ಸಮಾಜಮುಖಿ ಚಿಂತನೆಗೆ ರಂಗ ಶಿಬಿರ ಸಹಕಾರಿ: ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ

ಶನಿವಾರ, ಏಪ್ರಿಲ್ 20, 2019
28 °C
`ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ' ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

ಸಮಾಜಮುಖಿ ಚಿಂತನೆಗೆ ರಂಗ ಶಿಬಿರ ಸಹಕಾರಿ: ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ

Published:
Updated:
Prajavani

ಶಿವಮೊಗ್ಗ: ಶಿವಮೊಗ್ಗ ಶರಾವತಿನಗರದ ರಂಗಾಯಣದಲ್ಲಿ ಆಯೋಜಿಸಲಾಗಿರುವ ಮಕ್ಕಳ ಬೇಸಿಗೆ ಶಿಬಿರ `ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ'ಕ್ಕೆ ರಂಗ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿ, ‘ರಂಗ ಶಿಬಿರಗಳು ಮಕ್ಕಳು ಸಮಾಜಮುಖಿಯಾದ ಚಿಂತನೆ ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ. ಅಲ್ಲದೆ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಹೊಸತನದ ಜತೆಗೆ ಸೃಜನಶೀಲತೆ ಬೆಳೆಸುತ್ತವೆ. ಓದುವುದು, ಬರೆಯುವುದರ ಕಡೆಗೆ ಆಸಕ್ತಿ ಬೆಳೆಸುತ್ತವೆ’ ಎಂದು ಹೇಳಿದರು.

ಸ್ಪಷ್ಟ ಕಲ್ಪನೆಯೊಂದಿಗೆ ಈ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರವು ಸಮಾಜದ ಅನೇಕ ಕ್ಷೇತ್ರಗಳಲ್ಲಿ ಕಣ್ತೆರೆಸುವ ಕೆಲಸ ಮಾಡಲಿದೆ. ಹಾಗಾಗಿ ಮಕ್ಕಳು ಅತ್ಯಂತ ಖುಷಿ, ಲವಲವಿಕೆಯಿಂದ ಶಿಬಿರದಲ್ಲಿ ಪಾಲ್ಗೊಳ್ಳಬೇಕು. ರಂಗಭೂಮಿಯ ಶಿಸ್ತನ್ನು ಪಾಲಿಸಬೇಕು. ಶ್ರದ್ಧೆಯಿಂದ ರಂಗ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ವೈದ್ಯ ಡಾ.ಕೆ.ಎಸ್. ಗಂಗಾಧರ, ‘ಮಕ್ಕಳು ಯಾವುದೇ ಕ್ಷೇತ್ರ ಆಯ್ಕೆಮಾಡಿಕೊಂಡರೂ ಮೊದಲು ಮಾನವೀಯತೆ, ಸಾಂಸ್ಕೃತಿಕ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸಾಂಸ್ಕೃತಿಕ ಮನೋಭಾವ ಇದ್ದವರು ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ರಂಗಭೂಮಿ ಇರುವುದು ಕೇವಲ ಮನೋರಂಜನೆಗಲ್ಲ. ಇದರ ಜತೆಗೆ ಬೋಧನೆ, ರಂಜನೆ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಪ್ರಚೋಧನೆ ನೀಡುತ್ತದೆ. ಸಾಮಾನ್ಯಜ್ಞಾನ ನೀಡದ ಶಿಕ್ಷಣ ಪ್ರಯೋಜನಕಾರಿಯಲ್ಲ. ಆದರೆ ಬೇಸಿಗೆ ಶಿಬಿರಗಳು ಕೇವಲ ನಟನೆ ಮಾತ್ರವಲ್ಲದೇ ನಮ್ಮ ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಶಿವಮೊಗ್ಗ ರಂಗಾಯಣ ನಿರ್ದೇಶಕ ಡಾ.ಎಂ. ಗಣೇಶ್ ಮಾತನಾಡಿ, ‘ಚಿಣ್ಣರ ಬೇಸಿಗೆ ಶಿಬಿರ ಏ.30ರವರೆಗೆ ನಡೆಯಲಿದ್ದು, 250 ಮಕ್ಕಳು ಭಾಗವಹಿಸುತ್ತಿದ್ದಾರೆ. ಮಕ್ಕಳ ಎಂಟು ತಂಡಗಳನ್ನು ಮಾಡಿ ಪ್ರತಿ ತಂಡಕ್ಕೆ ಇಬ್ಬರು ನಿರ್ದೇಶಕರ ಮಾರ್ಗದರ್ಶನದಲ್ಲಿ ಒಂದು ನಾಟಕವನ್ನು ರಚಿಸಿ ಅಭಿನಯ ಕಲಿಸಲಾಗುವುದು. ರಂಗಭೂಮಿಗೆ ಸಂಬಂಧಿಸಿದಂತೆ ಅಭಿನಯ, ಹಾಡುಗಾರಿಕೆ, ಮಾತು, ನೃತ್ಯ ಸೇರಿ ಅಗತ್ಯ ಕಲೆಗಳನ್ನು ಕಲಿಸಲಾಗುವುದು. ಕೊನೆಯ ಎರಡು ದಿನಗಳ ಕಾಲ ಮಕ್ಕಳು ಶಿಬಿರದಲ್ಲಿ ಕಲಿತ ನಾಟಕಗಳ ಪ್ರದರ್ಶನ ಆಯೋಜಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಲೇಖಕಿ ಟಿ.ಎಲ್. ರೇಖಾಂಬ ಮಕ್ಕಳಿಗೆ ಕನಸಿನ ಬಗ್ಗೆ ವಿವರಿಸಿ ಚಿಣ್ಣರ ಕುರಿತಾದ ಹಾಡನ್ನು ಹಾಡಿ ರಂಜಿಸಿದರು. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಶಿಬಿರಕ್ಕೆ ಶುಭ ಹಾರೈಸಿದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಶಿಬಿರದ ನಿರ್ದೇಶಕ ಚಂದ್ರು ತಿಪಟೂರು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !