ಶುಕ್ರವಾರ, ಜನವರಿ 24, 2020
28 °C
ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

ಅವೈಜ್ಞಾನಿಕ ರಾಗಿ ಕಟಾವು ಯಂತ್ರ ಬಳಕೆ : ರಾಗಿ ಫಸಲು ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜಿಲ್ಲೆಯಲ್ಲಿ ರೈತರಿಗೆ ನೆರವು ಆಗಬೇಕಾಗಿದ್ದ ರಾಗಿ ಕಟಾವು ಯಂತ್ರದ ಅಸಮರ್ಪಕ ಬಳಕೆಯಿಂದಾಗಿ ರಾಗಿ ಫಸಲು ನಷ್ಟವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ಹರಿಯದಿದ್ದರೂ ಉತ್ತಮ ಮಳೆ ಸಕಾಲದಲ್ಲಿ ಆದ ಪರಿಣಾಮ ರಾಗಿ ಫಸಲು ಉತ್ತಮ ಇಳುವರಿಯಾಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಯ್ಲು ಮಾಡುವ ರಾಗಿ ಯಂತ್ರ ಸರಿಯಾದ ತಾಂತ್ರಿಕ ವ್ಯವಸ್ಥೆ ಹೊಂದಿಲ್ಲ. ಕೊಯ್ಲಾದ ಫಸಲಿನಲ್ಲಿ ಶೇ 25ರಷ್ಟು ಕೊಯ್ಲು ಸಂದರ್ಭದಲ್ಲೆ ನೆಲಕ್ಕೆ ಉದುರುತ್ತದೆ ಎಂದರೆ ರೈತರಿಗೆ ನಷ್ಟವಲ್ಲವೇ. ಸತತ ನಾಲ್ಕು ವರ್ಷಗಳಿಂದ ಫಸಲು ಕಾಣದೆ ರೈತರು ಕಂಗಾಲಾಗಿದ್ದಾರೆ. ಗುಣಮಟ್ಟದ ಯಂತ್ರ ಯಾಕೆ ಖರೀದಿಸಿಲ್ಲ ಎಂದು ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು.

ಕೃಷಿ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ವಿನುತಾ ಮಾತನಾಡಿ, ‘ಜಿಲ್ಲೆಯಲ್ಲಿ 43,521 ಹೆಕ್ಟರ್ ರಾಗಿ ಫಸಲು ಪೈಕಿ ಶೇಕಡ 90 ರಷ್ಟು ರಾಗಿ ಫಸಲು ಬಂದಿದೆ. ರೈತರಿಗೆ ನೆರವಾಗಲು ಕಟಾವು ಯಂತ್ರಗಳನ್ನು ಸರ್ಕಾರ ನೀಡಿದೆ. ರಾಗಿ ವ್ಯರ್ಥವಾಗುತ್ತಿರುವುದು ಗಮನಕ್ಕೆ ಬಂದಿದೆ. ಯಂತ್ರದ ತಾಂತ್ರಿಕ ತೊಂದರೆಯೋ ಅಥವಾ ಯಂತ್ರದ ಕಾರ್ಯದಕ್ಷತೆಯೇ ಅಂತಹದ್ದೋ ಎಂಬುದನ್ನು ತಿಳಿದು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ‘ಜಿಲ್ಲೆಯಲ್ಲಿರುವ ನಾಲ್ಕು ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಪೂರ್ವ ಪ್ರಾಥಮಿಕ ಆಂಗ್ಲಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಈಗಾಗಲೇ ಒಂದೊಂದು ವರ್ಗ ಆರಂಭಿಸಲಾಗಿದ್ದು ದಾಖಲಾತಿ ಹೆಚ್ಚುತ್ತಿದೆ. ಮತ್ತೊಂದು ವರ್ಗ ಆರಂಭಿಸುವುದು ಅನಿವಾರ್ಯವಾಗಿದೆ. ಇತರ ಸರ್ಕಾರಿ ಶಾಲೆಗಳಲ್ಲಿಯೂ ಆಂಗ್ಲ ಮಾಧ್ಯಮಕ್ಕೆ ಒತ್ತಡ ಬರುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷೆ ಜಯಮ್ಮ ಮಾತನಾಡಿ, ‘ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೊದಲು ಒತ್ತು ನೀಡಬೇಕು. ಬಹುತೇಕವಾಗಿ ಹಿಂದುಳಿದಿರುವ ಗ್ರಾಮಗಳು, ಕನಿಷ್ಠ ಶೈಕ್ಷಣಿಕ ಸೌಲಭ್ಯ ಅಲ್ಲಿಗೆ ಸಿಗಬೇಕು’ ಎಂದರು.

ಜಿಲ್ಲೆಯಲ್ಲಿ ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಕಾಲದಲ್ಲಿ ರೋಗಿಗಳ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಮಧ್ಯಾಹ್ನ 3ಕ್ಕೆ ಆಸ್ಪತ್ರೆಗಳಲ್ಲಿ ಇರುವುದಿಲ್ಲ ಎಂದರೆ ರೋಗಿಗಳ ಕತೆ ಏನು? ಅಂತಹ ವೈದ್ಯರನ್ನು ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಿ ಎಂದು ಆರೋಗ್ಯಾಧಿಕಾರಿಗೆ ಜಯಮ್ಮ ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಮಾತನಾಡಿ, ‘ಕೆಲ ವೈದ್ಯರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ. ದೇವನಹಳ್ಳಿ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಚುರುಕುಗೊಂಡಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಉಪಕಾರ್ಯದರ್ಶಿ ಕರಿಯಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಿನುತಾರಾಣಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು