ಶನಿವಾರ, ನವೆಂಬರ್ 16, 2019
21 °C

ದೇವರಹಿಪ್ಪರಗಿ: ರಾವುತರಾಯ ಬಂಡಿ ಉತ್ಸವ ಇಂದು

Published:
Updated:
Prajavani

ದೇವರ ಹಿಪ್ಪರಗಿ: ಶ್ರದ್ಧಾ ಭಕ್ತಿಯೊಂದಿಗೆ ಆರಂಭವಾದ ಐತಿಹಾಸಿಕ ಹಿನ್ನೆಲೆಯ ಪಟ್ಟಣದ ರಾವುತರಾಯ–ಮಲ್ಲಯ್ಯ ಜಾತ್ರೋತ್ಸವ ಸೋಮವಾರ ಅದ್ಧೂರಿಯ ಬಂಡಿ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ವಿಜಯದಶಮಿ ಬಳಿಕ ದ್ವಾದಶಿಯಂದು ಆರಂಭಗೊಳ್ಳುವ ಸಾಂಪ್ರದಾಯಿಕ ಜಾತ್ರಾ ಮಹೋತ್ಸವ ಹುಣ್ಣಿಮೆಯ ಮರುದಿನ ರಾವುತರಾಯನ ಬಂಡಿ ಉತ್ಸವದೊಂದಿಗೆ ಮುಕ್ತಾಯವಾಗುವುದು. ಶತಮಾನದ ಇತಿಹಾಸ ಹೊಂದಿರುವ ಈ ಜಾತ್ರೆಯೊಂದಿಗೆ ಐತಿಹಾಸಿಕ ಹಿನ್ನೆಲೆಯಲ್ಲದೇ ಪುರಾಣ, ಜನಪದವೂ ತಳಕು ಹಾಕಿಕೊಂಡಿದೆ.

ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಜಾತ್ರೆಯು ಆಧುನಿಕತೆಯ ಭರದಲ್ಲೂ ಸಡಗರದ ಜೊತೆ ಶ್ರದ್ಧೆಯಿಂದ ಮುಂದುವರಿದಿದೆ.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಭಕ್ತರೂ ಜಾತ್ರೆಗೆ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಶ್ವಾರೂಢ ರಾವುತರಾಯನಿಗೆ ಪೂಜೆ ಸಲ್ಲಿಸಿ, ದೇವಾಲಯದ ಆವರಣದಲ್ಲಿ ವಗೈಗಳಿಗೆ ಊಟ ಮಾಡಿಸಿ ಪುನೀತರಾಗುತ್ತಾರೆ.

ತೆರೆದ ಬಂಡಿಯಲ್ಲಿ ರಾವುತರಾಯ ಅಶ್ವಾರೂಢನಾಗಿ ಆಸೀನನಾಗುವ ಮೂಲಕ ಜಾತ್ರೆ ಆರಂಭವಾಗುತ್ತದೆ. ಈ ಬಂಡಿ ಮೆರವಣಿಗೆ ಛತ್ರಿ, ಚಾಮರಗಳೊಂದಿಗೆ ರಾವುತರಾಯನ ದೇಗುಲದಿಂದ ಮಲ್ಲಯ್ಯನ ದೇಗುಲದವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ 500ಕ್ಕೂ ಹೆಚ್ಚು ಜನ ಭಕ್ತರಿಂದ ಪುಷ್ಪಾಲಂಕಾರ ಜರುಗುತ್ತದೆ. ಇದನ್ನು ಹೂ ಮುಡಿಯುವುದು ಎನ್ನಲಾಗುತ್ತದೆ.

ಬಳಿಕ ಶೀಡಗಟ್ಟಿ ಹಾಗೂ ಪಾದಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರಿಂದ ಹೇಳಿಕೆ ನಡೆಯುತ್ತವೆ. ಸಿಂದಗಿ ರಸ್ತೆಯಲ್ಲಿರುವ ಬನ್ನಿ ವೃಕ್ಷಕ್ಕೆ ತೆರಳಿ ಪ್ರದಕ್ಷಿಣೆ ಮಾಡಿ ಮಲ್ಲಯ್ಯನ ದೇವಸ್ಥಾನವನ್ನು ರಾವುತರಾಯ ಪ್ರವೇಶಿಸುತ್ತಾನೆ. ಸಂಪ್ರದಾಯದಂತೆ ಇಲ್ಲಿ ರಾವುತರಾಯ–ಗಂಗೆಮಾಳಮ್ಮರ ಮದುವೆ ಪ್ರಸಂಗ ಜರುಗುತ್ತದೆ.

