ಸೋಮವಾರ, ಅಕ್ಟೋಬರ್ 21, 2019
26 °C
ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ವತಿಯಿಂದ ಆಯೋಜನೆ

ದಸರಾ ಯೋಗಾಸನ ತರಬೇತಿಗೆ ಚಾಲನೆ

Published:
Updated:
Prajavani

ಮಾಗಡಿ: ಆರೋಗ್ಯ ಪೂರ್ಣಜೀವನಕ್ಕೆ ಯೋಗ, ಧ್ಯಾನ, ಪ್ರಾಣಾಯಾಮ ಪೂರಕವಾಗಿವೆ ಎಂಬುದನ್ನು ಮನೋವಿಜ್ಞಾನಿಗಳು ಮತ್ತು ಆರೋಗ್ಯ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಶಶಿಕಾಂತ ಜೈನ್ ತಿಳಿಸಿದರು.

ಪಟ್ಟಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶಾಂತಿವನ ಟ್ರಸ್ಟ್ ವತಿಯಿಂದ ನಡೆದ 34ನೇ ಬೃಹತ್ ದಸರಾ ಯೋಗ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಹಳ್ಳಿಯ ಜನತೆಗೆ ಯೋಗದ ಸ್ಪರ್ಶವಾಗಬೇಕು ಎಂಬುದು ವೀರೇಂದ್ರ ಹೆಗ್ಗಡೆ ಅವರ ಆಶಯ. ದೇಹ ಬಲಿಷ್ಠವಾದರೆ ಸಾಲದು. ಮನಸ್ಸಿನ ನಿಗ್ರಹವಾಗಬೇಕು. ದೀರ್ಘಕಾಲೀನ ರೋಗಗಳಿಗೆ ಸರಳ ಯೋಗಾಸನದಿಂದ ಪರಿಹಾರ ದೊರೆಯಲಿದೆ. ಶೇ 80ರಷ್ಟು ಮನೋದೈಹಿಕ ರೋಗಗಳಿಗೆ ಯೋಗಾಸನ ರಾಮಬಾಣ ಎಂದು ವಿವರಿಸಿದರು.

2013ರಿಂದ ಶಾಂತಿವನ ಟ್ರಸ್ಟ್‌ ವತಿಯಿಂದ ರಾಜ್ಯದಲ್ಲಿ 73 ಸಾವಿರ ವಿದ್ಯಾರ್ಥಿಗಳು ಮತ್ತು 5,850 ಜನ ಶಿಕ್ಷಕರಿಗೆ ಹಾಗೂ 2.70 ಲಕ್ಷ ಜನರಿಗೆ ಯೋಗಾಸನ ತರಬೇತಿ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಅ.12ರಂದು ಬೆಳಿಗ್ಗೆ 10 ಗಂಟೆಗೆ ತಿರುಮಲೆ ಆರ್ಯ ಈಡಿಗರ ಅರವಟಿಗೆಯಲ್ಲಿ ನಡೆಯಲಿರುವ ಪಂಚಮುಖಿ ವ್ಯಕ್ತಿತ್ವ ವಿಕಾಸನ ಮಕ್ಕಳ ಯೋಗ ಶಿಬಿರಕ್ಕೆ ಸೇರಿಸುವಂತೆ ಅವರು ಮನವಿ ಮಾಡಿದರು.

ಗುಮ್ಮಸಂದ್ರದ ರುದ್ರಮುನೇಶ್ವರ ಮಠಾಧೀಶ ಚಂದ್ರಶೇಖರ ಸ್ವಾಮೀಜಿ ಯೋಗಾಸನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಅಡುಗೆಮನೆ ಔಷಧಾಲಯವಾಗಬೇಕು. ಆಹಾರವೇ ಔಷಧವಾಗಬೇಕು. ಜಗತ್ತು ಯೋಗದತ್ತ ಮುಖ ಮಾಡಿದೆ. ಭೋಗ ಬಿಟ್ಟು ಯೋಗಿಗಳಾಗಲು ಯೋಗಾಸನ ಸಹಕಾರಿ’ ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, ‘ಜಿಲ್ಲೆಯಲ್ಲಿ ನಮ್ಮ ಸಂಸ್ಥೆ 6 ವರ್ಷಗಳಿಂದಲೂ ವ್ಯಕ್ತಿಯನ್ನು ಶಕ್ತಿಯನ್ನಾಗಿಸಲು ಸಮಾಜಮುಖಿ ಯೋಜನೆಗಳನ್ನು ನಡೆಸುತ್ತಿದೆ. ಧರ್ಮಾಧಿಕಾರಿ ಹೆಗ್ಗಡೆ ಅವರ ಆಶಯದಂತೆ ಪುರಾತನ ದೇಗುಲಗಳ ಜೀರ್ಣೋದ್ಧಾರ, ಹಾಲು ಉತ್ಪಾದಕರಿಗೆ ಮತ್ತು ಸಮುದಾಯಭವನ ಅಭಿವೃದ್ಧಿಗೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಬೇಕಾದ ಹಣ ಸಹಾಯ ಮಾಡಲಾಗುತ್ತಿದೆ. 9 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು 527 ಜನ ವ್ಯಸನಿಗಳನ್ನು ಮುಖ್ಯವಾಹಿನಿಗೆ ಕರೆತರಲಾಗಿದೆ’ ಎಂದರು.

‘117 ಅಂಗವಿಕಲರಿಗೆ ಜನಮಂಗಳ ಕಾರ್ಯಕ್ರಮದಲ್ಲಿ ಸಲಕರಣೆಗಳನ್ನು ನೀಡಲಾಗಿದೆ. 168 ಕುಟುಂಬಗಳಿಗೆ ಮಾಸಿಕವಾಗಿ ₹ 750 ಮಾಸಾಶನ ನೀಡಲಾಗುತ್ತಿದೆ. ರೈತರಿಗೆ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ನೀಡಲಾಗಿದೆ. ಯೋಗಜೀವನ ಅಳವಡಿಸಿಕೊಂಡು ರೋಗರಹಿತ ಬದುಕು ಸಾಗಿಸಬೇಕು’ ಎಂದರು.

34ನೇ ಯೋಗ ಶಿಬಿರದ ಸಂಯೋಜಕ ಶೇಖರ್ ಕಡ್ತಲ ಮಾತನಾಡಿ, ‘ಭೂಮಿಯ ಮೇಲಿರುವ ಜೀವಿಗಳ ಸಂಖ್ಯೆಯಷ್ಟು ಯೋಗಾಸನಗಳಿವೆ. ಶಾಂತಿಯುತ ಮತ್ತು ಒತ್ತಡ ರಹಿತ ಸುಂದರ ಬದುಕಿಗೆ ಯೋಗಪೂರಕ. ನಿತ್ಯ ಮಾಡುವ ಕೆಲಸಗಳೇ ಯೋಗಗಳಾಗಬೇಕು. ಯೋಗ ರೋಗನಿರೋಧಕ ಶಕ್ತಿಯನ್ನು ನೀಡಿ ಸದೃಡ ದೇಹ ಮತ್ತು ಮನಸ್ಸನ್ನು ನೀಡುತ್ತದೆ. ಸರಳ ಯೋಗ ಅಳವಡಿಸಿಕೊಳ್ಳಬೇಕು’ ಎಂದರು.

ಶಾಂತಿವನ ಟ್ರಸ್ಟಿನ ಗಣಪತಿ ಭಟ್, ಆಡಳಿತಾಧಿಕಾರಿ ಪ್ರೇಮಾನಂದ್, ತಾಲ್ಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ ವೇದಿಕೆಯಲ್ಲಿದ್ದರು. ಬಳ್ಳಾರಿಯಿಂದ ಆಗಮಿಸಿದ್ದ ಯೋಗಶಿಕ್ಷಕ ಹೊಳೆಪ್ಪ ವಿವಿಧ ಆಸನಗಳನ್ನು ಮಾಡಿ ಪ್ರದರ್ಶಿಸಿದರು.

ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ, ಮೇಲ್ವಿಚಾರಕರಾದ ಮನೋಜ್ ಹೆಗ್ಡೆ, ಸಿದ್ದಯ್ಯ, ಅಶೋಕ್, ಜಯಣ್ಣ, ನಾಗಮಣಿ, ಸೇವಾಪ್ರತಿನಿಧಿಗಳಾದ ತಿಪ್ಪಸಂದ್ರ ಭಜನೆ ಕಲಾವಿದೆ ವೀಣಾ, ಲತಾನಾರಾಯಣ್‌, ತಿರುಮಲೆ ರಾಜೇಶ್ವರಿ, ಜಯಲಕ್ಷ್ಮಮ್ಮ, ಕಲ್ಯಾಗೇಟ್‌ ಪ್ರಭಾವತಿ, ಶೋಭಾ, ಸುಜಾತ, ರಮ್ಯ, ಸುಮ, ಕಾಂತರಾಜ್‌, ಲತಾ, ಯೋಗೇಶ್ ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಒಕ್ಕೂಟಗಳ ಸದಸ್ಯರು ಇದ್ದರು. ಯೋಗಶಿಕ್ಷಕರನ್ನು ಸನ್ಮಾನಿಸಲಾಯಿತು.

Post Comments (+)