ಆ.15ರಂದು ರಾಣಿ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ಕಾರ್ಯಾಚರಣೆ

7
ಮಹಿಳಾ ಎಎಸ್‌ಐ ನೇತೃತ್ವದ ತಂಡದಲ್ಲಿ ನಾಲ್ವರು ಮಹಿಳಾ ಕಾನ್‌ಸ್ಟೆಬಲ್; ನಗರದಲ್ಲಿ ಗಸ್ತು

ಆ.15ರಂದು ರಾಣಿ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ಕಾರ್ಯಾಚರಣೆ

Published:
Updated:
Deccan Herald

ವಿಜಯಪುರ:  ಕಾಲೇಜು ಹುಡುಗಿಯರನ್ನು ಚುಡಾಯಿಸುವ ಪುಂಡರನ್ನು ಸದೆ ಬಡಿಯಲು ಜಿಲ್ಲಾ ಪೊಲೀಸ್ ಇಲಾಖೆ ‘ರಾಣಿ ಚನ್ನಮ್ಮ ಮಹಿಳಾ ಪೊಲೀಸ್‌ ಪಡೆ’ ರಚಿಸಿದೆ. ಸ್ವಾತಂತ್ರ್ಯೋತ್ಸವದ ದಿನ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಈ ಪಡೆಗೆ ಚಾಲನೆ ನೀಡಲಿದ್ದಾರೆ.

ಪುಂಡರ ಉಪಟಳ ಹೆಚ್ಚುವ ಮುನ್ನವೇ, ಮುನ್ನೆಚ್ಚರಿಕೆ ಕ್ರಮವಾಗಿ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಈ ನೂತನ ಪಡೆಯನ್ನು ಸೃಜಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಸಾರಥ್ಯದಲ್ಲಿ ಈ ಪಡೆ ಕಾರ್ಯಾಚರಿಸಲಿದೆ.

ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಒಬ್ಬರು ಮಹಿಳಾ ಎಎಸ್‌ಐ ಒಳಗೊಂಡಂತೆ, ನಾಲ್ವರು ಮಹಿಳಾ ಕಾನ್‌ಸ್ಟೆಬಲ್‌ಗಳನ್ನೊಳಗೊಂಡ ರಾಣಿ ಚನ್ನಮ್ಮ ಮಹಿಳಾ ಪೊಲೀಸ್ ಪಡೆಯ ತಂಡ ಜೀಪ್‌ನಲ್ಲಿ ನಗರದ ಪ್ರಮುಖ ಕಾಲೇಜು, ಬಸ್‌ ನಿಲ್ದಾಣ, ಮಾರುಕಟ್ಟೆಯಲ್ಲಿ ಗಸ್ತು ತಿರುಗಲಿದೆ.

ಗಸ್ತಿನ ಸಂದರ್ಭ ಪುಂಡರ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದೆ. ರೊಟೇಷನ್‌ ಪದ್ಧತಿ ಆಧಾರದಲ್ಲಿ ಮಹಿಳಾ ಸಿಬ್ಬಂದಿ ಚೆನ್ನಮ್ಮ ಪಡೆಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಚನ್ನಮ್ಮ ತಂಡದ ಜೀಪ್‌ನ ಮೇಲ್ಭಾಗದಲ್ಲಿ ಮಕ್ಕಳ ಸಹಾಯವಾಣಿ, ಮಹಿಳಾ ಪೊಲೀಸ್ ಠಾಣೆ, ಪೊಲೀಸ್ ಕಂಟ್ರೋಲ್‌ ರೂಂನ ದೂರವಾಣಿ ಸಂಖ್ಯೆ ನಮೂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್‌ ನಿಕ್ಕಂ ‘ಪ್ರಜಾವಾಣಿ’ಗೆ ತಿಳಿಸಿದರು.

₹ 7 ಲಕ್ಷ ದಂಡ ವಸೂಲಿ:

‘ಆ 1ರಿಂದ ವಿಜಯಪುರ ನಗರದಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದು, ಶಿರಸ್ತ್ರಾಣ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಸವಾರರ ವಿರುದ್ಧ 600ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದು, ಭಾನುವಾರದವರೆಗೂ ₹ 7 ಲಕ್ಷ ದಂಡ ವಸೂಲಿ ಮಾಡಲಾಗಿದೆ’ ಎಂದು ಎಸ್‌ಪಿ ಹೇಳಿದರು.

‘ಹೆಲ್ಮೆಟ್‌ ಕಡ್ಡಾಯಗೊಳಿಸಿರುವುದೇ ಬೈಕ್‌ ಸವಾರರ ಸುರಕ್ಷತೆಗಾಗಿ. ಇದನ್ನು ಅರಿತುಕೊಂಡು ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿಯೇ ಬೈಕ್‌ ಸವಾರಿ ನಡೆಸಬೇಕು’ ಎಂದು ಇದೇ ಸಂದರ್ಭ ಮನವಿ ಮಾಡಿದರು.

7 ಮನೆಗಳ್ಳರ ಬಂಧನ:

ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು 7 ಮನೆಗಳ್ಳರನ್ನು ಬಂಧಿಸಿ, ಅವರಿಂದ ₹ 15.66 ಲಕ್ಷ ಮೌಲ್ಯದ ಚಿನ್ನಾಭರಣ, ಇನ್ನಿತರೆ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ಎಸ್‌ಪಿ ಹೇಳಿದರು.

ಸಲ್ಮಾನ್‌ ಖಾನ್‌, ಸದ್ದಾಂ ದಫೇದಾರ, ಅಕೀಬ ಜಾವೀದ, ಶ್ರೀಶೈಲ ಬಿರಾದಾರ ಹಾಗೂ 17 ವರ್ಷದ ಬಾಲಕನನ್ನು ಬಂಧಿಸಿ, ಇವರಿಂದ ₹ 36500 ನಗದು, ₹ 2 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು, ₹ 7 ಲಕ್ಷ ಮೌಲ್ಯದ 240 ಗ್ರಾಂ ಬಂಗಾರದ ಆಭರಣ, ಮೊಬೈಲ್‌, ಟಿ.ವಿ. ವಶಪಡಿಸಿಕೊಂಡಿದ್ದಾರೆ. ಇವರು 13 ಮನೆಗಳಲ್ಲಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸರ ತಂಡ ಈ ಪ್ರಕರಣ ಭೇದಿಸಿದೆ ಎಂದು ತಿಳಿಸಿದರು.

ನಗರದ ಮೂರು ಮನೆಗಳಲ್ಲಿ ಕಳವು ನಡೆಸಿದ್ದ 17 ವರ್ಷದ ಬಾಲಕರಿಬ್ಬರನ್ನು ಬಂಧಿಸಿ, ಇವರಿಂದ ₹ 6 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣವನ್ನು ಗೋಳಗುಮ್ಮಟ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಧಿಚೌಕ್‌ ಪೊಲೀಸರು ಬೈಕ್‌ ಕಳ್ಳರಿಬ್ಬರನ್ನು ಬಂಧಿಸಿ ಆರು ಬೈಕ್‌ ವಶಕ್ಕೆ ಪಡೆದಿದ್ದಾರೆ ಎಂದು ಇದೇ ಸಂದರ್ಭ ನಿಕ್ಕಂ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !