ಸೋಮವಾರ, ಡಿಸೆಂಬರ್ 9, 2019
24 °C

ಏಡ್ಸ್‌ ಪ್ರಮಾಣ ಶೂನ್ಯಕ್ಕೆ ಇಳಿಯಲಿ: ಸಿಇಒ ಗೋವಿಂದ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಏಡ್ಸ್ ಕಾಯಿಲೆ ಬಾರದಂತೆ ಕೈಗೊಳ್ಳಬಹುದಾದ ನಿಯಂತ್ರಣ ಕ್ರಮಗಳ ಬಗ್ಗೆ ವ್ಯಾಪಕವಾದ ಜಾಗೃತಿ ಮೂಡಿಸಿದ್ದರಿಂದ, ಎಚ್‌ಐವಿ ಸೋಂಕಿತರ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಇನ್ನಷ್ಟು ಶ್ರಮಿಸಿ ಈ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ ಹೇಳಿದರು.

ಇಲ್ಲಿಯ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದೊಂದಿಗೆ ಸಂಘ– ಸಂಸ್ಥೆಗಳು ಕೈ ಜೋಡಿಸಿದ ಪರಿಣಾಮವಾಗಿಯೇ ಜಿಲ್ಲೆಯಲ್ಲಿ ಏಡ್ಸ್ ಬಾಧಿತರ ಪ್ರಮಾಣ ತಗ್ಗಿದೆ. ಎಚ್‌ಐವಿ ಸೋಂಕಿತರ ನಿಯಂತ್ರಣ ಪಟ್ಟಿಯಲ್ಲಿ ವಿಜಯಪುರ 3ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ವ್ಯಾಪಕ ಕಾರ್ಯಚಟುವಟಿಕೆಗಳ ಮೂಲಕ ಎಚ್‌ಐವಿ ಸೋಂಕಿತರ ಪ್ರಮಾಣ ತಗ್ಗಿಸಲು ಇನ್ನಷ್ಟು ಆದ್ಯತೆ ನೀಡಬೇಕಿದೆ’ ಎಂದರು.

‘ಸೋಂಕಿತರು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಅವರು ಎದುರಿಸುವ ಮಾನಸಿಕ ನೋವುಗಳು ಬೆಟ್ಟದಷ್ಟು. ಸೋಂಕಿತರ ಕುಟುಂಬಸ್ಥರು ಸಹ ಅನೇಕ ರೀತಿಯ ಮಾನಸಿಕ ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಆ ಕುಟುಂಬದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆಯೂ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ಕುಟುಂಬಗಳಿಗೆ ಹಾಗೂ ಸೋಂಕಿತರಿಗೆ ಸಂಘ-ಸಂಸ್ಥೆಗಳಿಂದ ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ನಡೆಯಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಡಾ.ಪ್ರವೀಣ ಶಹಾಪೂರ, ‘ಬೆಂಗಳೂರು ಮೊದಲಾದ ಕಡೆಗಳಲ್ಲಿ ಎಚ್‍ಐವಿ ಸೋಂಕಿತರಿಗೆ ಎಆರ್‌ಟಿ ಕೇಂದ್ರದಿಂದ ದೊರಕುವ ಮಾತ್ರೆಗಳನ್ನು ನೇರವಾಗಿ ಅವರ ಮನೆಗೆ ತಲುಪಿಸುವ ಕಾರ್ಯದಲ್ಲಿ ಅನೇಕ ಸಂಘ-ಸಂಸ್ಥೆಗಳು ತೊಡಗಿಸಿಕೊಂಡಿವೆ. ಈ ಕಾರ್ಯ ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದಲ್ಲಿ ನಡೆಯಬೇಕಿದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ.ವಿ.ಪಿ.ಹುಗ್ಗಿ, ಡಿಎಚ್‍ಓ ಡಾ.ಮಹೇಂದ್ರ ಕಾಪಸೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶರಣಪ್ಪ ಕಟ್ಟಿ, ಡಾ.ಈರಣ್ಣ ಧಾರವಾಡಕರ, ಡಾ.ಪ್ರವೀಣ ಶಹಾಪೂರ, ಡಾ.ಚೆನ್ನಮ್ಮ ಕಟ್ಟಿ, ಗಂಗಯ್ಯ ಹಿರೇಮಠ, ಸುನಂದಾ ತೋಳಬಂದಿ, ವಾಸುದೇವ ತೋಳಬಂದಿ ಇದ್ದರು. ರವಿ ಕಿತ್ತೂರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)