ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಜಾನಪದ ದಿನಾಚರಣೆ: ಜನಪದ ಎಂದಿಗೂ ಜೀವಪರ

ವಿಶ್ವ ಜಾನಪದ ದಿನಾಚರಣೆ ಸಂಭ್ರಮ: ಹಿರಿಯ ಕಲಾವಿದರಿಗೆ ಸನ್ಮಾನ
Last Updated 22 ಆಗಸ್ಟ್ 2019, 12:17 IST
ಅಕ್ಷರ ಗಾತ್ರ

ರಾಮನಗರ: ‘ಜನಪದರು ಯುದ್ಧ ವಿರೋಧಿಗಳಾಗಿದ್ದರು. ಆದರೆ ಇಂದು ಯುದ್ಧವನ್ನು ಸಡಗರ, ಪೌರುಷದ ಸಂಕೇತ ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ. ಗಂಗಾಧರ್ ವಿಷಾದಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಗುರುವಾರ ನಡೆದ ವಿಶ್ವ ಜಾನಪದ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಜನಪದರು ಜೀವಪರವಾಗಿದ್ದರು, ಅವರು ಎಂದಿಗೂ ಸಮಾಜದಲ್ಲಿ ಮನುಷ್ಯ ಮನುಷ್ಯನ ನಡುವೆ ಹೊಡೆದಾಡುವ ಸನ್ನಿವೇಶವನ್ನು ಸೃಷ್ಟಿಸಲಿಲ್ಲ. ಆದರೆ ಈಚಿನ ವರ್ಷಗಳಲ್ಲಿ ಯುದ್ಧೋತ್ಸಾಹ ಹೆಚ್ಚಾಗಿ, ಮಾನವೀಯತೆ ಕಾಣೆಯಾಗಿ, ತಾರತಮ್ಯ ಭಾವನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಜನಪದ ಕಲಾವಿದರನ್ನು ಈಗಲೂ ಅಸಡ್ಡೆ, ತುಚ್ಛ ದೃಷ್ಟಿಯಿಂದ ನೋಡುತ್ತಿರುವುದು ಕ್ರೌರ್ಯದ ಸಂಕೇತವಾಗಿದೆ. ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟದ ಕೆಲಸವೇನಲ್ಲ, ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಿದರೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಜಾನಕಿ ಮಾತನಾಡಿ, ಶ್ರಮ ಸಂಸ್ಕೃತಿಯ ಮೂಲದಿಂದ ಹುಟ್ಟಿರುವ ಜನಪದ ಕಲೆಗಳಿಗೆ ಈಗಲೂ ಬೇಡಿಕೆ ಹೆಚ್ಚಾಗುತ್ತಿದೆ. ಮಾನವನ ನಾಗರಿಕತೆ ಜೀವನಕ್ಕಿಂತಲೂ ಮುಂಚಿತವಾಗಿ ಶ್ರಮ ಶಕ್ತಿ ಮುಖ್ಯವಾಗಿದ್ದು, ಶ್ರಮದ ದಣಿವಿನ ನಿವಾರಣೆಗಾಗಿ ಹುಟ್ಟಿಕೊಂಡ ಹಾಡು, ಕುಣಿತ ಹಾಗೂ ವಾದ್ಯ ಸಂಗೀತ ಕಲೆಗಳು ಇಂದು ಜನಪದ ಕಲಾ ಪ್ರಕಾರಗಳಾಗಿ ಪ್ರದರ್ಶಿಸಲ್ಪಡುತ್ತಿವೆ ಎಂದು ತಿಳಿಸಿದರು.

ಜನಪದ ಕಲೆ ಯಾವ ಕಾಲಘಟ್ಟದಲ್ಲಿಯೂ ನಾಶವಾಗದೆ ಮುಂದುವರೆಯುತ್ತಿದ್ದು, ಅದರ ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಬೇಕು. ದೇಶದಲ್ಲಿ ಶಿಷ್ಟ ಕಲಾವಿದರಿಗೆ ಸಿಕ್ಕಿರುವ ಗೌರವ ಹಾಗೂ ಮನ್ನಣೆಗಳು ಜನಪದ ಕಲಾವಿದರಿಗೆ ದೊರಕುತ್ತಿಲ್ಲ. ಇದಕ್ಕೆ ಹಲವು ಲೋಪಗಳಿದ್ದರೂ, ಅದೆಲ್ಲವನ್ನು ಬದಿಗೊತ್ತಿ ಕಲೆಯನ್ನು ಜೀವನವನ್ನಾಗಿ ಮುಂದುವರೆಸುತ್ತಿರುವ ಕಲಾವಿದರಿಗೆ ಎಂದಿಗೂ ಗೌರವ ಸಿಕ್ಕೇ ಸಿಗುತ್ತದೆ ಎಂದರು.

ದೇಶದಲ್ಲಿ ದಾಖಲೆಯಾಗದ ಸಾವಿರಾರು ಕಲೆಗಳು ನಮ್ಮಿಂದ ದೂರವಿದ್ದು, ಕೆಲವೊಬ್ಬರಿಂದ ಪೋಷಿಸಲ್ಪಟ್ಟು ಮೂಲ ರೂಪವನ್ನು ಹಾಗೆಯೇ ಉಳಿಸಿಕೊಂಡಿವೆ. ಜನಪದ ಕಲಾವಿದರ ಜೀವನಮಟ್ಟ ಸುಧಾರಣೆಯಾಗುವಂತೆ ಸಮಾಜ ಮತ್ತು ಸರ್ಕಾರ ಶ್ರಮಿಸಬೇಕು. ಕಲಾವಿದರ ರಕ್ಷಣೆಗೆ ನಾನು ಬದ್ಧಳಾಗಿದ್ದೇನೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ರಾಜ್ಯ ಸರ್ಕಾರದಿಂದ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ. ಅಧಿಕಾರಿಗಳು ಕಲಾವಿದರು ಈಗಾಗಲೇ ಸಲ್ಲಿಸಿರುವ ಮಾಸಾಶನ ಅರ್ಜಿಗಳನ್ನು ಪರಿಶೀಲಿಸಿ, ಮಾಸಾಶನ ನೀಡಬೇಕು. ಕಲಾವಿದರ ಸಂರಕ್ಷಣೆಗೆ ಸರ್ಕಾರದ ಜತೆಗೆ ಸಂಘ, ಸಂಸ್ಥೆಗಳು ಕೂಡ ಹೆಗಲುಕೊಟ್ಟು ಶ್ರಮಿಸಬೇಕು. ಇಂದಿನ ಯುವ ಜನಾಂಗ ಜನಪದ ಕಲೆಗಳ ಕಲಿಯುವಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ.ಹಂ.ಪ. ನಾಗರಾಜಯ್ಯ ಮಾತನಾಡಿ ಜನಪದ ಕಲೆ ಹಾಗೂ ಸಾಹಿತ್ಯಕ್ಕೆ ಐದನೇ ಶತಮನಾದ ಸಂಸ್ಕೃತ ಹಾಗೂ ಪ್ರಾಕೃತ ಭಾಷೆಯ ಸಾಹಿತ್ಯದಲ್ಲಿಯೂ ಮನ್ನಣೆ ನೀಡಲಾಗಿತ್ತು ಎಂಬ ಇತಿಹಾಸದ ಆಧಾರಗಳನ್ನು ಕಾಣಬಹುದಾಗಿದೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿ ಮೂಲಕ ಕಲೆಯ ಉಳಿವಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಸ್ವಾರ್ಥ ಕೇಂದ್ರಿತ ಚಿಂತನೆಗಳು ಹೆಚ್ಚಾಗುತ್ತಿವೆ. ಬಂಡವಾಳಶಾಹಿಯ ಹಿಡಿತದಲ್ಲಿ ಎಲ್ಲವೂ ಕೇಂದ್ರೀಕೃತಗೊಳ್ಳುತ್ತಿರುವುದರಿಂದ ಮನುಷ್ಯನ ಸಹಜ ಸಂವೇದನೆಗಳಿಗೆ ಬೆಲೆ ಇಲ್ಲದಂತಾಗಿದೆ. ಜನಪದ ಸಾಹಿತ್ಯ ಮಾನವೀಯ ಅಂಶಗಳನ್ನು ಒಳಗೊಂಡಿದ್ದು, ಸರಳವಾಗಿರುವುದರಿಂದ ಎಲ್ಲರೂ ಅಧ್ಯಯನ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಹಾಸನ ರಘು ಮಾತನಾಡಿ ಕಲಾವಿದರಿಗೆ ಸರ್ಕಾರದ ವತಿಯಿಂದ ನೀಡುತ್ತಿರುವ ₨1500 ಮಾಸಾಶನವನ್ನು ಹೆಚ್ಚಿಸಬೇಕು. ಜಮ್ಮು ಕಾಶ್ಮೀರದಲ್ಲಿ ಕಲಾವಿದರಿಗೆ ಸರ್ಕಾರದ ವತಿಯಿಂದ ₨5 ಸಾವಿರ ಮಾಸಾಶನ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರ ₨2500 ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್‌ ಟ್ರಸ್ಟಿ ಟ್ರಸ್ಟಿ ಆದಿತ್ಯ ನಂಜರಾಜ್, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಜೋಗಿಲ ಸಿದ್ದರಾಜು, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು ಇದ್ದರು.

ಕರ್ನಾಟಕ ಜಾನಪದ ಪರಿಷತ್, ಅಖಿಲ ಭಾರತ ಜಾನಪದ ಮತ್ತು ಬುಡಕಟ್ಟು ಕಲಾ ಪರಿಷತ್, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಮತ್ತು ಸಂಭ್ರಮ, ದಕ್ಷಿಣ ವಲಯ ಸಾಹಸ ಸಾಂಸ್ಕೃತಿಕ ಕೇಂದ್ರ, ತಂಜಾವೂರಿನ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸನ್ಮಾನ...

ಜಾನಪದ ಕಲೆಗೆ ತಮ್ಮದೇ ಕೊಡುಗೆ ನೀಡಿದ ಹಿರಿಯ ಕಲಾವಿದರು ಹಾಗೂ ಜಾನಪದ ಲೋಕದ ಬೆಳವಣಿಗೆಗೆ ಶ್ರಮಿಸಿದ ಸಿಬ್ಬಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಗೀಗಿಮೇಳ ಕಲಾವಿದೆ ಶಕುಂತಲಾ ನಾಯಕ್, ಗೊರವ ಕಲಾವಿದರಾದ ಮೈಲಾರಪ್ಪ, ಪೂಜಾರಿ ಮಲ್ಲಯ್ಯ, ಪಂಡರಿಭಜನೆ ಕಲಾವಿದ ತೋಪಲ್ಲಿ ಬಸವರಾಜು, ನೀಲಗಾರ ಪುರಿಗಾಲಿ ಮಹಾದೇವಸ್ವಾಮಿ, ತೊಗಲುಗೊಂಬೆಯಾಟದ ಕಲಾವಿದೆ ಗೌರಮ್ಮ, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ, ಪುಟ್ಟರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT