ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ವ್ಯಕ್ತಿತ್ವ ರೂಪಿಸುವ ರಂಗಾಯಣ ಶಿಬಿರ

ಚಿಣ್ಣರೊಂದಿಗೆ ರಂಗಾಯಣ ಬೇಸಿಗೆ ಶಿಬಿರದಲ್ಲಿ 248 ಮಕ್ಕಳು ಭಾಗಿ
Last Updated 22 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ಅದು ಮಕ್ಕಳದ್ದೇ ಪ್ರಪಂಚ.ಓದು, ಮನೆ, ತರಗತಿ, ಪಾಠ ಎಂಬ ಯಾವ ಒತ್ತಡವೂ ಅವರ ಹತ್ತಿರ ಸುಳಿಯಲಿಲ್ಲ. ಆಟ ಕುಣಿದಾಟದ ಜತೆಗೆ ರಂಗ ಗೀತೆ, ಸಂಗೀತ, ಚಿತ್ರಕಲೆ, ನಟನೆ, ಮಾತಿನ ವರಸೆ, ಮಣ್ಣಿನ ಕಲಾಕೃತಿ, ಕಥೆ, ಸಿನಿಮಾ,ನಟನ ಭಂಗಿಗಳು ಅವರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು.

ಹೌದು, ಇಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯುತ್ತಿರುವ ‘ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ ಮಕ್ಕಳ ಬೇಸಿಗೆ ಶಿಬಿರ–2019’ ಮಕ್ಕಳ ವ್ಯಕ್ತಿತ್ವ ರೂಪಿಸುತ್ತಿದೆ.ಇಲ್ಲಿ ಮಕ್ಕಳು ಗೂಡುಬಿಟ್ಟ ಹಕ್ಕಿಯಂತಾಗಿದ್ದಾರೆ.ಆರಂಭದಲ್ಲಿ ಪೋಷಕರ ಒತ್ತಾಯದಿಂದ ಒಲ್ಲದ ಮನಸ್ಸಿನಿಂದಲೇ ರಂಗಾಯಣದ ಆವರಣಕ್ಕೆ ಹೆಜ್ಜೆಯಿಟ್ಟ ಮಕ್ಕಳು ಇದೀಗ ಮನೆಗೆ ಹಿಂದುರುಗಲು ಮೀನಾಮೇಷ ಎಣಿಸುತ್ತಿದ್ದಾರೆ.

6ರಿಂದ 16 ವರ್ಷದ ಈ ಮಕ್ಕಳಿಗೆ ರಂಗಭೂಮಿ ಚಟುವಟಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ತರಬೇತಿ ಮತ್ತು ಮಾಹಿತಿ ನೀಡುವುದಲ್ಲದೇ ಅವರ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸುವ ಉದ್ದೇಶ ರಂಗಾಯಣ ಹೊಂದಿದೆ. ಈ ಕಾರಣದಿಂದಲೇ ಈ ಚಿಣ್ಣರ ರಂಗ ಶಿಬಿರ ನಡೆಸುತ್ತಿದೆ. ಈ ವರ್ಷದ ಚಿಣ್ಣರ ಶಿಬಿರವನ್ನು ವಿಭಿನ್ನವಾಗಿ ಆಯೋಜಿಸಿದೆ.

ಏ.12 ರಿಂದ ಆರಂಭವಾಗಿರುವ ಈ ಶಿಬಿರ ಏ.30ರವರೆಗೆ ನಡೆಯಲಿದೆ. ಮಕ್ಕಳು ರಂಗಭೂಮಿಯ ಕಡೆಗೆ ಆಸಕ್ತಿ ಬೆಳೆಸಲು ಹಾಗೂ ಬಡವರು, ಹಿಂದುಳಿದವರಿಗೆ ಅನುಕೂಲವಾಗಲೆಂದು ಶಿಬಿರಕ್ಕೆ ಕೇವಲ ₹200 ಮಾತ್ರ ನಿಗದಿಪಡಿಸಲಾಗಿದೆ. ಬೆಳಿಗ್ಗೆ ಮಜ್ಜಿಗೆ, ಸಂಜೆ ಬಾದಾಮಿ ಹಾಲನ್ನು ರಂಗಾಯಣವೇ ನೀಡುತ್ತಿದೆ. ಒಟ್ಟು 248 ಮಕ್ಕಳು ಒಂದು ದಿನವೂ ತಪ್ಪಿಸದೇ ಶಿಬಿರದಲ್ಲಿ ಸಕ್ರಿಯರಾಗಿದ್ದಾರೆ. ಶಿಬಿರದಲ್ಲಿ 25ರಿಂದ 30 ಮಕ್ಕಳಿರುವ 8 ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳಿಗೆ ಪರಿಸರದ ಬಗ್ಗೆ ಕಾಳಜಿ ಬೆಳೆಸಲು ತಂಡಗಳಿಗೆ ಆಲದಮರ, ಬೇವಿನಮರ, ಅರಳಿಮರ, ಹಲಸಿನಮರ, ತೆಂಗಿನಮರ, ಶ್ರೀಗಂಧದ ಮರ, ಗಸಗಸೆಮರ, ಮಾವಿನಮರ ಎಂದು ಹೆಸರಿಡಲಾಗಿದೆ.

