ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಸರ್ಕಾರ ಬದ್ಧ: ಡಿ.ಕೆ. ಶಿವಕುಮಾರ್

ಜಿಲ್ಲಾ ಕ್ರೀಡಾಂಗಣದಲ್ಲಿ 70ನೇ ಗಣರಾಜ್ಯೋತ್ಸವ ಸಂಭ್ರಮ
Last Updated 26 ಜನವರಿ 2019, 13:42 IST
ಅಕ್ಷರ ಗಾತ್ರ

ರಾಮನಗರ: ಎಲ್ಲ ಅಡೆತಡೆಗಳನ್ನು ನಿವಾರಿಸಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 70ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಸಂಬಂಧ ₨9ಸಾವಿರ ಕೋಟಿ ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಇದರಿಂದ 66 ಟಿಎಂಟಿಯಷ್ಟು ನೀರು ಸಂಗ್ರಹಿಸಿ ಉಪಯೋಗಿಸಲು ಸಾಧ್ಯವಾಗಲಿದೆ. ಸುಪ್ರೀಂ ಕೋರ್ಟ್‌ ಸಹ ಇದಕ್ಕೆ ಹಸಿರು ನಿಶಾನೆ ತೋರಿದೆ. ಇದು ನಮಗೆ ಜಿಲ್ಲೆಯ ಜನರ ಋಣ ತೀರಿಸಲು ಇರುವ ಅವಕಾಶವಾಗಿದೆ’ ಎಂದು ಅವರು ಹೇಳಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಸ್ತಿತ್ವಕ್ಕೆ ಬಂದು 8 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿಯೇ ಗಮನಾರ್ಹ ಸಾಧನೆ ಮಾಡಲಾಗಿದೆ. ನರೇಗಾ ಕಾಮಗಾರಿಯಲ್ಲಿ ರಾಮನಗರ ಜಿಲ್ಲೆಯು ಉತ್ತಮ ಸಾಧನೆ ಮಾಡಿದ್ದು, ಚೆಕ್‌ಡ್ಯಾಮ್ ನಿರ್ಮಾಣದಲ್ಲಿ ರಾಜ್ಯಕ್ಕೇ ಮಾದರಿ ಆಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸುವ ಪ್ರತಿ ಜಿಲ್ಲೆಯ 2 ಗ್ರಾ.ಪಂ.ಗಳಿಗೆ ತಲಾ ₨1 ಕೋಟಿ ಬಹುಮಾನ ಘೋಷಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಹಲವು ಏತ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವ ಕಾರ್ಯವು ಪ್ರಗತಿಯಲ್ಲಿದೆ. ಸತ್ತೆಗಾಲದ ಬಳಿ ಕಾವೇರಿ ನದಿಯಿಂದ ನೀರನ್ನು ತಿರುವುಗೊಳಿಸಿ ಇಗ್ಗಲೂರು ಬ್ಯಾರೇಜ್‌ಗೆ ತುಂಬಿಸಿ ಜಿಲ್ಲೆಗೆ ಕುಡಿಯುವ ನೀರು ಪೂರೈಸುವ ₨540 ಕೋಟಿ ವೆಚ್ಚದ ಯೋಜನೆಯು ಟೆಂಡರ್‌ ಹಂತದಲ್ಲಿ ಇದೆ. ಅಂತೆಯೇ ಕೆಂಗೇರಿ ಹಾಗೂ ದೊಡ್ಡಬೆಲೆ ತ್ಯಾಜ್ಯನೀರಿನ ಘಟಕಗಳಿಂದ ಹಾರೋಹಳ್ಳಿ ಹಾಗೂ ಬಿಡದಿ ಹೋಬಳಿಯ ತಲಾ 75 ಕೆರೆಗಳಿಗೆ ಕೊಳವೆ ಮೂಲಕ ನೀರು ತುಂಬಿಸಲು ₨146 ಕೋಟಿ ವೆಚ್ಚದ ಯೋಜನೆಗೆ ಟೆಂಡರ್ ಕರೆಯಲಾಗಿದೆ’ ಎಂದು ವಿವರಿಸಿದರು.

‘ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆಯಿಂದ ಜಿಲ್ಲೆಯ 37,263 ರೈತರ 173.82 ಕೋಟಿ ಸಾಲ ಮನ್ನಾ ಆಗಲಿದೆ. ರಾಜ್ಯ ಸಚಿವ ಸಂಪುಟ ಉಪ ಸಮಿತಿಯು ಈಚೆಗಷ್ಟೇ ಜಿಲ್ಲೆಯಲ್ಲಿ ಬರ ಅಧ್ಯಯನ ಕೈಗೊಂಡಿದ್ದು, ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಗೆ ಕೊರತೆ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದರು.

‘ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ25 ಎಕರೆ ಜಾಗ ಪಡೆಯಲಾಗಿದ್ದು, ಇದಕ್ಕಾಗಿ ₨600 ಕೋಟಿ ವ್ಯಯಿಸಲಾಗುವುದು. ರಾಮನಗರದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಡಿಸೆಂಬರ್‌ ವೇಳೆಗೆ ಅಂತ್ಯಗೊಳ್ಳಲಿದೆ’ ಎಂದರು. ಜಿಲ್ಲೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳ ಕುರಿತು ಅವರು ವಿವರ ನೀಡಿದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯ ತಾಂತ್ರಿಕ ಸಹಾಯಕ ಬಿ.ಜಿ. ಉಮೇಶ್‌, ರೇಷ್ಮೆ ಇಲಾಖೆ ಉಪನಿರ್ದೇಶಕ ಮಹೇಂದ್ರಕುಮಾರ್, ರೇಷ್ಮೆ ಮಾರುಕಟ್ಟೆ ಅಧಿಕಾರಿ ಪುಟ್ಟಸ್ವಾಮಿ, ಶ್ರೀನಿವಾಸ ಮೂರ್ತಿ, ಆರೋಗ್ಯ ಸಹಾಯಕ ಕೃಷ್ಣೇಗೌಡ, ಜಿಲ್ಲಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಹಾಯಕ ವೈ.ಎಸ್. ದೇವಲಿಂಗ ಅವರಿಗೆ ಜಿಲ್ಲಾಡಳಿತದಿಂದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ. ಎಸ್‌.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್‌. ನಾಗರಾಜು, ಉಪಾಧ್ಯಕ್ಷೆ ವೀಣಾಕುಮಾರಿ, ತಾ.ಪಂ. ಅಧ್ಯಕ್ಷ ಜಿ.ಎನ್. ನಟರಾಜು, ಉಪಾಧ್ಯಕ್ಷೆ ರಮಾಮಣಿ, ನಗರಸಭೆ ಅಧ್ಯಕ್ಷೆ ರತ್ನಮ್ಮ ಪಾಪಣ್ಣ, ಉಪಾಧ್ಯಕ್ಷೆ ಮಂಗಳಾ ಶಂಭುಗೌಡ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್, ಎಸ್ಪಿ ಬಿ. ರಮೇಶ್ ಇದ್ದರು.

ಆಕರ್ಷಕ ಪಥ ಸಂಚಲನ
ಪೊಲೀಸರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 23 ತಂಡಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿದವು.

ನೇತಾಜಿ ಪಾಪ್ಯುಲರ್ ಸೇವಾದಳ ತಂಡ, ರಾಮನಗರದ ಬಾಲಕರ ಸ.ಪ.ಪೂ. ಕಾಲೇಜು ತಂಡ ಹಾಗೂ ಹೋಲಿ ಕ್ರೆಸೆಂಟ್‌ ಶಾಲೆ ತಂಡಗಳು ಕ್ರಮವಾಗಿ ಮೊದಲ ಮೂರು ಬಹುಮಾನ ಸೆಳೆದವು.

ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರಲ್ಲಿ ದೇಶಭಕ್ತಿಯನ್ನು ಉದ್ದೀಪನಗೊಳಿಸಿದವು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮವನ್ನು ವೀಕ್ಷಿಸಿದರು.

ಮಾಯಗಾನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಥಮ, ಮರಿಯಂ ಇಂಗ್ಲಿಷ್ ಮಾಧ್ಯಮ ಶಾಲೆ ದ್ವಿತೀಯ ಹಾಗೂ ಬಿಡದಿಯ ಜ್ಞಾನವಿಕಾಸ ಶಾಲೆ ತಂಡವು ತೃತೀಯ ಬಹುಮಾನ ತನ್ನದಾಗಿಸಿಕೊಂಡಿತು.

*ರಾಜೀವ್‌ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಏನೇ ತೊಡಕು ಬಂದರೂ ಕ್ಯಾಂಪಸ್ ಆರಂಭ ಶತಸಿದ್ಧ
–ಡಿ.ಕೆ. ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT