ಗುರುವಾರ , ನವೆಂಬರ್ 14, 2019
18 °C
ಮೊಳಗಿದ ‘ಏಳುಕೋಟಿ–ಏಳುಕೋಟಿ–ಏಳುಕೋಟಿ ಗೇ’ ಘೋಷ

ರಾವುತರಾಯ–ಮಲ್ಲಯ್ಯ ಜಾತ್ರೆ ಸಂಪನ್ನ

Published:
Updated:
Prajavani

ದೇವರಹಿಪ್ಪರಗಿ: ರಾವುತರಾಯ–ಮಲ್ಲಯ್ಯನ ಅದ್ಧೂರಿ ಜಾತ್ರೆ ವಿವಿಧೆಡೆಯಿಂದ ಬಂದ ಸಾವಿರಾರು ಭಕ್ತರ ಮಧ್ಯೆ ಸೋಮವಾರ ಸಂಪನ್ನವಾಯಿತು.

ಪಟ್ಟಣದ ಹೊರವಲಯದ ಮಲ್ಲಯ್ಯನ ದೇವಸ್ಥಾನಕ್ಕೆ ಕಳೆದ ಗುರುವಾರ ತೆರಳಿದ್ದ ರಾವುತರಾಯನನ್ನು ಸೋಮವಾರ ಸಾಂಪ್ರದಾಯಿಕ ಬಂಡಿ ಮೆರವಣಿಗೆಯಲ್ಲಿ ಭಕ್ತರ ಜಯಘೋಷದ ನಡುವೆ ಮೂಲ ದೇವಸ್ಥಾನಕ್ಕೆ ಕರೆ ತರಲಾಯಿತು.

ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಬಂದ ಭಕ್ತ ಸಮೂಹ ಐದು ದಿನಗಳ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾದರು.

ಸೋಮವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನಿಗೆ ಭಕ್ತರು ಭಂಡಾರ ಎರಚಿ ‘ಏಳುಕೋಟಿ–ಏಳುಕೋಟಿ–ಏಳುಕೋಟಿ ಗೇ’ ಎಂಬ ಜಯಘೋಷ ಮೊಳಗಿಸಿದರು.

ಜಾತ್ರೆಯಲ್ಲಿ ವಿಶೇಷವಾಗಿ ಡೊಳ್ಳು ವಾದ್ಯವೃಂದ ಸೇರಿದಂತೆ ಮಹಿಳಾ ಮತ್ತು ಪುರುಷ ವಗ್ಗೆಗಳು ಹೆಗಲ ಮೇಲೆ ಕಂಬಳಿ ಹೊತ್ತು, ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ತುಂಬ ಭಂಡಾರ ಬಡಿದುಕೊಂಡು ರಾವುತರಾಯನ ಬಂಡಿ ಮುಂದೆ ಮೈದುಂಬಿ ಕುಣಿಯುತ್ತ ಜನರ ಗಮನ ಸೆಳೆದರು.

ಪಟ್ಟಣದ ಜನರು ಐದು ದಿನಗಳವರೆಗೆ ಪ್ರತಿದಿನ ಪೂಜಾ ಕಾರ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರುಗು ತಂದರು.

ಉಚಿತ ಅನ್ನಪ್ರಸಾದ: ಪಟ್ಟಣದ ಹಲವಾರು ಯುವಕ ಸಂಘಗಳು ವ್ಯಾಪಾರಸ್ಥರು ಉಚಿತ ಅನ್ನ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಜಾತ್ರೆಯುದ್ದಕ್ಕೂ ಪಿಎಸ್‌ಐ ಎಂ.ಬಿ.ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.

ಪ್ರತಿಕ್ರಿಯಿಸಿ (+)