ಬುಧವಾರ, ನವೆಂಬರ್ 13, 2019
18 °C

ರೆಪರ್ಟರಿಯಾಗಿ ರಂಗಾಯಣ ರೂಪಿಸಿದ ತೃಪ್ತಿ ಇದೆ: ಗಣೇಶ್

Published:
Updated:
Prajavani

ಶಿವಮೊಗ್ಗ: ಅತ್ಯುತ್ತಮ ರೆಪರ್ಟರಿಯಾಗಿ ಶಿವಮೊಗ್ಗ ರಂಗಾಯಣವನ್ನು ರೂಪಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ವೈವಿಧ್ಯಮಯ ನಾಟಕಗಳನ್ನು ಪ್ರದರ್ಶಿಸಲಾಗಿದೆ ಎಂದು ರಂಗಾಯಣದ ನಿರ್ಗಮಿತ ನಿರ್ದೇಶಕ ಡಾ.ಎಂ.ಗಣೇಶ್ ಹೇಳಿದರು.

ಬಯಲು ರಂಗಮಂದಿರ, ಆಪ್ತ ರಂಗಮಂದಿರ, ರಂಗೋಧ್ಯಾನ ನಿರ್ಮಾಣ ಕನಸಾಗಿತ್ತು. ಅನುದಾನ ಹೊಂದಿಸುವ ಪ್ರಯತ್ನ ನಡೆದಿದ್ದು. ಮುಂದೆ ಬರುವ ನಿರ್ದೇಶಕರು ಆ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಸುವರ್ಣ ಸಂಸ್ಕೃತಿ ಭವನದ ರಂಗಮಂದಿರ ಬಾಡಿಗೆ ಕೊಡಲು ಅನುಮತಿ ಪಡೆಯಲಾಗಿತ್ತು. ಧ್ವನಿ, ಬೆಳಕು, ಸಂಗೀತ, ಓದಿನ ಮನೆ, ಪುಸ್ತಕಗಳು, ಪ್ರೊಜೆಕ್ಟರ್, ಡಿಜಿಟಲ್ ಕ್ಯಾಮೆರಾ, ವೀಡಿಯೊ, ಕ್ಯಾಮೆರಾ, ₨ 33 ಲಕ್ಷದ ವಿಶೇಷ ವಿನ್ಯಾಸದ ಬಸ್ ಖರೀದಿಗೂ ಅನುಮೋದನೆ ಪಡೆಯಲಾಗಿದೆ ಎಂದರು.

ನಾಟಕಗಳ ವೀಡಿಯೊ ದಾಖಲೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ವಾರಾಂತ್ಯ ನಾಟಕ ಏರ್ಪಡಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಗ್ರಾಮೀಣ ಭಾಗಕ್ಕೆ ರಂಗಾಯಣ ರಂಗತೇರು ಎಳೆದುಕೊಂಡು ಹೋಗಲಾಗಿತ್ತು ರಚನಾತ್ಮಕ ಕೆಲಸಗಳ ಮೂಲಕ ಜನರ ಮನ ತಟ್ಟಿದ್ದೆವು ಎಂದು ನೆನಪು ಬಿಚ್ಚಿಟ್ಟರು.

ಮಕ್ಕಳ ಬೇಸಿಗೆ ಶಿಬಿರ ಆಯೋಜನೆ, ಚಿಣ್ಣರ ರಂಗೋತ್ಸವ, ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿಯ ಒಲವು ಮೂಡಿಸಲಾಯಿತು. ಬಹುಮುಖ್ಯವಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಟಕೋತ್ಸವ ಆಯೋಜಿಸುವ ಮೂಲಕ ಶಿವಮೊಗ್ಗದಲ್ಲಿ ರಂಗಭೂಮಿ ಹಬ್ಬ ನಡೆಸಿದ ತೃಪ್ತಿ ಇದೆ. 2017ರಲ್ಲಿ ನಿರ್ದೇಶಕನಾಗಿ ನೇಮಕವಾಗಿದ್ದೆ. ಹಲವು ಗೆಳೆಯರು, ರಂಗಾಸಕ್ತರು ಸಾರ್ವಜನಿಕರು ಸಹಕರಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದರು.

ಪ್ರತಿಕ್ರಿಯಿಸಿ (+)