ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರದಿಂದ ₹ 358 ಕೋಟಿ ಬಿಡುಗಡೆ

7
₹ 125 ಕೋಟಿ ಬಳಸಿರುವ ರಾಜ್ಯ; ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿಕೆ

ಶೌಚಾಲಯ ನಿರ್ಮಾಣಕ್ಕಾಗಿ ಕೇಂದ್ರದಿಂದ ₹ 358 ಕೋಟಿ ಬಿಡುಗಡೆ

Published:
Updated:
Deccan Herald

ಸಿಂದಗಿ: ‘ರಾಜ್ಯದಲ್ಲಿ 2013ರಲ್ಲಿ ನಡೆಸಿದ ಬೇಸ್‌ಲೈನ್ ಸಮೀಕ್ಷೆಯಂತೆ ಶೇ 35.41ರಷ್ಟು ಸಾರ್ವಜನಿಕರು ಶೌಚಾಲಯ ಹೊಂದಿದ್ದರು. ಇದೀಗ ಅದು ಶೇ.96ರಷ್ಟಾಗಿದೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.

‘ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ₹ 358 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜ್ಯ ಸರ್ಕಾರ ಕೇವಲ ₹ 125 ಕೋಟಿ ಮಾತ್ರ ಖರ್ಚು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

‘2018-19ನೇ ಸಾಲಿನಲ್ಲಿ 7,78,841 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಅದರಲ್ಲಿ 24,453(ಶೇ 31ರಷ್ಟು) ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಮೂರು ಸಾವಿರ ಸಮುದಾಯ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಇದರಲ್ಲಿ ಕೇವಲ 15(ಶೇ.0.5) ಮಾತ್ರ ನಿರ್ಮಿಸಲಾಗಿದೆ. ಈವರೆಗೆ 21993 ಗ್ರಾಮಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು, 20 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ’ ಎಂದು ಕೇಂದ್ರ ಸಚಿವರು ತಿಳಿಸಿದರು.

‘ವಿಜಯಪುರ ಜಿಲ್ಲೆಯಲ್ಲಿ ಶೇ 84.27ರಷ್ಟು ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 2014ರಿಂದ ಈವರೆಗೆ 1.41 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ. 118 ಗ್ರಾಮಗಳನ್ನು ಬಯಲು ಶೌಚ ಮುಕ್ತ ಪ್ರದೇಶಗಳೆಂದು ಘೋಷಿಸಲಾಗಿದೆ’ ಎಂದು ಹೇಳಿದರು.

‘ಕೇವಲ ಶೌಚಾಲಯಗಳನ್ನು ನಿರ್ಮಿಸಿದರೆ ಸಾಲದು. ಅವುಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಪ್ರೇರೇಪಿಸಬೇಕು. ಸಾರ್ವಜನಿಕರು, ಸರ್ಕಾರೇತರ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಕರು ಜಾಗೃತಿ ಅಭಿಯಾನವನ್ನು ಇಮ್ಮಡಿಗೊಳಿಸಿ, ಎಲ್ಲರೂ ಕಡ್ಡಾಯವಾಗಿ ಶೌಚಾಲಯವನ್ನು ಬಳಕೆ ಮಾಡಬೇಕು’ ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿ ‘ಕೊಕಟನೂರ ಗ್ರಾಮದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಆದರೆ ಬಮ್ಮನಜೋಗಿ ಕೆರೆಗೆ ನೀರು ತುಂಬಲು ಇಬ್ಬರು ರೈತರು ಅಡ್ಡಿಪಡಿಸಿ ನೀರು ಹರಿಯದಂತೆ ಒಡ್ಡು ಕಟ್ಟಿದ್ದಾರೆ. ಹೀಗಾಗಿ ಇಬ್ಬರು ರೈತರ ಮನವೊಲಿಕೆಗೆ ಮುಂದಾಗಬೇಕಿದೆ. ಸ್ವಚ್ಛ ಭಾರತ ಅಭಿಯಾನ ಇದು ಪ್ರಧಾನಿ ಮೋದಿ ಯೋಜನೆಯಲ್ಲ. ಇದು ಮಹಾತ್ಮ ಗಾಂಧೀಜಿ ಕನಸು’ ಎಂದರು.

ಕೇಂದ್ರ ಸಚಿವ ಜಿಗಜಿಣಗಿ ಸೋಲಿಲ್ಲದ ಸರದಾರ ಎಂದು ಸಚಿವ ಮನಗೂಳಿ ಗುಣಗಾನ ಮಾಡಿದರು. ಇದಕ್ಕೆ ಪ್ರತಿಯಾಗಿ ಜಿಗಜಿಣಗಿ, ‘ಮಾಮಾ ಮನಗೂಳಿ’ ಎಂಬ ಸಲುಗೆಯ ಮಾತುಗಳನ್ನಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ, ಜಿ.ಪಂ. ಸಿಇಒ ವಿಕಾಸ ಸುರೋಳಕರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಜಾಕಬಿ ಮುಲ್ಲಾ, ಜಿ.ಪಂ. ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಗ್ರಾಮದ ಶಂಕ್ರಯ್ಯಸ್ವಾಮಿ ಹಿರೇಮಠ, ಮಾಜಿ ಶಾಸಕ ರಮೇಶ ಭೂಸನೂರ ಉಪಸ್ಥಿತರಿದ್ದರು.

ಕನ್ನೊಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಭುವನೇಶ್ವರಿ ಪತಿ, ಕಲಕೇರಿ ಜಿ.ಪಂ. ಸದಸ್ಯೆ ಕಲ್ಲವ್ವ ಬುಳ್ಳಾ ಪರವಾಗಿ ಅವರ ಪುತ್ರನೂ ವೇದಿಕೆಯಲ್ಲಿದ್ದರು. ಬಿಇಒ ಆರೀಫ್ ಬಿರಾದಾರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !