ಬೆಳೆ ಸಾಲಮನ್ನಾಕ್ಕೆ ಹೆಸರು- 31ರ ವರೆಗೆ ಗಡುವು

7

ಬೆಳೆ ಸಾಲಮನ್ನಾಕ್ಕೆ ಹೆಸರು- 31ರ ವರೆಗೆ ಗಡುವು

Published:
Updated:

ರಾಮನಗರ : ರಾಜ್ಯ ಸರ್ಕಾರದ ಬೆಳೆ ಸಾಲ ಮನ್ನಾ ಯೋಜನೆಯಡಿ ಇದೇ 15 ರಿಂದ 31ರ ಒಳಗೆ ಬೆಳೆ ಸಾಲ ಪಡೆದ ಜಿಲ್ಲೆಯ ಪ್ರತಿಯೊಬ್ಬ ರೈತರು ಸಂಬಂಧಿತ ವಾಣಿಜ್ಯ ಬ್ಯಾಂಕ್‍ ಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ನಿಗಧಿತ ಅವಧಿಯೊಳಗೆ ಬ್ಯಾಂಕುಗಳು ಕಾರ್ಯನಿರ್ವಹಿಸುವ ಸಮಯದಲ್ಲಿ ಕಡ್ಡಾಯವಾಗಿ ಸ್ವಯಂ ದೃಢೀಕರಣ ಪತ್ರದೊಂದಿಗೆ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್‍ ನಕಲು ಪ್ರತಿಗಳನ್ನು ಮತ್ತು (ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ) ತಾವು ಸಾಲ ಪಡೆದ ಜಮೀನಿನ ಸರ್ವೆ ನಂಬರಿನ ಮಾಹಿತಿ ತಪ್ಪದೇ ಸಲ್ಲಿಸಿ ಹೆಸರನ್ನು ನೋಂದಾಯಿಸಬೇಕು.

ಇದಕ್ಕಾಗಿ ಆಯಾ ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ 30 ರೈತರ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಾಕಿ ಉಳಿದ ರೈತರಿಗೆ ಮುಂದಿನ ದಿನ ನಿಗದಿಪಡಿಸಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‌ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಆತಂಕ ಪಡೆದ ಸಾಲ ಮನ್ನಾ ಯೋಜನೆಯಡಿ ರೈತರು ಹೆಸರನ್ನು ನೋಂದಾಯಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸರ್ಕಾರ ನಿಗದಿಪಡಿಸಿದ ಬೆಳೆ ಸಾಲ ಮನ್ನಾ ರೈತ ಫಲಾನುಭವಿಗಳ ಅರ್ಹತೆಗಳ ವಿವರ ಇಂತಿದೆ. 2009ರ ಏಪ್ರಿಲ್ 1 ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಮತ್ತು 2017ರ ಡಿ. 31ರ ವರೆಗೆ ಬಾಕಿ ಇರುವ ಬೆಳೆ ಸಾಲಗಳು, ಅಂದರೆ ಸುಸ್ತಿ ಸಾಲ, ಪುನರಾವಸ್ತಿ ಸಾಲ, ಎನ್.ಪಿ.ಎ. ಸಾಲಗಳು ಅರ್ಹವಾಗಿರುತ್ತದೆ.

ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬವು ಅಂದರೆ ಗಂಡ, ಹೆಂಡತಿ, ಅವಲಂಬಿತ ಮಕ್ಕಳು ಸೇರಿದಂತೆ ಗರಿಷ್ಠ ₹2 ಲಕ್ಷ ಗಳ ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿರುತ್ತಾರೆ. (ಇದಕ್ಕಾಗಿ 2018ರ ಜುಲೈ 5ಕ್ಕಿಂತ ಮುಂಚಿತವಾಗಿ ಪಡೆದ ಪಡಿತರ ಚೀಟಿಯನ್ನು ಮಾತ್ರ ಪರಿಗಣಿಸಲಾಗುವುದು)

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ ಸಾರ್ವಜನಿಕ ಸ್ವಾಮ್ಯದಲ್ಲಿ ಪಿ.ಎಸ್.ಯು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಮಾಹೆಗೆ ₨15 ಸಾವಿರ ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯಡಿ ಅರ್ಹರಿರುವುದಿಲ್ಲ. (ಈ ಮಿತಿಯು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ) ಸಹಕಾರಿ ಬ್ಯಾಂಕ್‍ ಗಳಲ್ಲಿ ಬೆಳೆ ಸಾಲ ಮನ್ನಾ ಫಲಾನುಭವಿಗಳು, ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ಅರ್ಹರಿರುವ ಎಲ್ಲಾ ರೈತರಿಗೆ ಬೆಳೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಇದರ ಲಾಭವನ್ನು ಪಡೆದುಕೊಳ್ಳಬೇಕು.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ರೈತರಿಗೆ ಯಾವುದಾದರೂ ಗೊಂದಲ ಅಥವಾ ಸಂದೇಹಗಳಿದ್ದಲ್ಲಿ ಸಂಬಂಧಪಟ್ಟ ತಹಶೀಲ್ದಾರರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !