ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಕೆಸರುಗದ್ದೆಯಾದ ಸಂತೆ ಬೀದಿ!

ವ್ಯಾಪಾರಿಗಳನ್ನು ಕಾಡಿದ ಮಳೆ; ಕೆಸರಿನಲ್ಲಿಯೇ ಕುಳಿತು ತರಕಾರಿ ಮಾರಾಟ
Last Updated 11 ಜೂನ್ 2018, 9:47 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ವಾರದ ಸಂತೆಯಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಬೇಕಾಯಿತು.

ಜೋರು ಮಳೆಯಿಂದಾಗಿ ವ್ಯಾಪಾರಿಗಳು ತೋಯ್ದು ಹೋಯ್ದರು. ರಕ್ಷಣೆಗೆ ನಿರ್ಮಿಸಿಕೊಂಡಿದ್ದ ಟೆಂಟ್ ಒಳಗೆ ನೀರು ನುಗ್ಗಿದ್ದರಿಂದ ಸೊಪ್ಪು, ತರಕಾರಿ, ಹಣ್ಣುಗಳು ನೆನೆದು ನೀರಾದವು. ಕೆಲವರು ಸೊಪ್ಪು, ತರಕಾರಿ, ದಿನಸಿ, ಹಣ್ಣು, ಹೂವಿನ ಪುಟ್ಟಿಗಳಿಗೆ ಪ್ಲಾಸ್ಟಿಕ್ ಕವರ್ ಹೊದಿಸಿ ರಕ್ಷಿಸಿದರು.

ಬಿಟ್ಟು, ಬಿಟ್ಟು ಸುರಿದ ಮಳೆಯಿಂದ ವ್ಯಾಪಾರಿಗಳು ಕಂಗಾಲಾದರು. ಪಟ್ಟಣದ ಗ್ರಾಹಕರು ಮಳೆಯಲ್ಲಿ ಸಂತೆಗೆ ಬರಲು ಹಿಂದೇಟು ಹಾಕಿದರು. ಕೆಲವರು ಮಳೆಯಲ್ಲೇ ತರಕಾರಿ ಖರೀದಿಸಿದರು.

ಸಂತೆ ಮಾಳ ಕೆಸರುಮಯ: ಬಿರುಸಿನ ಮಳೆಯಿಂದ ಪಟ್ಟಣದ ಹೊಸದುರ್ಗ ಮಾರ್ಗದ ಕೆಸರುಗಟ್ಟೆ ಕೆರೆ ಪಕ್ಕದಲ್ಲಿನ ಸಂತೆ ಮಾಳ ಕೆಸರುಗದ್ದೆಯಂತಾಗಿತ್ತು. ತರಕಾರಿ ಟೆಂಟ್‌ಗಳ ಸಾಲಿನ ಮಧ್ಯೆ ನೀರು, ಕೆಸರು ತುಂಬಿದ್ದರಿಂದ ಗ್ರಾಹಕರು ತರಕಾರಿ ಖರೀದಿಸಲು ಹರಸಾಹಸ ಪಡಬೇಕಾಯಿತು. ಒಂದು ಕೈಯಲ್ಲಿ ತರಕಾರಿ ಬ್ಯಾಗ್, ಮತ್ತೊಂದು ಕೈಯಲ್ಲಿ ಪಂಚೆ, ಪ್ಯಾಂಟ್, ಸೀರೆ ಹಿಡಿದು ಸರ್ಕಸ್ ಮಾಡುತ್ತಾ ನಡೆಯುವ ಸ್ಥಿತಿ ಇತ್ತು. ಅಶಕ್ತರು, ವೃದ್ಧರು, ಮಕ್ಕಳಲ್ಲಿ ಕೆಲವರು ಕೆಸರಿನಲ್ಲಿ ಜಾರಿ ಬಿದ್ದ ಪ್ರಸಂಗಗಳೂ ನಡೆದವು.

ತೆರಿಗೆ ಬೇಕು, ಸೌಲಭ್ಯ ಕೊಡಲ್ಲ: ‘ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಪ್ರತಿ ವರ್ಷ ಸಂತೆಯ ಜಾಗವನ್ನು ಹರಾಜು ಮಾಡಲಾಗುತ್ತದೆ. ಹರಾಜು ಪಡೆದವರು, ವ್ಯಾಪಾರಿಗಳಿಂದ ಪ್ರತಿ ವಾರ ‘ಜಕಾತಿ’ (ಜಾಗದ ತೆರಿಗೆ) ವಸೂಲಿ ಮಾಡುತ್ತಾರೆ. ತೆರಿಗೆ ಪಡೆಯುವ ಪಟ್ಟಣ ಪಂಚಾಯಿತಿ ವ್ಯಾಪಾರಿಗಳಿಗೆ ಮಾತ್ರ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸಂತೆಮಾಳದಲ್ಲಿ ಶೌಚಾಲಯ, ಕುಡಿಯುವ ನೀರು, ನೆರಳಿನ ಸೌಲಭ್ಯಗಳಿಲ್ಲ. ಬಿಸಿಲು, ಗಾಳಿ, ಮಳೆಯಲ್ಲಿ ವ್ಯಾಪಾರ ಮಾಡಬೇಕಿದೆ’ ಎಂಬುದು ಇಲ್ಲಿನ ವ್ಯಾಪಾರಿಗಳು ಮತ್ತು ಗ್ರಾಹಕರ ಅಳಲು.

ಸಂತೆಮಾಳ ಚಿಕ್ಕದಾಗಿರು ವುದರಿಂದ ಮಾರಾಟಕ್ಕೆ ಜಾಗ ಸಿಗದವರು ಹೊಳಲ್ಕೆರೆ-ಹೊಸದುರ್ಗ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ವ್ಯಾಪಾರ ನಡೆಸುತ್ತಾರೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತದೆ.

ವಾರಕ್ಕೊಮ್ಮೆ ತರಕಾರಿ ಖರೀದಿ !

ಹೊಸದುರ್ಗ, ಚಿತ್ರದುರ್ಗ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಹಣ್ಣು, ತರಕಾರಿ ಸಂತೆ ನಡೆಯುತ್ತದೆ. ಇದರಿಂದ ಗ್ರಾಹಕರು ನಿತ್ಯವೂ ತಾಜಾ ತರಕಾರಿ, ಹಣ್ಣು ಖರೀದಿಸಬಹುದು. ಆದರೆ ಪಟ್ಟಣದಲ್ಲಿ ಪ್ರತಿ ಭಾನುವಾರ ಮಾತ್ರ ತರಕಾರಿ ಸಂತೆ ನಡೆಯುತ್ತದೆ. ವಾರದ ಸಂತೆ ಮಿಸ್ ಮಾಡಿಕೊಂಡರೆ ಮತ್ತೆ ಮುಂದಿನ ವಾರದವರೆಗೆ ಕಾಯಬೇಕು.

ಇಲ್ಲವಾದಲ್ಲಿ ಪಟ್ಟಣದಲ್ಲಿರುವ ಒಂದೆರಡು ತರಕಾರಿ ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ತರಕಾರಿ ಖರೀದಿಸಬೇಕು. ಪಟ್ಟಣದಲ್ಲಿಯೂ ನಿತ್ಯ ಬೆಳಗಿನ ಸಂತೆ ನಡೆಸಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂಬುದು ಇಲ್ಲಿನ ನಾಗರಿಕರ ಬಹುದಿನಗಳ ಬೇಡಿಕೆ.

ಪಟ್ಟಣ ಪಂಚಾಯಿತಿಯವರು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಾರೆಯೇ ಹೊರತು, ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ.
-ಮಾಫೂಸ್,  ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT