ಬುಧವಾರ, ಡಿಸೆಂಬರ್ 11, 2019
27 °C
ಭಕ್ತರ ಆರಾಧನಾ ಕೇಂದ್ರ; ಪ್ರವಾಸೋದ್ಯಮ ತಾಣವಾಗಿಯೂ ಹೆಸರುವಾಸಿ

ರೇವಣಸಿದ್ಧೇಶ್ವರರ ನೆಲೆ ಈ ಏಕಶಿಲಾ ಬೆಟ್ಟ

ಎಸ್‌. ರುದ್ರೇಶ್ವರ Updated:

ಅಕ್ಷರ ಗಾತ್ರ : | |

Deccan Herald

ಕೈಲಾಂಚ (ರಾಮನಗರ): ಜಿಲ್ಲೆಯಲ್ಲಿ ಪೌರಾಣಿಕಾಗಿ, ಐತಿಹಾಸಿಕವಾಗಿ ಹಾಗೂ ಧಾರ್ಮಿಕಾಗಿ ಮಹತ್ವ ಪಡೆದ ಹಲವು ಸ್ಥಳಗಳಿವೆ. ಇಂತಹ ಸ್ಥಳಗಳಲ್ಲಿ ಇಲ್ಲಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ರೇವಣಸಿದ್ಧೇಶ್ವರ ಬೆಟ್ಟವೂ ಒಂದು.

ರಾಮನಗರದಿಂದ ಆಗ್ನೇಯಕ್ಕೆ ಸುಮಾರು ಹದಿನೈದು ಕಿಲೋ ಮೀಟರ್‌ಗಳಷ್ಟು ದೂರದಲ್ಲಿ ಈ ಬೆಟ್ಟವಿದೆ. ಈ ಸ್ಥಳದಲ್ಲಿ ರೇವಣಸಿದ್ಧರೆಂಬ ಯತೀಶ್ವರರು ಅನೇಕ ಕಾಲ ಯೋಗಾನುಷ್ಠಾನದಲ್ಲಿದ್ದು, ಈ ಗಿರಿಯನ್ನು ಸಿದ್ಧಗಿರಿಯನ್ನಾಗಿ ಮಾಡಿದುದರಿಂದ ಈ ಕ್ಷೇತ್ರಕ್ಕೆ ‘ರೇವಣಸಿದ್ಧೇಶ್ವರ ಬೆಟ್ಟ’ ಎಂದು ಹೆಸರು ಬಂದಿರುವುದಾಗಿ ತಿಳಿದು ಬರುತ್ತದೆ.

ಈ ಬೆಟ್ಟದ ಬುಡದಲ್ಲಿರುವ ತೇರುಬೀದಿಯಲ್ಲಿ ರೇಣುಕಾಂಬೆಯ ದೇಗುಲವಿದೆ. ಮಹಾಶಿವಭಕ್ತೆಯಾಗಿದ್ದ ರೇಣುಕಾಂಬೆ ರೇವಣಸಿದ್ಧೇಶ್ವರರ ಅನುಗ್ರಹಕ್ಕಾಗಿ ಅವರ ಆದೇಶದಂತೆ ಇಲ್ಲಿ ನೆಲೆಸಿದಳೆಂದು ಹೇಳುತ್ತಾರೆ. ಈಕೆಯನ್ನು ‘ರೇವಮ್ಮ’ ಎಂತಲೂ ಕರೆಯುತ್ತಾರೆ.

ಬೆಟ್ಟದ ಮುಖ್ಯಭಾಗದಲ್ಲಿ ಗುಹಾಂತರ ದೇವಾಲಯವಿದ್ದು, ದೇವಾಲಯದಲ್ಲಿ ಸುಮಾರು ಅರ್ಧ ಅಡಿಯಷ್ಟು ಎತ್ತರದ ಉದ್ಭವವಾದದ್ದೆಂದು ಹೇಳಲಾಗುವ ರೇವಣಸಿದ್ದೇಶ್ವರರ ಶಿಲಾಲಿಂಗವಿದೆ. ದೇವಸ್ಥಾನದ ಪಕ್ಕದಲ್ಲಿ ನೀರಿನ ದೊಣೆ ಇದ್ದು, ಇದರಲ್ಲಿ ಎಲ್ಲಾ ಕಾಲದಲ್ಲಿ ನೀರಿರುತ್ತದೆ ಎಂದು ಪ್ರಮಾಣಿತ ಸತ್ಯವಾಗಿಯೂ ಕಂಡು ಬರುತ್ತದೆ ಎನ್ನುತ್ತಾರೆ ಸಾಹಿತಿ ಡಾ.ಎಲ್.ಸಿ. ರಾಜು.

ಬೆಟ್ಟ ಹತ್ತುವ ಪ್ರಾರಂಭದಲ್ಲಿ ಎಡದ ಕಡೆ ಗಣಪತಿ ಮತ್ತು ಬಲದ ಕಡೆ ರೇವಣಸಿದ್ಧೇಶ್ವರರ ಪಾದಗಳಿವೆ. ಕೆಲವು ಮೆಟ್ಟಿಲುಗಳನ್ನು ಹತ್ತಿದರೆ ಬಲಭಾಗದ ಬಂಡೆಯ ಮೇಲೆ ರಾಜನೊಬ್ಬನ ವಿಗ್ರಹವಿದೆ. ರೇವಣಸಿದ್ಧೇಶ್ವರರ ಪರಮಭಕ್ತನಾದ ತೆಂಗಿನಕಲ್ಲು ರಾಜನ ವಿಗ್ರಹವೆಂದು ಇದನ್ನು ಗುರುತಿಸಲಾಗುತ್ತಿದೆ.

ರೇವಣಸಿದ್ಧರ ಅಪೇಕ್ಷೆಯ ಮೇರೆಗೆ ಬೆಟ್ಟಕ್ಕೆ ಮೆಟ್ಟಿಲುಗಳು ಮತ್ತು ದೇವಾಲಯಗಳನ್ನು ಕಟ್ಟಿಸಿಕೊಟ್ಟವನು ಈತನೇ ಎಂದು ಹೇಳಲಾಗುತ್ತದೆ. ತೆಂಗಿನಕಲ್ಲಿನ ರಾಜನ ವಿಗ್ರಹಕ್ಕೂ ಈಗ ಪೂಜೆ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮಹಾಭಾರತ ಕಾಲದ ನಂಟೂ ಈ ಬೆಟ್ಟಕ್ಕಿರುವಂತೆ ತೋರುತ್ತದೆ. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಈ ಪ್ರದೇಶದಲ್ಲೂ ಕೆಲಕಾಲ ವಾಸ ಮಾಡಿದ್ದರಂತೆ. ಆ ಸಂದರ್ಭದಲ್ಲಿ ಭೀಮನು ಬೆಟ್ಟದ ಮೇಲೆ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸಿದುದರಿಂದ ಈ ಬೆಟ್ಟಕ್ಕೆ ‘ಭೀಮೇಶ್ವರ ಬೆಟ್ಟ’ ಎಂದ ಹೆಸರೂ ಸಹ ಬಂತೆಂಬ ಪ್ರತೀತಿ ಇದೆ ಎಂದರು.

ರೇವಣ ಸಿದ್ಧೇಶ್ವರರ ನೆಲೆ: ರಾಜದಾದ್ಯಂತ ಇರುವ ರೇವಣಸಿದ್ಧೇಶ್ವರರ 85 ನೆಲೆಗಳಲ್ಲಿ ಅವ್ವೇರಹಳ್ಳಿ ಗ್ರಾಮದ ವ್ಯಾಪ್ತಿಗೆ ಬರುವ ರೇವಣಸಿದ್ದೇಶ್ವರರ ನೆಲೆ ಪ್ರಮುಖವಾದುದು ಎನ್ನುತ್ತಾರೆ ಸಂಶೋಧಕ ಡಾ. ಚಿಕ್ಕಚನ್ನಯ್ಯ.

ರೇವಣಸಿದ್ಧರು, ಬಸವ, ಅಲ್ಲಮ, ಸಿದ್ಧರಾಮರ ಸಮಕಾಲೀನರೆಂಬ ಅಭಿಪ್ರಾಯವಿದ್ದು, ಕ್ರಿ.ಶ. 1101ರಲ್ಲಿ ಆಂಧ್ರಪ್ರದೇಶದ ಕೊಲ್ಲಿಪಾಕಿ ಎಂಬ ಸ್ಥಳದಲ್ಲಿ ಜನಿಸಿ ತಮ್ಮ ಅಂತಿಮ ಕಾಲದಲ್ಲಿ ದಕ್ಷಿಣ ಕರ್ನಾಟಕದ ಈ ಬೆಟ್ಟಕ್ಕೆ ಬಂದು ಕ್ರಿ.ಶ. 1212ರಲ್ಲಿ ಸಜೀವ ಐಕ್ಯರಾದರೆಂಬ ಪ್ರತೀತಿ ಇದೆ ಎಂದು ತಿಳಿಸಿದರು.

ಕ್ರಿ.ಶ. 1193ರ ಶಾಸನದಲ್ಲಿ ರೇವಣಸಿದ್ಧರು ಇಲ್ಲಿಗೆ ಆಗಮಿಸಿ ತಪಸ್ಸು ಮಾಡಿದರು ಎಂಬ ಮಾಹಿತಿ ಸಿಗುತ್ತದೆ. ದಕ್ಷಿಣ ಭಾರತದಲ್ಲಿ ರೇವಣಸಿದ್ದೇಶ್ವರರ ಆರಾಧನಾ ನೆಲಗಳಿವೆ. ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರಗಳಲ್ಲೂ ರೇವಣಸಿದ್ಧರ ನೆಲೆಗಳಿವೆ ಎಂದು ತಿಳಿಸಿದರು.

ಈ ಸ್ಥಳವು ಪೌರಾಣಿಕವಾಗಿ ರೇವಣಸಿದ್ಧರು 1400 ವರ್ಷಗಳ ಹಿಂದೆ ಬಂದಿದ್ದರೆಂದು 700 ವರ್ಷಗಳು ಇಲ್ಲಿಯೇ ತಪಸ್ಸಿಗೆ ಕುಳಿತು ಲಿಂಗೈಕ್ಯರಾದರೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಜನಪದರು ರೇವಣಸಿದ್ಧರನ್ನು ‘ದೊಡ್ಡಯ್ಯ’ ಎಂದು ಅವರ ಮಗ ರುದ್ರಮುನಿಯನ್ನು ‘ಚಿಕ್ಕಯ್ಯ’ ಎಂದು ಕರೆಯುವುದು ಪ್ರಚಲಿತವಾಗಿದೆ ಎಂದು ಅವರು ತಿಳಿಸಿದರು.

ಇಲ್ಲಿನ ರೇಣುಕಾಂಭ ರೇವಣಸಿದ್ಧರ ಪರಮಭಕ್ತೆಯಾಗಿದ್ದಳು. ಈಕೆಯ ತಾಯಿ ಗುನ್ನೂರಿನ ಮಾಯಾದೇವಿ ಎಂಬ ನಂಬಿಕೆ ಇದೆ. ರೇವಣಸಿದ್ಧರ ಜತೆಯಲ್ಲಿ ಕೊಲ್ಲಿಪಾಕಿಯಿಂದ ಬಂದು ಇಲ್ಲಿಗೆ ನೆಲೆಸಿದರು. ರೇಣುಕಾಂಬೆಯನ್ನು ‘ತೇರಮ್ಮ’ ಎಂತಲೂ ಇಲ್ಲಿನವರು ಕರೆಯುತ್ತಾರೆ ಎಂದರು.

ಅವ್ವೇರಹಳ್ಳಿಯ ಬೆಟ್ಟದಲ್ಲಿರುವ ಶಾಸನದ ಉಲ್ಲೇಖದನ್ವಯ ಇಲ್ಲಿನ ಭೀಮೇಶ್ವರ ದೇವಾಲಯವನ್ನು ಸ್ಥಾನಿಕ ಚನ್ನಬಸಪ್ಪನ ಸಹೋದರ ವೀರಣ್ಣ ಚನ್ನರುದ್ರಯ್ಯ ನಿರ್ಮಿಸಿದರು. ಸಂಕಲಗರೆಯ ತಿಮ್ಮಯ್ಯ ದೇಗುಲ ನಿರ್ಮಾಣದಲ್ಲಿ ಕೈ ಜೋಡಿಸಿ ಪೂರ್ತಿಗೊಳಿಸಿದನು ಎಂದರು.

ಇಲ್ಲಿ ತಮಿಳು ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನವು ವಿಜಯನಗರ ಕಾಲಕ್ಕೆ ಸೇರಿದ್ದು, ಇದರಲ್ಲಿ ಬೆಟ್ಟಕ್ಕೆ ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಿದ ಮಾಹಿತಿ ಇದೆ ಎಂದರು.

ತೆಂಗಿನಕಲ್ಲಿನ ಪಾಳೇಗಾರ ಕಾಟಯ್ಯ ಈ ಸ್ಥಳವನ್ನು ಅಭಿವೃದ್ಧಿಗೊಳಿಸಿದ. ಅಂದಿನಿಂದ ಇಲ್ಲಿ ರೇವಣಸಿದ್ಧೇಶ್ವರರ ಜಾತ್ರೆ, ಉತ್ಸವಗಳು ತಪ್ಪದೇ ನಡೆದುಕೊಂಡು ಬರುತ್ತಿವೆ. ಇಡೀ ದಕ್ಷಿಣ ಭಾರತದ ರೇವಣಸಿದ್ಧೇಶ್ವರರ ಜಾತ್ರೆಗಳಲ್ಲಿ ಅತ್ಯಂತ ದೊಡ್ಡ ಜಾತ್ರೆ ಇಲ್ಲಿಯೇ ನಡೆಯುವುದು. ಸಾವಿರಾರು ಜನ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದು ವ್ಯಾಸ ಪೂರ್ಣಿಮೆಯ ಹಿಂದಿನ ದಿನ ಜರುಗುತ್ತದೆ ಎಂದು ಮಾಹಿತಿ ನೀಡಿದರು.

ರೇವಣಸಿದ್ಧರ ಬೆಟ್ಟ ಪ್ರಾಕೃತಿಕವಾಗಿ ದಕ್ಷಿಣ ಕರ್ನಾಟಕದ ಏಕಶಿಲಾ ಬೆಟ್ಟಗಳಲ್ಲಿ ಒಂದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು, ಪ್ರವಾಸಿಗರು, ಚಾರಣಿಗರು ಭೇಟಿ ನೀಡುತ್ತಾರೆ.

ಮತ್ತೊಂದು ‘ಧರ್ಮಸ್ಥಳ’: ಈ ಬೆಟ್ಟವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಿದರೆ ಮತ್ತೊಂದು ‘ಧರ್ಮಸ್ಥಳ’ದಂತೆ ಮತ್ತೊಂದು ಧಾರ್ಮಿಕ ಸ್ಥಳವಾಗುತ್ತದೆ ಎಂದು ತಿಳಿಸಿದರು.

1890ರಲ್ಲಿ ಸ್ಥಾಪನೆ
ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠವನ್ನು 1890ರಲ್ಲಿ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಠದ ಹಿರಿಯ ಶ್ರೀಗಳಾದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಮಠಕ್ಕೆ ಮೊದಲು ಮುದ್ದುಬಸಲಿಂಗರಾಜ ಸ್ವಾಮೀಜಿ, ಚನ್ನಬಸವಲಿಂಗರಾಜ ಸ್ವಾಮೀಜಿ, ನಂತರ ನಾನು, ಈಗ ರಾಜಶೇಖರ ಶಿವಾಚಾರ್ಯರು ಕಿರಿಯ ಸ್ವಾಮೀಜಿಯಾಗಿದ್ದಾರೆ ಎಂದರು.

25ನೇ ವರ್ಷದ ಲಕ್ಷ ದೀಪೋತ್ಸವ 7ರಂದು
ಇದೇ 7ರಂದು ಸಂಜೆ 6 ಗಂಟೆಗೆ ರೇವಣಸಿದ್ಧೇಶ್ವರ ಸ್ವಾಮಿಯವರ 25ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಠದ ಆವರಣದಲ್ಲಿ ಜಗದ್ಗರು ರೇಣುಕಾಚಾರ್ಯರ 20 ಅಡಿ ಎತ್ತರದ ಪುತ್ಥಳಿಯನ್ನು ನಿರ್ಮಿಸಲಾಗುತ್ತಿದ್ದು, 2019ರ ಜನವರಿ 26, 27ರಂದು ಅನಾವರಣಗೊಳಿಸಲಾಗುವುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)