ್‌ಗಳು, ಪೊಲೀಸ್ ಪೇದೆಗಳು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.