ಗುರುವಾರ , ಫೆಬ್ರವರಿ 27, 2020
19 °C
25ಕ್ಕೆ ಪ್ಲಾಸ್ಟಿಕ್‌ ಸಿಟಿ ನಾಟಕ, 26ಕ್ಕೆ ಗಾಂಧಿ, ಅಂಬೇಡ್ಕರ್ ಚಲನಚಿತ್ರ

ರಂಗಾಯಣ ಅಭಿವೃದ್ಧಿಗೆ ₹2.50 ಕೋಟಿ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬಯಲು ರಂಗಮಂದಿರ ನಿರ್ಮಾಣ ಸೇರಿದಂತೆ ರಂಗಾಯಣದ ಅಭಿವೃದ್ಧಿಗೆ ₨ 2.50 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ಹೇಳಿದರು.

ಬದಲಾದ ಯೋಜನಾ ವೆಚ್ಚದ ಪರಿಣಾಮ ಬಯಲು ರಂಗಮಂದಿರ ನಿರ್ಮಾಣ ನನೆಗುದಿಗೆ ಬಿದ್ದಿತ್ತು.₨ 50 ಲಕ್ಷ ಅನುದಾನ ಲಭ್ಯವಿದೆ. ಒಟ್ಟು 1.35 ಕೋಟಿ ಅಗತ್ಯವಿದ್ದು, ಉಳಿದ ₨ 85 ಲಕ್ಷ ಅಗತ್ಯವಿದೆ. ಇಂಟಿಮೇಟ್ ಥಿಯೇಟರ್‌ಗೆ ₨ 25 ಲಕ್ಷ ಸೇರಿದಂತೆ ವಿವಿಧ ಯೋಜನೆಗಳಿಗೆ ₨ 2.5 ಕೋಟಿ ಅನುದಾನ ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಮಕ್ಕಳ ರಂಗಭೂಮಿಗೆ ಒತ್ತು ನೀಡಲಾಗುವುದು. ಮಕ್ಕಳ ಬೇಸಿಗೆ ಶಿಬಿರ ಅಚ್ಚುಕಟ್ಟಾಗಿ ನಿರ್ವಹಿಸಲು ಆದ್ಯತೆ ನೀಡಲಾಗುವುದು. ಶಿಕ್ಷಕರಿಗೂ 15 ದಿನಗಳ ರಂಗ ತರಬೇತಿ ಶಿಬಿರ ನಡೆಸಲಾಗುವುದು ಎಂದರು.

ನಾಟಕ-ಚಲನಚಿತ್ರ ಪ್ರದರ್ಶನ:

71ನೇ ಗಣರಾಜ್ಯೋತ್ಸವದ ನೆನಪಿಗೆ ಜ.26 ರಂದು ಬೆಳಿಗ್ಗೆ 11 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ರಿಚರ್ಡ್‌ ಅಟೆನ್ ಬರೋ ನಿರ್ದೇಶನದ ಗಾಂಧಿ, ಸಂಜೆ 5ಕ್ಕೆ ಡಾ.ಜಬ್ಬಾರ್ ಪಟೇಲ್ ನಿರ್ದೇಶನದ ಡಾ.ಬಿ.ಆರ್. ಅಂಬೇಡ್ಕರ್ ಚಲನಚಿತ್ರಗಳ ಎರಡು ಪ್ರದರ್ಶನ ಆಯೋಜಿಸಲಾಗಿದೆ ಎಂದು ವಿವರ ನೀಡಿದರು.

25ರಂದು ಶಾಲಾ ಮಕ್ಕಳಿಗಾಗಿ ಬೆಳಿಗ್ಗೆ 11ಕ್ಕೆ ಹಾಗೂ 12 ರವರೆಗೆ ಸೂತ್ರಧಾರಿ ಗೊಂಬೆಯಾಟ ‘ಪ್ಲಾಸ್ಟಿಕ್‌ ಸಿಟಿ’ ನಾಟಕ ಇರುತ್ತದೆ. 400 ಮಕ್ಕಳಿಗೆ ಒಂದು ಪ್ರದರ್ಶನಕ್ಕೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಇದೇ ಪ್ರದರ್ಶನ ಸಂಜೆ 6.30ಕ್ಕೆ ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ. ಪ್ರವೇಶ ದರ ₨ 20 ಇರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)