ಶೀಗೆ ಹುಣ್ಣಿಮೆಯ ದಿನವಾದ ಭಾನುವಾರ ಸಕ್ಕರೆ ಲೋಬಾನ ನೈವೇದ್ಯ ಕಾರ್ಯಕ್ರಮ ಜರುಗಿತು. ಜೊತೆಗೆ ಪಟ್ಟಣದ ಹಲವರು ಹಾಗೂ ಗೆಳೆಯರ ಬಳಗದ ಸದಸ್ಯರಿಂದ ಭಕ್ತವೃಂದಕ್ಕೆ ಅನ್ನ ಸಂತರ್ಪಣೆ ಜರುಗಿತು. ಜಾತ್ರೆಯ ಕೊನೆಯ ದಿನವಾದ ಸೋಮವಾರ ರಾವುತರಾಯ ಪುನಃ ತೆರೆದ ಬಂಡಿಯಲ್ಲಿ ಅಶ್ವಾರೂಢನಾಗಿ ಸ್ವಸ್ಥಾನಕ್ಕೆ ಮರಳುತ್ತಾನೆ.

ಇದೇ ಸಂದರ್ಭದಲ್ಲಿ ರಾವುತರಾಯ ದೇವಸ್ಥಾನ ಸನಿಹ ಗುಂಡುಕಲ್ಲು, ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ಜರುಗುತ್ತವೆ. ಭಕ್ತ ಸಮೂಹ ಏಳಕೋಟಿ, ಏಳಕೋಟಿ, ಏಳಕೋಟಿಗೆ ಎಂಬ ಘೋಷಣೆ, ಜಯಕಾರ ಮೊಳಗಿಸುತ್ತದೆ.

ಜಾತ್ರೆಯ ಐತಿಹಾಸಿಕ ಹಿನ್ನೆಲೆ

ರಾವುತರಾಯನನ್ನು ಮಾರ್ತಾಂಡ ಭೈರವ ಎಂದು ಕರೆಯಲಾಗುತ್ತಿತ್ತು ಎಂದು ಮಲ್ಲಾರಿ ಮಹಾತ್ಮೆ ಎಂಬ ಸಂಸ್ಕೃತ ಗ್ರಂಥದಲ್ಲಿ ಉಲ್ಲೇಖವಿದೆ. ಮಣಿ ಮಲ್ಲಾಸುರರು ಎಂಬ ದುಷ್ಟರ ವಧೆಗೆ ಮಾರ್ತಾಂಡ ಭೈರವನಾಗಿ ಅವತರಿಸಿದ ಶಿವನು ಒಬ್ಬ ಮೈಲಾರ. ಈತ ಅಶ್ವಾರೂಢನಾಗಿ ಹೊರಟು ಮಣಿ ಮಲ್ಲಾಸುರರನ್ನು ವಧಿಸಿದನಂತೆ. ಈತನ ಮಡದಿ ಗಂಗೆ ಮಾಳಮ್ಮ. ಇವಳನ್ನು ತುಪ್ಪದ ಮಾಳಮ್ಮ ಎಂದೂ ಕರೆಯಲಾಗುತ್ತದೆ. ಈತನ ವಾಹನ ನಾಯಿ.

ಜಾತ್ರೆಯ ಕೇಂದ್ರ ಬಿಂದುವಾದ ಮಲ್ಲಯ್ಯನ ದೇವಸ್ಥಾನಕ್ಕೆ 1,500 ವರ್ಷಗಳ ಇತಿಹಾಸವಿದೆ. ದೇವಾಲಯದ ಹಿಂಬದಿಯ ಐದು ಅಂತಸ್ತಿನ ದೀಪಸ್ತಂಭ, ಮಹಲಗಂಬ ವಿಜಯಪುರದ ಆದಿಲ್ ಶಾಹಿ ಅರಸರ ಕಣ್ಣು ಕುಕ್ಕುವಂತೆ ಮಾಡಿತ್ತು ಎಂಬ ಅಂಶ ಇತಿಹಾಸದಿಂದ ತಿಳಿದು ಬರುತ್ತದೆ.

ಮಲ್ಲಯ್ಯನ ದೇಗುಲದ ಮುಂದಿರುವ ಹುಣಸೇಮರ 893 ವರ್ಷಗಳಷ್ಟು ಹಳೆಯದಾಗಿದ್ದು, 2011ರಲ್ಲಿ ಘೋಷಿಸಿದ ರಾಜ್ಯದ ಪಾರಂಪರಿಕ ಮರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ.

 

ಪ್ರತಿಕ್ರಿಯಿಸಿ (+)