ಶನಿವಾರ, ಆಗಸ್ಟ್ 17, 2019
27 °C

‘ಮಗುವಿಗೆ ಹಳದಿ ಹಾಲೇ ಅಮೃತ’

Published:
Updated:
Prajavani

ಚನ್ನಪಟ್ಟಣ: ‘ತಾಯ ಎದೆಯ ಹಳದಿ ಹಾಲು ಮಕ್ಕಳ ಬೆಳವಣಿಗೆಗೆ ಸಹಕಾರಿ’ ಎಂದು ಸಾರ್ವಜನಿಕ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಅಶೋಕ್ ವೆಂಕೋಬರಾವ್ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಯಿಯರು ಮಗುವಿಗೆ ಸ್ತನ್ಯಪಾನ ಮಾಡಿಸುವುದರ ಮೂಲಕ ಆರೋಗ್ಯದ ಬೆಳವಣಿಗೆಯಲ್ಲಿ ಕಾಳಜಿ ವಹಿಸಬೇಕು. ಇದರಿಂದ ತಾಯಿಯ ಆರೋಗ್ಯವೂ ಸುಧಾರಿಸುತ್ತದೆ. ಮಗು ಜನಿಸಿದಾಗ ಉತ್ಪತ್ತಿಯಾಗುವ ಹಳದಿ ಹಾಲನ್ನು ಅಗತ್ಯವಾಗಿ ಕುಡಿಸಬೇಕು’ ಎಂದು ಹೇಳಿದರು.

ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಅಧಿಕಾರಿ ಎಂ.ವೇದಮೂರ್ತಿ ಮಾತನಾಡಿ, ‘ಮಕ್ಕಳ ಆರೋಗ್ಯಕ್ಕೆ ತಾಯಿ ಹಾಲು ಪೂರಕ. ಅದು ಪೌಷ್ಟಿಕತೆಯಿಂದ ಕೂಡಿರುವುದರಿಂದ ಮಕ್ಕಳ ಬೆಳವಣಿಗೆಗೆ ಸಹಾಯಕ. ಹಲವು ತಾಯಂದಿರು, ಮಗುವಿಗೆ ಹಾಲುಣಿಸಿದರೆ ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹಾಲುಣಿಸುವುದನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಕನಿಷ್ಟ ಒಂದು ವರ್ಷವಾದರೂ ಹಾಲುಣಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ಶುಷ್ರೂಷಕಿಯರ ಅಧೀಕ್ಷಕಿ ಸರಸ್ವತಿ ಮಾತನಾಡಿ, ‘ಮಗುವಿಗೆ ತಾಯಿಯ ಹಾಲು ಅಮೃತವಿದ್ದಂತೆ’ ಎಂದರು.

ಆರೋಗ್ಯ ಮಿತ್ರ ಮೋಹನ್ ಕುಮಾರ್, ಲ್ಯಾಬ್‌ನ ಪರೀಕ್ಷಕರಾದ ಸುಧಾಮಣಿ, ಸೋನಿಯಾ, ಶುಷ್ರೂಷಕಿ ಪಾರ್ವತಿ ಬಾಯಿ ಇದ್ದರು.

Post Comments (+)