ಶಿಬಿರದಲ್ಲಿ ಮುಖ್ಯವಾಗಿ ನಾಟಕಗಳನ್ನೇ ಕೇಂದ್ರಿಕರಿಸಿ ಮಕ್ಕಳನ್ನು ತಯಾರು ಮಾಡಲಾಗುತ್ತಿದೆ. ಮಕ್ಕಳ ಕಲ್ಪನೆಯಂತೆ ಮಣ್ಣಿನ ಶಿಲ್ಪಗಳನ್ನು ತಯಾರಿಸಲು ಉತ್ತೇಜಿಸಲಾಗುತ್ತಿದೆ. ಚಿತ್ರ ಮತ್ತು ಬಣ್ಣದ ಜತೆಗೆ ಮಕ್ಕಳು ಆಟವಾಡುತ್ತಿದ್ದಾರೆ. ಶಿಬಿರದಲ್ಲಿ ಕಲಾವಿದರು, ತಂತ್ರಜ್ಞರು ಸದಾ ಮಕ್ಕಳೊಂದಿಗಿದ್ದು, ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಹಗಲಿರುಳು ಶ್ರಮಿಸುತ್ತಿದ್ದಾರೆ.

‘ಶಿಬಿರದ ಸಮಾರೋಪದಲ್ಲಿ ಪ್ರತೀ ತಂಡವು ಒಂದೊಂದು ನಾಟಕವನ್ನು ಪ್ರದರ್ಶಿಸುತ್ತದೆ. ಮಾತನಾಡುವ ಕಲೆ, ದೇಹ ಭಾಷೆ, ಧೈರ್ಯ, ಆತ್ಮವಿಶ್ವಾಸ, ಪರಸ್ಪರ ಪ್ರೀತಿ, ಹೊಂದಾಣಿಕೆ ಮುಂತಾದ ಜೀವನ ಮೌಲ್ಯಗಳನ್ನು ರಂಗಕಲೆ ರೂಢಿಸುತ್ತದೆ. ಇದರ ಜತೆಯಲ್ಲಿ ಮಕ್ಕಳ ಸಾಹಿತ್ಯ, ಜನಪದ ಕಲೆ, ಚಿತ್ರಕಲೆ, ಪರಿಸರ ಸಂರಕ್ಷಣೆ, ಮುಂತಾದ ಚಟುವಟಿಕೆಗಳು ನಡೆಯಲಿವೆ. ಒಟ್ಟಾರೆ ಈ ಶಿಬಿರ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಸಹಕಾರಿಯಾಗಲಿದೆ’ ಎಂದು ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್ ಅಭಿಪ್ರಾಯಪಟ್ಟರು.

ಮನೆಗೆ ಹೋಗಲು ಹಿಂದೇಟು:

‘ಶಾಲೆಯಲ್ಲಿ ಪಾಠ ಆಲಿಸುತ್ತ ಪುಸ್ತಕ ಓದಿದರೆ, ಮನೆಯಲ್ಲಿ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದೆವು. ಆದರೆ ಇಲ್ಲಿ ಬಂದ ನಂತರವೇ ಪುಸ್ತಕ ಮತ್ತು ಟಿವಿ ಹೊರತುಪಡಿಸಿ ಬೇರೆಯದ್ದೇ ಜಗತ್ತು ಇದೆಯೆಂಬುದು ಗೊತ್ತಾಯಿತು. ಇಲ್ಲಿ ಒಂದೆರಡಲ್ಲ, ಹಲವಾರು ವಿಷಯ ಕಲಿಯುತ್ತಿದ್ದೇವೆ. ಮನೆಗೆ ಹೋಗಲು ಮನಸ್ಸು ಒಪ್ಪಲ್ಲ’ ಎನ್ನುವುದು ಇಲ್ಲಿನ ಮಕ್ಕಳ ಅಭಿಪ್ರಾಯ.ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ರಂಗಭೂಮಿ ಸೇರಿ ಹಲವು ವಿಷಯಗಳನ್ನು ಕಲಿಯುವ ಮಕ್ಕಳು ಮನೆಗೆ ಹೋಗುವುದಕ್ಕಿಂತ ಮೇಳದ ಶಿಕ್ಷಕರು ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಡುತ್ತಿದ್ದಾರೆ.

‘ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಸಂಪನ್ಮೂಲ ಶಿಕ್ಷಕರು ಮಕ್ಕಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದ್ದೇವೆ. ಮಕ್ಕಳ ಜತೆ ಮಕ್ಕಳಂತೆಯೇ ಸಂವಾದ ನಡೆಸಿ,ಮಕ್ಕಳನ್ನು ಹೊಸತನದ ಕಡೆಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದೇವೆ.ಮಕ್ಕಳ ಬಗೆಬಗೆಯ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಹೊಸ ವಿಷಯಗಳನ್ನು ತಿಳಿಸಿಕೊಡುತ್ತಿದ್ದೇವೆ. ಶಿಬಿರದಲ್ಲಿ ಕಲಿತ ವಿಷಯವು ಇಂತಿಷ್ಟು ದಿನಗಳಿಂದ ಸೀಮಿತಗೊಳ್ಳದೇ ಜೀವನ ಪರ್ಯಂತ ಮಕ್ಕಳಿಗೆ ಪ್ರಯೋಜನಕ್ಕೆ ಬರುತ್ತದೆ’ ಎಂದು ಶಿಬಿರದ ನಿರ್ದೇಶಕ ಚಂದ್ರು ತಿಪಟೂರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT