ಸಾಂವಿಧಾನಿಕ ಸಂಸ್ಥೆಗಳ ಸರ್ವ ನಾಶ ಮಾಡಿದ ಮೋದಿ

ಬುಧವಾರ, ಏಪ್ರಿಲ್ 24, 2019
23 °C
ಹಿರಿಯ ವಕೀಲ ರವಿವರ್ಮ ಕುಮಾರ್, ರಾಷ್ಟ್ರೀಯ ಸೇವಾದಳದ ಮುಖ್ಯಸ್ಥ ಸುರೇಶ್ ಖೈರ್‌ನಾರ್ ಆರೋಪ

ಸಾಂವಿಧಾನಿಕ ಸಂಸ್ಥೆಗಳ ಸರ್ವ ನಾಶ ಮಾಡಿದ ಮೋದಿ

Published:
Updated:

ಶಿವಮೊಗ್ಗ: ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ವನಾಶ ಮಾಡಿದ್ದಾರೆ. ಚುನಾವಣಾ ಆಯೋಗವನ್ನೂ ಬಳಸಿಕೊಂಡು ಮತದಾನದ ಪಾವಿತ್ರ್ಯ ಹಾಳುಗೆಡವಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕಂಟಕವಾಗಿರುವ ಬಿಜೆಪಿ ಕೇಂದ್ರದಲ್ಲಿ ಮತ್ತೆ ರಚನೆಯಾಗಬಾರದು ಎಂದು ಹಿರಿಯ ವಕೀಲ ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.

ನೋಟು ರದ್ದು ಮಾಡುವ ವಿಷಯ ಆರ್‌ಬಿಐ ಗವರ್ವರ್‌ ಅವರಿಗೇ ಗೊತ್ತಾಗದಂತೆ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದರು. ಜಿಎಸ್‌ಟಿ ಪರಿಣಾಮ ಸಣ್ಣ ಉದ್ದಿಮೆದಾರರು ನೆಲಕಚ್ಚಿದರು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಇಡೀ ವಿಶ್ವದಲ್ಲಿ ಅತ್ಯಂತ ಜಾತ್ಯತೀತವಾಗಿ ರೂಪುಗೊಂಡ 5 ಸಾವಿರ ಜಾತಿಗಳನ್ನು ಒಂದುಗೂಡಿಸಿರುವ ಸಂವಿಧಾನ ಬದಲಿಸಬೇಕು ಎಂದು ನಿರ್ಧರಿಸಿರುವ ಬಿಜೆಪಿ ನಮಗೆ ಬೇಕೇ? ಭಾರತದ ಪೌರತ್ಯ ಯಾರಿಗೆ ಬೇಕಾದರೂ ಕೊಡುತ್ತೇವೆ. ಮುಸ್ಲಿಮರಿಗೆ ಕೊಡುವುದಿಲ್ಲ ಎಂಬ ಕಾನೂನು ಜಾರಿಗೆ ತರಲು ಹೊರಟ ಮೋದಿ ಬೇಕೇ? ಚುನಾವಣೆ ನಂತರ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಬೇಕಾದ ಪ್ರಧಾನಿ ಹುದ್ದೆಯನ್ನು ಮೊದಲೇ ಘೋಷಿಸಿದ್ದಾರೆ. ಈ ಬಾರಿ ಮೋದಿ ಸರ್ಕಾರ ಎಂದು ಹೇಳುತ್ತಾ ಪರೋಕ್ಷವಾಗಿ ಅಧ್ಯಕ್ಷೀಯ ಮಾದರಿ ಹೇರುತ್ತಿರುವ ಬಿಜೆಪಿ ವಿರುದ್ಧ ಮತದಾರರು ಮತ ಚಲಾಯಿಸಬೇಕು ಎಂದು ಕೋರಿದರು.

ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹ:

ರಾಷ್ಟ್ರೀಯ ಸೇವಾದಳದ ಮುಖ್ಯಸ್ಥ ಸುರೇಶ್ ಖೈರ್‌ನಾರ್ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಧರ್ಮ ಬೆರೆಸುತ್ತಿರುವ, ಜನರ ನಡುವೆ ವೈಷಮ್ಯ ಮೂಡುವಂತೆ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸಿದರು.

ಚುನಾವಣಾ ಆಯೋಗವು ಯೋಗಿ ಆದಿತ್ಯನಾಥ್, ಮಾಯಾವತಿ ಅವರ ವಿರುದ್ಧ ಕ್ರಮ ಕೈಗೊಂಡಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಕ್ರಮ ಜರುಗಿಸಬೇಕು. ನರೇಂದ್ರ ಮೋದಿ ಅವರೂ ಸಹ ಅದೇ ರೀತಿ ಭಾಷಣ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಮುಕ್ತ ಭಾರತ ಅಭಿಯಾನವನ್ನು ನಾವು ರಾಷ್ಟ್ರಾದ್ಯಂತ ಕೈಗೊಂಡಿದ್ದೇವೆ. ಭಾರತೀಯ ಸೇನೆ ಯಾವತ್ತೂ ಜಾತ್ಯತೀತವಾಗಿದೆ. ಆದರೆ, ಬಿಜೆಪಿ ಮೋದಿ ಸೈನ್ಯ ಎಂದು ಮಾತನಾಡುತ್ತಾರೆ. ಬಿಜೆಪಿಗೆ ಮತ ನೀಡದಿದ್ದರೆ ದೇಶದ್ರೋಹ ಎನ್ನುವ ಮೋದಿ ಅವರ ವಿರುದ್ಧ ಇದೂವರೆಗೂ ಏಕೆ ಕ್ರಮವಿಲ್ಲ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಕಡಿದಾಳ್ ಶಾಮಣ್ಣ, ಬಿಜಾಪುರದ ಅಪ್ಪಾ ಸಾಹೇಬ್ ಯರಗನಾಳ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಕಾಂಗ್ರೆಸ್ ಜಿಲ ಘಟಕದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ವಕೀಲ ಎಸ್.ಎನ್. ಮೂರ್ತಿ, ಆನಂದ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !