ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್ ಕ್ರೀಡಾಕೂಟ: ಅನುಮಾನ ಮೂಡಿಸಿದ ಸಿರಿಂಜ್‌

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌(ಎಎಫ್‌ಪಿ): ‘ಸೂಜಿ ಮುಕ್ತ’ ನೀತಿಗೆ ವಿರುದ್ಧವಾಗಿ ಕಾಮನ್‌ ವೆಲ್ತ್‌ ಕೂಟದ ಕ್ರೀಡಾಗ್ರಾಮದಲ್ಲಿ ಪತ್ತೆಯಾದ ಚುಚ್ಚುಮದ್ದಿನ ಸಿರಿಂಜ್‌ ಭಾರತ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಥ್ಲೀಟ್ ಒಬ್ಬರು ಬಳಸಿದ್ದಾರೆ ಎನ್ನಲಾದ ಸಿರಿಂಜ್‌ಗೆ ಸಂಬಂಧಿಸಿ ಕ್ರೀಡಾಕೂಟದ ಫೆಡರೇಷನ್‌ (ಸಿಜಿಎಫ್‌) ನೋಟಿಸ್‌ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಪುರುಷ ಬಾಕ್ಸಿಂಗ್ ತಂಡದ ಕೋಚ್‌ ಸಾಂಟಿಯಾಗೊ ನೀವಾ ‘ಭಾರತದ ಯಾವ ಅಥ್ಲೀಟ್ ಕೂಡ ಉದ್ದೀಪನ ಮದ್ದು ಸೇವಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಬಾಕ್ಸಿಂಗ್ ತಂಡದ ಸದಸ್ಯರೊಬ್ಬರಿಗೆ ಅನಾರೋಗ್ಯ ಕಾಡಿದ್ದರಿಂದ ವಿಟಮಿನ್‌ ನೀಡಿದ್ದು ಬಿಟ್ಟರೆ ಬೇರೆ ಯಾವುದಕ್ಕೂ ಸಿರಿಂಜ್‌ ಬಳಸಿಲ್ಲ’ ಎಂದು ಅವರು ವಿವರಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬನಿಗೆ ಕ್ರೀಡಾ ಗ್ರಾಮದಲ್ಲಿ ಸಿರಿಂಜ್‌ ಪತ್ತೆಯಾಗಿತ್ತು. ಇದನ್ನು ಆತ ಅಧಿಕಾರಿಗಳ ಗಮನಕ್ಕೆ ತಂದಿದ್ದ. ತಕ್ಷಣ ಎಚ್ಚೆತ್ತುಕೊಂಡ ಸಿಜಿಎಫ್‌ ವಿಚಾರಣೆ ಆರಂಭಿಸಿತ್ತು. ಭಾರತ ತಂಡದ ಮೇಲಿನ ಆರೋಪಕ್ಕೆ ಸಂಬಂಧಿಸಿ ವ್ಯವಸ್ಥಾಪಕ ಅಜಯ್‌ ನಾರಂಗ್‌ ಶನಿವಾರವೇ ಪ್ರತಿಕ್ರಿಯೆ ನೀಡಿದ್ದರು.

‘ಈ ಸೂಜಿಗಳಿಗೂ ನಮಗೂ ಸಂಬಂಧವಿಲ್ಲ. ನಮ್ಮ ಅಥ್ಲೀಟ್‌ಗಳು ಉಳಿದುಕೊಂಡಿದ್ದ ಕೊಠಡಿಯ ಹೊರಗೆ ಬಾಟ್ಲಿಯೊಂದರದಲ್ಲಿ ಸಿರಿಂಜ್‌ ಪತ್ತೆಯಾಗಿತ್ತು’ ಎಂದು ಅವರು ತಿಳಿಸಿದ್ದರು.

ಲಾರೆಲ್‌ ಹಬಾರ್ಡ್‌ಗೆ ಬೆಂಬಲ: ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ನ್ಯೂಜಿಲೆಂಡ್‌ನ ಲಿಂಗಪರಿವರ್ತಿತ ವೇಟ್‌ಲಿಫ್ಟರ್‌ ಲಾರೆಲ್ ಹಬಾರ್ಡ್ ಅವರಿಗೆ ಪೂರ್ಣ ಬೆಂಬಲ ನೀಡುವು ದಾಗಿ ಸಂಘಟಕರು ಭರವಸೆ ನೀಡಿದ್ದಾರೆ.

ಮಹಿಳೆಯರ 90 ಕೆಜಿ ಮೇಲಿನವರ ವಿಭಾಗದಲ್ಲಿ ಹಬಾರ್ಡ್ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ವೇಟ್‌ಲಿಫ್ಟಿಂಗ್‌ ತಂಡದ ಕೋಚ್‌ ಮೈಕ್ ಕೀಲನ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಜಾರಿಯಲ್ಲಿರುವ ನಿಯಮಗಳ ಪ್ರಕಾರ ಹುಬಾರ್ಡ್‌ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುವುದು ಖಚಿತ. ಅವರಿಗೆ ಈ ವಿಭಾಗದಲ್ಲಿ ಸ್ಪರ್ಧಿಸುವ ಹಕ್ಕು ಇದೆ’ ಎಂದು ಕೂಟದ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಗ್ರವನ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಗವಿನ್‌ ಎಂಬ ಹೆಸರು ಇದ್ದ ಹುಬಾರ್ಡ್‌ ರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡ ನಂತರ, 30ನೇ ವರ್ಷದಲ್ಲಿ ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದರು.

ಪರೀಕ್ಷೆಯ ನಂತರ ಅವರಿಗೆ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.

ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಎರಡು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ವೇಟ್‌ಲಿಫ್ಟಿಂಗ್‌ನಲ್ಲಿ ನ್ಯೂಜಿಲೆಂಡ್‌ಗೆ ಮೊದಲ ಪದಕ ಗಳಿಸಿಕೊಟ್ಟ ಅಥ್ಲೀಟ್‌ ಎಂಬ ಖ್ಯಾತಿ ಗಳಿಸಿದ್ದರು.

ದಿನಕ್ಕೆ ಮೂರು ಕಾಂಡೋಮ್‌!

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ ಮತ್ತು ಅಧಿಕಾರಿಗಳಿಗೆ ದಿನಕ್ಕೆ ಮೂರರಂತೆ ಕಾಂಡೋಮ್ ಸಿಗಲಿದೆ. ಇದಕ್ಕಾಗಿ ಈಗಾಗಲೇ 2,25,000 ಕಾಂಡೋಮ್‌ಗಳನ್ನು ಕ್ರೀಡಾ ಗ್ರಾಮಕ್ಕೆ ತೆಗೆದುಕೊಂಡು ಬರಲಾಗಿದೆ.

ಬುಧವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಾವಿರಾರು ಮಂದಿ ಈಗಾಗಲೇ ಕ್ರೀಡಾಗ್ರಾಮಕ್ಕೆ ಬಂದಿದ್ದಾರೆ. ಒಟ್ಟು 6,600 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದು ಅವರೊಂದಿಗೆ ಅಧಿಕಾರಿಗಳು ಕೂಡ ಇರುತ್ತಾರೆ. ಇವರೆಲ್ಲರ ಲೈಂಗಿಕ ಆರೋಗ್ಯವನ್ನು ಕಾಪಾಡಲು ಸಂಘಟಕರು ಈ ಕ್ರಮ ಕೈಗೊಂಡಿದ್ದಾರೆ.

ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 1,10,000 ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು. ಚಳಿಗಾಲದ ಒಲಿಂಪಿಕ್ಸ್ ಇತಿಹಾಸದಲ್ಲಿ ಇದು ದಾಖಲೆಯ ಸಂಖ್ಯೆಯಾಗಿತ್ತು. ರಿಯೊ ಒಲಿಂಪಿಕ್ಸ್‌ನಲ್ಲಿ 4,50,000 ಕಾಂಡೋಮ್ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT