ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಈದ್ ಉಲ್‌ ಫಿತ್ರ್‌ ಆಚರಣೆ

Last Updated 5 ಜೂನ್ 2019, 15:36 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಮುಸ್ಲಿಂ ಸಮುದಾಯದ ಜನರು ಸೋಮವಾರ ಈದ್ ಉಲ್‌ ಫಿತ್ರ್‌ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆಕ್ಕಾ, ಮದೀನಾ ಮಸೀದಿಗಳ ಪ್ರತಿಕೃತಿಯ ಮೆರವಣಿಗೆ ಸಾಗಿತು. ಗಾಂಧಿ ಬಜಾರ್‌ನ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ 3ಕ್ಕೆ ಮೆರವಣಿಗೆ ಆರಂಭಗೊಂಡಿತು. ರಸ್ತೆಯುದ್ದಕ್ಕೂ ಬೃಹತ್ ಧ್ವಜಗಳು ಹಾರಾಡಿದವು. ಎಲ್ಲೆಡೆ ಈದ್‌ ಮಿಲಾದ್ ಘೋಷಣೆ ಕೂಗಿದರು. ಮೆರವಣಿಗೆ ಸಾಗುವ ಹಲವು ಮಾರ್ಗಗಳಲ್ಲಿ ಸಿಹಿ ಮತ್ತು ನೀರು ವಿತರಿಸಲಾಯಿತು.

ಗಾಂಧಿ ಬಜಾರ್‌ ಜಾಮಿಯಾ ಮಸೀದಿಯಿಂದ ಹೊರಟ ಮೆರವಣಿಗೆ ಲಷ್ಕರ್‌ ಮೊಹಲ್ಲಾ, ಪೆನ್‌ಷನ್ ಮೊಹಲ್ಲಾ, ಟ್ಯಾಂಕ್ ಮೊಹಲ್ಲಾ, ಬಾಲರಾಜ ಅರಸು ರಸ್ತೆ, ಮಹಾವೀರ ವೃತ್ತ, ಗೋಪಿ ವೃತ್ತ, ನೆಹರೂ ರಸ್ತೆ, ಆಜಾದ್‌ ನಗರ, ಕೆ.ಆರ್. ಪುರಂದ ಮೂಲಕ ಸಾಗಿ, ಅಮೀರ್‌ ಅಹಮದ್‌ ವೃತ್ತದಲ್ಲಿ ಮುಕ್ತಾಯಗೊಂಡಿತು.

ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹುಗೆ ಪ್ರಾರ್ಥಿಸಿದ ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಹಿರಿಯರು, ಮಕ್ಕಳು ಸೇರಿದ್ದರು. ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಸಡಗರದಲ್ಲಿ ಸಂಭ್ರಮಿಸಿದರು.

ಬಿಗಿ ಭದ್ರತೆ: ಮೆರವಣಿಗೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈದ್ಗಾ ಮೈದಾನದ ಸುತ್ತ ಸಂಚಾರವನ್ನು ತಡೆಹಿಡಿದು ಬದಲಿ ವ್ಯವಸ್ಥೆ ಮಾಡಿದ್ದರು.

ಮುಸ್ಲಿಮರಿಗೆ ರಂಜಾನ್ ಪವಿತ್ರ ಹಬ್ಬ. 30 ದಿನಗಳ ಕಾಲ ಉಪವಾಸ ಮಾಡಿ, ಸತ್ ಚಿಂತನೆಗಳನ್ನು ಬೆಳೆಸಿಕೊಳ್ಳಲಾಗುತ್ತದೆ. ಹಾಗೆಯೇ ಉಳ್ಳವರು ಇಲ್ಲದವರಿಗೆ ದಾನ ಮಾಡುವುದು ಕೂಡ ಈ ಹಬ್ಬದ ವಿಶೇಷ.

ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಎನ್‌.ರಮೇಶ್, ವೈ.ಹೆಚ್. ನಾಗರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ, ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT