ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಹೆಚ್ಚಿಸಲು ಜನಪ್ರತಿನಿಧಿಗಳು ಮುಂದಾಗಿ: ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ

Last Updated 13 ಏಪ್ರಿಲ್ 2020, 14:00 IST
ಅಕ್ಷರ ಗಾತ್ರ

ಸಾಗರ: ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯ ಸರ್ಕಾರ ರಾಜ್ಯದ 30 ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಿಸಲು ನದಿಗಳ ಪುನಶ್ಚೇತನ ಯೋಜನೆ ರೂಪಿಸಿದೆ. ಇದರ ಯಶಸ್ಸಿಗಾಗಿ ಎಲ್ಲಾ ಹಂತದ ಜನಪ್ರತಿನಿಧಿಗಳು ಫೀಲ್ಡ್‌ಗೆ ಇಳಿಯಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿನ ಎಲ್‌.ಬಿ. ಮತ್ತು ಎಸ್‌.ಬಿ.ಎಸ್. ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ನದಿಗಳ ಪುನಶ್ಚೇತನ ಕುರಿತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ. ಮೇ 1ರಿಂದ ಕೆಲಸ ಆರಂಭವಾಗಲಿದ್ದು, ಕಾಮಗಾರಿಯಲ್ಲಿ ಪಾಲ್ಗೊಂಡವರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗೆ ಕೂಲಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾರೇ ಇಷ್ಟಪಟ್ಟರೂ ಅಂತಹವರಿಗೆ ಜಾಬ್ ಕಾರ್ಡ್ ವಿತರಿಸಲಾಗುವುದು. ಕೂಲಿ ಹಣವನ್ನು ದಿನಕ್ಕೆ ₹ 275 ಕ್ಕೆ ನಿಗದಿಪಡಿಸಲಾಗಿದೆ. ಬಾಕಿ ಇರುವ ಕೂಲಿ ಹಣ ಪಾವತಿಗೆ ಕೇಂದ್ರ ಸರ್ಕಾರ ₹ 1,860 ಕೋಟಿ ಬಿಡುಗಡೆ ಮಾಡಿದೆ ಎಂದರು.

ಶಾಸಕ ಎಚ್. ಹಾಲಪ್ಪ ಹರತಾಳು, ‘ಈ ಹಿಂದೆ ಜನರಿಗೆ ಆಹಾರ ಪೂರೈಸುವುದೇ ಆದ್ಯತೆಯ ವಿಷಯವಾಗಿತ್ತು. ಹೀಗಾಗಿ ಪರಿಸರಕ್ಕೆ ಪೂರಕವಲ್ಲದ ಹಲವು ಯೋಜನೆಗಳನ್ನು ರೂಪಿಸಲಾಗಿತ್ತು. ಬದಲಾದ ಸನ್ನಿವೇಶದಲ್ಲಿ ನಮ್ಮ ಯೋಜನೆಗಳನ್ನು ಪುನರ್ ರೂಪಿಸಬೇಕಾದ ಅಗತ್ಯ ಎದುರಾಗಿದೆ’ ಎಂದು ಪ್ರತಿಪಾದಿಸಿದರು.

ಸಂಪನ್ಮೂಲ ವ್ಯಕ್ತಿ ಆರ್ಟ್ ಆಫ್ ಲೀವಿಂಗ್‌ನ ನಾಗರಾಜ್ ಗಂಗೋಡಿ, ‘ನಮಗೆ ಲಭ್ಯವಿರುವ ನೀರಿನ ಪೈಕಿ ಶೇ 96.5ರಷ್ಟು ಇರುವುದು ಅಂತರ್ಜಲದ ರೂಪದಲ್ಲಿ. ಈ ಹಿಂದೆ ಸಮೃದ್ಧವಾದ ಕಾಡು ಇದ್ದ ಕಾರಣ ಶೇ 16ರಿಂದ 18ರಷ್ಟು ನೀರು ಅಂತರ್ಜಲಕ್ಕೆ ಹೋಗುತ್ತಿತ್ತು. ಈಗ ಅದರ ಪ್ರಮಾಣ ಶೇ 6ರಿಂದ 8ಕ್ಕೆ ಇಳಿದಿದೆ. ಈ ಪ್ರಮಾಣವನ್ನು ಹೆಚ್ಚಿಸುವ ಅನಿವಾರ್ಯತೆ ಇದೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ್ ಬರದವಳ್ಳಿ, ಹೊಸನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೀರೇಶ್ ಅಲವಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ. ಎಲ್‌. ವೈಶಾಲಿ, ಸದಸ್ಯರಾದ ಭೀಮನೇರಿ ಶಿವಪ್ಪ, ಅನಿತಾಕುಮಾರಿ, ಶ್ವೇತಾ ಬಂಡಿ, ರಾಜಶೇಖರ ಗಾಳಿಪುರ, ಕಲಗೋಡು ರತ್ನಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT