ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಯುವ ಉತ್ಸವದಲ್ಲಿ ಪ್ರತಿಭೆಯ ಅನಾವರಣ

ಜಿಲ್ಲಾ ಮಟ್ಟದ ‘ಯುವ ಉತ್ಸವ–2023’ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ರಾಮಲಿಂಗಾ ರೆಡ್ಡಿ
Published 13 ಅಕ್ಟೋಬರ್ 2023, 4:45 IST
Last Updated 13 ಅಕ್ಟೋಬರ್ 2023, 4:45 IST
ಅಕ್ಷರ ಗಾತ್ರ

ರಾಮನಗರ: ‘ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಹ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಆಯೋಜಿಸಿರುವ ಯುವ ಉತ್ಸವವು ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಯುವಜನ ಸಚಿವಾಲಯ, ಜಿಲ್ಲಾಡಳಿತ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ‘ಯುವ ಉತ್ಸವ–2023’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರಿಗೆ ಉದ್ಯೋಗದ ಜೊತೆಗೆ, ಸ್ವಾವಲಂಬನೆಯಿಂದ ಬದುಕಲು ಅಗತ್ಯವಿರುವ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿವೆ. ಇವುಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್‌, ‘ಜಿಲ್ಲೆಯ ಯುವಜನರನ್ನು ಒಂದು ಕಡೆ ಸೇರಿಸಬೇಕೆಂಬ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜಿಸಲಾಗಿದೆ. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಉತ್ಸವಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ನೆಹರು ಯುವ ಕೇಂದ್ರದ ದಕ್ಷಿಣ ಭಾಗದ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಪ್ರೊ. ಎಂ.ಎನ್. ನಟರಾಜ್, ‘75 ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ 30 ಕೋಟಿ ಜನಸಂಖ್ಯೆಯು ಇಂದು 130 ಕೋಟಿ ದಾಟಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಭಾರೀ ಪ್ರಗತಿಯಾಗಿದೆ. ಅದರಲ್ಲೂ ಯುವಜನರ ಸಂಖ್ಯೆ ಹೆಚ್ಚಾಗಿರುವುದು ನಮ್ಮ‌ ಹೆಗ್ಗಳಿಕೆ’ ಎಂದು ಹೇಳಿದರು.

‘ಯುವಶಕ್ತಿಯು ಅಡ್ಡದಾರಿ ಹಿಡಿಯದಂತೆ ಎಚ್ಚರಿಕೆ ವಹಿಸಿ, ದೇಶ ಕಟ್ಟುವ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ದೇಶವು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳನ್ನು ಅವರಿಗೆ ತಲುಪಿಸಬೇಕಿದೆ. ಯುವಜನರೂ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ’ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ. ರಾಜು, ಎಂ.ಸಿ. ಅಶ್ವಥ್, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಶೈಲಜಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಗಂಗಾಧರ್, ಚೇತನ್‌ಕುಮಾರ್, ಅನಿಲ್ ಜೋಗಿಂದರ್ ಹಾಗೂ ಇತರರು ಇದ್ದರು.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯವಜನ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯವಜನ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಕಂಸಾಳೆ ನೃತ್ಯ ಗಮನ ಸೆಳೆಯಿತು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಕಂಸಾಳೆ ನೃತ್ಯ ಗಮನ ಸೆಳೆಯಿತು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡೊಳ್ಳು ಕುಣಿತ ತಂಡ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡೊಳ್ಳು ಕುಣಿತ ತಂಡ
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು
ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಯುವ ಉತ್ಸವ–2023’ ಕಾರ್ಯಕ್ರಮದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು

ಉತ್ಸವದ ವಿಶೇಷ

* ಉತ್ಸವದ ಅಂಗವಾಗಿ ಕ್ರೀಡಾಂಗಣದಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ. 

* ಯುವಜನರಿಗಾಗಿ ಸಾಂಸ್ಕೃತಿಕ, ಭಾಷಣ, ಮೊಬೈಲ್ ಛಾಯಾಗ್ರಹಣ, ಚಿತ್ರಕಲೆ, ರಂಗೋಲಿ ಹಾಗೂ ಕವನ ರಚನೆ ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆವರೆಗೆ ನಡೆದವು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು

* ಉತ್ಸವಕ್ಕಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಬಸ್‌ಗಳಲ್ಲಿ ಕರೆ ತಂದು, ಕಾರ್ಯಕ್ರಮ ಮುಗಿದ ಬಳಿಕ ಕರೆದೊಯ್ಯಲಾಯಿತು. ಮಧ್ಯಾಹ್ನ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

* ಉತ್ಸವದ ಅಂಗವಾಗಿ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಜನಪ್ರತಿನಿಧಿಗಳು ಮತ್ತು ಮುಖಂಡರ ಫೆಕ್ಸ್‌ಗಳು ರಾರಾಜಿಸಿದವು.

* ಕೈ ಚೀಲ ಹಿಡಿದು ಓಡಾಡುತ್ತಿದ್ದ ಪೌರ ಕಾರ್ಮಿಕರು, ಪ್ಲಾಸ್ಟಿಕ್ ಸೇರಿದಂತೆ ಕ್ರೀಡಾಂಗಣದಲ್ಲಿ ಯಾವುದೇ ಕಸ ಬೀಳದಂತೆ ನೋಡಿಕೊಂಡರು.

ಉತ್ಸವವು ರಾಮನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆಯ ಯುವಜನರೆಲ್ಲರೂ ಭಾಗವಹಿಸಬೇಕೆಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ

– ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ: ಸುರೇಶ್

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣವನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗುವುದು. ಆ ಕುರಿತು ಅವರ ನೇತೃತ್ವದಲ್ಲೇ ನೀಲನಕ್ಷೆ ಸಿದ್ಧವಾಗುತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು. ‘ಮೊಬೈಲ್ ಬಂದ ಬಳಿಕ ಪ್ರಪಂಚವನ್ನೇ ಮರೆತಿರುವ ಯುವಜನರನ್ನು ಮೊಬೈಲ್ ಜಗತ್ತಿನಿಂದ‌ ಹೊರತರುವ ಭಾಗವಾಗಿ ಉತ್ಸವ ಆಯೋಜಿಸಲಾಗಿದೆ. ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವು ಯುವಜನರ ದೈಹಿಕ ಮತ್ತು ‌ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು. ‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನೆಹರು ಯುವಕೇಂದ್ರ ಸ್ಥಾಪಿಸಿ ಯುವಜನರ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಅಡಿಪಾಯ ಹಾಕಿದರು. 21 ವರ್ಷಕ್ಕೆ ನಿಗದಿಯಾಗಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡರು. ಯುವಜನರನ್ನು ಬೇರೆ ಉದ್ದೇಶಕ್ಕೆ ಬಳಸುವವರ ನಡುವೆಯೇ ಅವರ ಸಮಗ್ರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ನಮ್ಮ ದೇಶವು ಯಶಸ್ವಿ ಪ್ರಜಾಪ್ರಭುತ್ವದ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆಯೇ ಹೊರತು ಬೇರಾವುದೇ‌ ಕಾರಣಗಳಿಂದಲ್ಲ’ ಎಂದರು. ಶಾಸಕ ಹುಸೇನ್‌ಗೆ ಮೆಚ್ಚುಗೆ ‘ಯುವ ಉತ್ಸವ’ವನ್ನು ಅದ್ಧೂರಿಯಾಗಿ ಆಯೋಜಿಸಿದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಕಾರ್ಯಕ್ರಮದಲ್ಲಿ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.  ತಮ್ಮ ಭಾಷಣದಲ್ಲಿ ಈ ಕುರಿತು ಪ್ರಸ್ತಾಪಿಸಿದ ಸಂಸದ ಡಿ.ಕೆ. ಸುರೇಶ್ ಅವರು ‘ಕಾಲೇಜು ಆವರಣಕ್ಕೆ ಸೀಮಿತವಾಗಿದ್ದ ಉತ್ಸವವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವುದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಅವರೇ ಕಾರಣ. ರಾಮನಗರದಲ್ಲಾದ ರಾಜಕೀಯ ಬದಲಾವಣೆಯಿಂದಾಗಿ ಇದು ಸಾಧ್ಯವಾಗಿದೆ’ ಎಂದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ‘ಪ್ರತಿ ಸಲ ಉತ್ಸವ ನಡೆದರೂ ಇಷ್ಟು ದೊಡ್ಟ ಮಟ್ಟದಲ್ಲಿ ಯುವಜನರು ಭಾಗವಹಿಸಿರುವುದು ಇದೇ ಮೊದಲು. ಕೇಂದ್ರ ಸರ್ಕಾರದ ಬಿಡಿಗಾಸು ನೆಚ್ಚಿಕೊಳ್ಳದ ಶಾಸಕ ಹುಸೇನ್ ಅವರು ತಮ್ಮ ಕೈಯಿಂದ ಹಣ ಹಾಕಿ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಿದ್ದಾರೆ’ ಎಂದು ಹೊಗಳಿದರು.

ಜನವರಿಯಲ್ಲಿ ರಾಮೋತ್ಸವ: ಹುಸೇನ್

‘ಕನಕಪುರದಲ್ಲಿ ಕನಕ ಉತ್ಸವದ ಮಾದರಿಯಲ್ಲಿ ರಾಮನ ಭೂಮಿಯಾದ ರಾಮನಗರದಲ್ಲಿ ಜನವರಿಯಲ್ಲಿ ರಾಮೋತ್ಸವ ಆಚರಿಸುವ ಚಿಂತನೆ ನಡೆದಿದೆ. ಮೂರು ದಿನದ ಈ ಉತ್ಸವಕ್ಕೆ ಸಂಸದರು ಮಾರ್ಗದರ್ಶನ ಮಾಡಿ ನೆರವಾಗಬೇಕು. ಜೊತೆಗೆ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯ ಯುವಜನರಿಗಾಗಿ ರಾಮನಗರದಲ್ಲಿ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳ ಬಾಳು ಬೆಳಗಬೇಕು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಸಂಸದ ಡಿ.ಕೆ. ಸುರೇಶ್ ಅವರಿಗೆ ವೇದಿಕೆಯಲ್ಲಿ ಮನವಿ ಮಾಡಿದರು. ‘ರಾಮೋತ್ಸವ’ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್ ‘ಜನ ನಮಗೆ ಅವಕಾಶ ಕೊಟ್ಟು ನಾಲ್ಕು ತಿಂಗಳಷ್ಟೇ ಆಗಿದೆ. ಬದಲಾವಣೆ ನಿಟ್ಟಿನಲ್ಲಿ ಹಲವು ಚಿಂತನೆಗಳನ್ನು ಮಾಡಲಾಗಿದೆ. ಎಲ್ಲವನ್ನು ಒಂದೊಂದಾಗಿ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT