ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಿ’

ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್‌, ನಗದು ಪುರಸ್ಕಾರ ವಿತರಣೆ
Last Updated 14 ಜೂನ್ 2019, 13:09 IST
ಅಕ್ಷರ ಗಾತ್ರ

ರಾಮನಗರ: ‘ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಜೊತೆಗೆ ಪರಿಸರ ರಕ್ಷಣೆಯ ಮನೋಧರ್ಮವನ್ನು ಬೆಳೆಸುವ ಅಗತ್ಯವಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು ಹೇಳಿದರು.

ಬಿಡದಿ ಹೋಬಳಿಯ ಗಾಣಕಲ್‌ ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಂಡರ್‌ಲಾ ಅಮ್ಯೂಸ್‌ಮೆಂಟ್‌ ಪಾರ್ಕ್‌ ವತಿಯಿಂದ ಬಿಡದಿ ಕ್ಲಸರ್ ವ್ಯಾಪ್ತಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್‌ ವಿತರಣೆ ಹಾಗೂ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದ ಚೆಕ್‌ ವಿತರಿಸಿ ಅವರು ಮಾತನಾಡಿದರು. ‘ಪರಿಸರದ ನಾಶದಿಂದಾಗಿ ಕಳೆದ ಒಂದು ದಶಕದಲ್ಲಿ ಮಳೆ ಪ್ರಮಾಣವು ತೀವ್ರವಾಗಿ ಕುಸಿದಿದೆ. ಹೀಗೆಯೇ ಆದಲ್ಲಿ ಮುಂದೆ ನಮ್ಮೆಲ್ಲರಿಗೂ ನೀರಿನ ಕೊರತೆ ಕಾಡುವುದು ಖಂಡಿತ. ಅದನ್ನು ತಪ್ಪಿಸುವ ಸಲುವಾಗಿ ನಾವೆಲ್ಲ ಪರಿಸರದ ರಕ್ಷಣೆ ಮಾಡಬೇಕು. ನೀರನ್ನು ಮಿತವಾಗಿ ಬಳಸಬೇಕು. ನಮ್ಮ ಮನೆಗಳಿಂದಲೇ ಈ ಕಾರ್ಯ ಆರಂಭವಾಗಬೇಕು’ ಎಂದು ಕಿವಿಮಾತು ಹೇಳಿದರು.

ಕಳೆದ ವರ್ಷ ಜಿಲ್ಲೆಯ 415 ಶಾಲೆಗಳಲ್ಲಿ ಪ್ಲಾಸ್ಟಿಕ್‌ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಆಗಿದೆ ಎಂದರು. ಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯವಾದ ಊಟದ ಹಾಲ್‌ ನಿರ್ಮಾಣ ಮಾಡಿಕೊಡುವಂತೆ ಅವರು ವಂಡರ್‌ಲಾ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ವಂಡರ್‌ಲಾ ಸಿಬ್ಬಂದಿ ಕಿಶೋರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುವಂತೆ ಶಾಲಾ ಬ್ಯಾಗ್‌, ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡಲಾಗುತ್ತಿದೆ ಎಂದರು.

ವಂಡರ್‌ಲಾ ಬಿಡದಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮುಖ್ಯಸ್ಥ ಎಂ.ಬಿ. ಮಹೇಶ್‌, ಕಂಪನಿಯ ಸಿಎಫ್‌ಒ ಸತೀಶ್‌ ಶೇಷಾದ್ರಿ, ಸಲಹೆಗಾರ ವಿ. ರಾಜಗೋಪಾಲನ್‌, ಎಂ.ಬಿ. ಮಹೇಶ್, ಮಹೇಶ್ ಪಾಟೀಲ್, ಸ್ಥಳೀಯ ಗ್ರಾ.ಪಂ. ಸದಸ್ಯ ಸತೀಶ್‌, ಹಳೆಯ ವಿದ್ಯಾರ್ಥಿ ಕನ್ನಡ ಮಂಜು, ಎಸ್‌ಡಿಎಂಸಿ ಅಧ್ಯಕ್ಷ ಶಂಕರಪ್ಪ, ಸದಸ್ಯ ವೆಂಕಟೇಶ್‌, ಶಾಲೆಯ ಮುಖ್ಯ ಶಿಕ್ಷಕ ಮರಿಸ್ವಾಮಿ, ವಿವಿಧ ಶಾಲೆಗಳ ಶಿಕ್ಷಕರು ಇದ್ದರು. ಶಿಕ್ಷಕ ಆರ್‌.ಸಿ. ಹೊನ್ನಗಂಗಪ್ಪ ಸ್ವಾಗತಿಸಿದರು.

700 ಬ್ಯಾಗ್ ವಿತರಣೆ
ವಂಡರ್ ಲಾ ಹಾಲಿಡೇಸ್ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯ ಅಡಿಯಲ್ಲಿ ಬನ್ನಿಕುಪ್ಪೆ ಮತ್ತು ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 21 ಸರ್ಕಾರಿ ಶಾಲೆಗಳ ವ್ಯಾಪ್ತಿಯ 700 ಶಾಲಾ ಮಕ್ಕಳಿಗೆ ಶುಕ್ರವಾರ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಸ್ಕೂಲ್ ಬ್ಯಾಗ್, ಪುಸ್ತಕಗಳು, ಜ್ಯಾಮಿಟ್ರಿ ಬಾಕ್ಸ್, ಡ್ರಾಯಿಂಗ್ ಪುಸ್ತಕ, ಸ್ಕೆಚ್ ಪೆನ್ ಮತ್ತು ಬಣ್ಣದ ಪೆನ್ಸಿಲ್‌ ಸೇರಿದಂತೆ ಮಕ್ಕಳಿಗೆ ಅವಶ್ಯವಾದ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ತಲಾ ₨5 ಸಾವಿರ ನಗದು ಪುರಸ್ಕಾರ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT