ಅಧ್ಯಯನಶೀಲ ಯುವ ಬರಹಗಾರರ ಅಗತ್ಯ

ಬುಧವಾರ, ಏಪ್ರಿಲ್ 24, 2019
31 °C
ಸಹ್ಯಾದ್ರಿ ಸಾಹಿತ್ಯ ಸಂಭ್ರಮಕ್ಕೆ ಚಾಲನೆ ನೀಡಿದ ಡಿ.ಬಿ.ಶಂಕರಪ್ಪ

ಅಧ್ಯಯನಶೀಲ ಯುವ ಬರಹಗಾರರ ಅಗತ್ಯ

Published:
Updated:
Prajavani

ಹೊಸನಗರ: ಇಂದು ಸಾಹಿತ್ಯ ಲೋಕ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ಅಧ್ಯಯನಶೀಲ ಯುವ ಬರಹಗಾರರ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿದನೂರು ನಗರದ ಸಾಹಿತಿ ಅಂಬ್ರಯ್ಯ ಮಠ ಅವರ ಮನೆಯಂಗಳದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಹ್ಯಾದ್ರಿ ಸಾಹಿತ್ಯ ಸಂಭ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ತಾರತಮ್ಯವಿಲ್ಲದೆ ಮೂಲೆಮೂಲೆಗಳಲ್ಲಿರುವ ಯುವ ಬರಹಗಾರರನ್ನು ಗುರುತಿಸಿ ಅವರಿಗೆ ಅವಕಾಶ ನೀಡುವುದಕ್ಕಾಗಿಯೇ ಸಹ್ಯಾದ್ರಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.

ಕೃತಿಗಳ ಅವಲೋಕನ:

ಗೋಷ್ಠಿ ಎರಡರಲ್ಲಿ ‘ತಾಲ್ಲೂಕಿನ ಬರಹಗಾರರ ಕೃತಿಗಳ ಅವಲೋಕನ’ ವಿಷಯದಲ್ಲಿ ಕವನ ಸಂಕಲನ ಕುರಿತಾಗಿ ಕೊಡಚಾದ್ರಿ ಕಾಲೇಜಿನ ಪ್ರಾಧ್ಯಾಪಕಿ ವಸುಧ ಚೈತನ್ಯ, 'ಮಲೆನಾಡ ನಡುಮನೆ ಎಂದೇ ಕರೆಸಿಕೊಳ್ಳುವ ಹೊಸನಗರದಲ್ಲಿ ಕವಿಗಳಿಗೆ ಬರವಿಲ್ಲ. ತಮ್ಮದೇ ವಿಶಿಷ್ಠ ಅನುಭವದ ಮೂಸೆ ಹೊರಬಂದ ಕವನಸಂಕಲನಗಳಿಗೆ ಲೆಕ್ಕವಿಲ್ಲ. ಆದರೆ ಬೆಳಕಿಗೆ ಬಾರದೆ ಕಮರಿಹೋಗುತ್ತಿರುವ ಕವಿಮನಸ್ಸು ಗಳನ್ನು ಒಟ್ಟುಗೂಡಿಸಬೇಕಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಶಾಂತರಾಮ ಪ್ರಭು, 'ಬೇರೆ ತಾಲ್ಲೂಕು ಜಿಲ್ಲೆಗಳಿಗೆ ಹೋಲಿಸಿದರೆ ಹೊಸನಗರ ತಾಲ್ಲೂಕಿನಲ್ಲಿ ಬಂದ ಸಾಹಿತ್ಯ ಕೃತಿಗಳು, ಕಾದಂಬರಿಗಳು ಕಡಿಮೆ. ಆದರೆ ಬಂದ ಕೆಲವು ಸಾಹಿತ್ಯಗಳಾದರೂ ಕೂಡ ಗಟ್ಟಿ ಸಾಹಿತ್ಯದ ಕೃತಿಗಳು’ ಎಂದು ಬಣ್ಣಿಸಿದರು.

ಸಾಹಿತಿ ಗಣೇಶಮೂರ್ತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳು ಮತದಾನದ ಜಾಗೃತಿ ಕವಿತೆಗಳನ್ನು ಓದುವ ಮೂಲಕ ಗಮನ ಸೆಳೆದರು.

ಸಾಹಿತ್ಯಸಂಭ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಇಲಿಯಾಸ್ ವಹಿಸಿದ್ದರು.

ಪ್ರಮುಖರಾದ ಉಳ್ಳಾಗದ್ದೆ ದೇವೇಂದ್ರ, ಎಡ್ವರ್ಡ್ ಡಿಸೋಜ, ಎಂ.ಎನ್. ಜಗದೀಶ್, ರತ್ನಾ ಜಗದೀಶ್, ನರೇಂದ್ರ ಪೈ, ಸತೀಶ್ ಹಿಲ್ಕುಂಜಿ, ಸುನಿಲ್ ಉಡುಪ, ರಾಮಕುಮಾರ್ ಶೆಣೈ, ಶಾರದಗೋಖಲೆ ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ನಗರ ಹೋಬಳಿ ಕಸಾಪ ಅಧ್ಯಕ್ಷ ನಾರಾಯಣ ಕಾಮತ್ ವಂದಿಸಿದರು. ಶ್ರೀಧರಶೆಟ್ಟಿ ಮತ್ತು ಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ಸಾಕಮ್ಮ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !